More

    ಕಪ್ಪತ್ತಗುಡ್ಡದ ಅಂಚಿನಲ್ಲಿ ಕಾಡು ಪ್ರಾಣಿಗಳ ಕಾಟ

    ಡಂಬಳ: ವನ್ಯಜೀವಿಧಾಮ ಕಪ್ಪತ್ತಗಿರಿ ಅಂಚಿನಲ್ಲಿ ಕಾಡು ಹಂದಿ ಹಾಗೂ ಮಂಗಗಳ ಹಾವಳಿ ಹೆಚ್ಚಾಗಿದ್ದು ಡಂಬಳ ಹೋಬಳಿ ವ್ಯಾಪ್ತಿಯ ಡೋಣಿ ಗ್ರಾಮದಲ್ಲಿ ಅಪಾರ ಪ್ರಮಾಣದ ಮೆಕ್ಕೆಜೋಳ, ಕಬ್ಬು, ಸೂರ್ಯಕಾಂತಿ ಬೆಳೆ ಹಾಳಾಗಿದೆ.

    ನೆರೆ ಹಾವಳಿಯಿಂದಾಗಿ ಕಳೆದ ವರ್ಷ ಡೋಣಿ ಗ್ರಾಮದಲ್ಲಿ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ನೀರು ನಿಂತು ಬೆಳೆ ನಷ್ಟವಾಗಿತ್ತು. ಇದೀಗ ಕಾಡು ಪ್ರಾಣಿಗಳಿಂದ ಮತ್ತೆ ಹಾನಿ ಅನುಭವಿಸುವಂತಾಗಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

    ಗ್ರಾಮದ ಶಂಕರಗೌಡ ಜಯಣ್ಣಗೌಡ ಅವರು ಸುಮಾರು 80 ಸಾವಿರ ರೂ. ಖರ್ಚು ಮಾಡಿ 4 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಕಾಡು ಹಂದಿಗಳ ದಾಳಿಯಿಂದ 2 ಎಕರೆ ಮೆಕ್ಕೆಜೋಳ ಹಾಳಾಗಿದೆ. ಅದೇ ಗ್ರಾಮದ ಮಂಜುನಾಥ ಪಾಟೀಲ ಅವರು 3 ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದರು. ಕಾಡು ಹಂದಿ, ಮಂಗಗಳು ದಾಳಿಮಾಡಿ 1 ಎಕರೆ ಬೆಳೆ ನಾಶಮಾಡಿವೆ.

    ಹೊಲದಲ್ಲೇ ರಾತ್ರಿ ವಾಸ್ತವ್ಯ: ರೈತರು ಕಾಡು ಹಂದಿ, ಮಂಗಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರಾತ್ರಿ ಹೊಲಗಳಲ್ಲೇ ವಾಸ್ತವ್ಯ ಹೂಡಬೇಕಾಗಿದೆ. ಮಂಗಗಳನ್ನು ಬೆದರಿಸಲು ಹೋದರೆ ಕಚ್ಚಲು ಬರುತ್ತವೆ. ಕಾಡು ಹಂದಿ, ಮಂಗಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

    ಬೆಳೆಗೆ ಪರಿಹಾರ ಸಿಗುತ್ತಿಲ್ಲ: ಡೋಣಿ ಗ್ರಾಮವು ಕಪ್ಪತ್ತಗಿರಿ ಅಂಚಿನಲ್ಲಿ ಇರುವುದರಿಂದ ಕಾಡು ಪ್ರಾಣಿಗಳು ಹೆಚ್ಚಾಗಿ ಇದೇ ಗ್ರಾಮಕ್ಕೆ ನುಗ್ಗಿ ಬೆಳೆಗಳನ್ನು ನಾಶ ಪಡಿಸುತ್ತಿವೆ. ಆದರೆ, ಅರಣ್ಯ ಇಲಾಖೆ, ಕೃಷಿ ಇಲಾಖೆ ಬೆಳೆಗೆ ತಕ್ಕ ಪರಿಹಾರ ನೀಡುತ್ತಿಲ್ಲ ಎನ್ನುವುವುದು ರೈತರ ಆರೋಪವಾಗಿದೆ.

    ಕಳೆದ ವರ್ಷ ಗುಡ್ಡಗಾಡು ಪ್ರದೇಶದಿಂದ ಮಳೆ ನೀರು ಬಂದಿದ್ದರಿಂದ 1 ಎಕರೆ ಹತ್ತಿ, 3 ಕರೆ ಈರುಳ್ಳಿ ಬೆಳೆಗೆ ನೀರು ನುಗ್ಗಿ ಬೆಳೆ ಹಾಳಾಗಿತ್ತು. ಈ ವರ್ಷ ಕಾಡು ಹಂದಿ ಹಾವಳಿಯಿಂದ 2 ಎಕರೆ ಮೆಕ್ಕೆಜೋಳ ನಾಶವಾಗಿದೆ. ಈ ಬಾರಿ ಬಿತ್ತನೆ ಮಾಡಿದ ಖರ್ಚು ಕೂಡ ವಾಪಸ್ ಬಾರದಂತಾಗಿದೆ.
    | ಶಂಕರಗೌಡ ಜಯಣ್ಣಗೌಡ, ಡೋಣಿ ಗ್ರಾಮದ ರೈತ

    ಕಾಡು ಪ್ರಾಣಿಗಳಿಂದ ಬೆಳೆ ನಾಶವಾದ ಹೊಲಗಳಿಗೆ ಹೋಗಿ ಸಮೀಕ್ಷೆ ಮಾಡಲಾಗುತ್ತದೆ. ರೈತರು ಅಗತ್ಯ ದಾಖಲಾತಿಗಳೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಬೆಳೆಗೆ ತಕ್ಕ ಪರಿಹಾರ ನೀಡಲಾಗುವುದು.
    | ಪ್ರದೀಪ ಪವಾರ, ವಲಯ ಅರಣ್ಯಧಿಕಾರಿ ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts