More

    ಕರಗಾಂವ ಯೋಜನೆಗೆ 567 ಕೋಟಿ ರೂ.

    ಬೆಳಗಾವಿ/ರಾಯಬಾಗ: ದಶಕಗಳಿಂದ ನನೆಗುದಿಗೆ ಬಿದ್ದಿರುವ ಕರಗಾಂವ ಏತ ನೀರಾವರಿ ಯೋಜನೆಗೆ ತಕ್ಷಣವೇ 567 ಕೋಟಿ ರೂ. ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ರಾಯಬಾಗ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ರಾಯಬಾಗ ತಾಲೂಕಿನ ಬರಡು ಭೂಮಿಯನ್ನು ಹಸಿರು ಮಾಡುವ ಕರಗಾಂವ ಏತ ನೀರಾವರಿ ಯೋಜನೆಗೆ ಬೆಂಗಳೂರಿಗೆ ವಾಪಸ್ ಹೋದ ಕೋಡಲೆ ಮಂಜೂರಾತಿ ನೀಡಲಾಗುವುದು. ಬಾಕಿ ಉಳಿದಿರುವ ಬೆಂಡವಾಡ, ಹನುಮಾನ ಏತ ನೀರಾವರಿ ಯೋಜನೆಗಳಿಗೆ 2023 ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
    ಈಗಾಗಲೇ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಬಾಕಿ ಉಳಿದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ, ಕೆಲ ಯೋಜನೆಗಳಿಗೆ ಅನುದಾನ ಕೂಡ ಬಿಡುಗಡೆ ಮಾಡಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸರಳ-ಸಜ್ಜನ ರಾಜಕಾರಣಿ ದುರ್ಯೋಧನ ಐಹೊಳೆ ಅವರ ಆಶಯದಂತೆ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಶಾಸಕ ದುರ್ಯೋಧನ ಐಹೊಳೆ ಅವರು 2,000 ಕೋಟಿ ರೂ. ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಭಾಗದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು. ಕಾಂಗ್ರೆಸ್ ಪಕ್ಷವು ದಲಿತರು, ರೈತರು, ಬಡವರ ಹೆಸರಿನಲ್ಲಿ ಸುಳ್ಳು ಹೇಳಿಕೊಂಡು ಅಧಿಕಾರ ನಡೆಸಿದೆ. ಆದರೆ, ಅಭಿವೃದ್ಧಿ ಮಾಡಲಿಲ್ಲ. ಇದೀಗ ಬಿಜೆಪಿ ವಿರುದ್ಧ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಬಡ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ತ್ರೀ ಸಂಘಗಳನ್ನು ಸ್ಥಾಪನೆ ಮಾಡಿದ್ದಾರೆ. ಅಮೃತ ಯೋಜನೆ ವ್ಯಾಪ್ತಿಗೆ ತಂದು ಮನೆಯಲ್ಲಿ ಕುಳಿತು ಉದ್ಯೋಗ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದರು. ಸಚಿವ ಭೈರತಿ ಬಸವರಾಜ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶ್ರೀಮಂತ ಪಾಟೀಲ, ಪಿ.ರಾಜೀವ, ಮಹಾದೇವಪ್ಪ ಯಾದವಾಡ, ಸಿದ್ದು ಸವದಿ, ಎನ್. ರವಿಕುಮಾರ್, ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಬಿಜೆಪಿ ಅಧ್ಯಕ್ಷ ಡಾ. ರಾಜೇಶ ನೇರಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts