More

    ಒಂದೇ ಮಳೆಗೆ ನಲುಗಿದ ಕಲಬುರಗಿ

    ಕಲಬುರಗಿ: ಮಹಾನಗರದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೆಳಪ್ರದೇಶದ ನೂರಾರು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಬಿರುಗಾಳಿಗೆ ಮರಗಳು ಬಿದ್ದು ಕಾರುಗಳು ಜಖಂಗೊಂಡರೆ, ಕೆಲ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಎಲ್ಲೆಂದರಲ್ಲಿ ಕೊಳಚೆ ನೀರು ತುಂಬಿದ್ದು, ಮಹಾನಗರ ಪಾಲಿಕೆ ಬಣ್ಣ ಬಯಲಿಗೆ ಬಂದಂತಾಗಿದೆ.
    ರೈಲು ಹಳಿಗೆ ಹೊಂದಿಕೊಂಡಿರುವ ಬಿದ್ದಾಪುರ ಕಾಲನಿ, ಸಿಐಬಿ ಕಾಲನಿ, ಮದರ್ ತೆರೇಸಾ ಬಿಇಡಿ ಕಾಲೇಜು ಬಳಿಯ ಮನೆಗಳು, ಹೀರಾಪುರ, ಬಬಲಾದ ರಸ್ತೆ ಬಡಾವಣೆಗಳು, ಬ್ರಹ್ಮಪುರ ಬೋರಾಬಾಯಿ ನಗರ, ಚಾಹುಸೇನಿ ಚಿಲ್ಲಾ, ಕೊಂಡೆದ ಗಲ್ಲಿ, ಮಹಾಲಕ್ಷ್ಮೀ ಮತ್ತು ಜನತಾ ಲೇಔಟ್, ಗಂಗಾನಗರದ ಖಣಿ ಪ್ರದೇಶ, ಕನಕ ನಗರ ಇತರ ಪ್ರದೇಶಗಳಲ್ಲಿರುವ ಮನೆಗಳಿಗೆ ಮೇಲ್ಭಾಗದಿಂದ ಹರಿದು ಬಂದ ಚರಂಡಿ ನೀರು ಹೊಕ್ಕಿದೆ. ಇದರಿಂದಾಗಿ ಜನರು ಭಾರಿ ತೊಂದರೆ ಅನುಭವಿಸಿದರು. ಚರಂಡಿ ನೀರು ಹೊರಹಾಕಲು ದಿನವಿಡೀ ಕಳೆದಂತಾಯಿತು. ಅದರಲ್ಲೂ ಬಿದ್ದಾಪುರ, ಹೀರಾಪುರ ಮತ್ತು ರೈಲ್ವೆ ಟ್ರಾಕಗೆ ಹೊಂದಿಕೊಂಡಿರುವ ಬಬಲಾದ್ ರಸ್ತೆ ಬಡಾವಣೆಗಳಲ್ಲಿನ ರಸ್ತೆ ಸೇತುವೆಗಳ ಮಣ್ಣು ಕುಸಿದಂತಾಗಿದೆ. ರೈಲ್ವೆ ಅಂಡರ್ ಪಾಸ್ಗಳಲ್ಲಿ ಅಪಾರ ನೀರು ನಿಂತು ಜನರು ಪರದಾಡುವಂತಾಗಿತ್ತು.
    ಮುಖ್ಯ ರಸ್ತೆಯ ಸಿದ್ಧಿಪಾಷಾ ದರ್ಗಾ ಎದುರು ಜಮಾಯಿಸಿದ್ದ ನೀರು ಕ್ಲಿಯರ್ ಆಗಲು ಶನಿವಾರ ಬೆಳಗ್ಗಿನವರೆಗೂ ಸಮಯ ಹಿಡಿಯಿತು. ಇನ್ನು ಸಾರ್ವಜನಿಕ ಉದ್ಯಾನದಲ್ಲಿರುವ ಜೆಡಿಎಸ್ ಕಚೇರಿ ಆವರಣದಲ್ಲಿ ನೀರು ತುಂಬಿಕೊಂಡಿದೆ. ಬೇಸಿಗೆ ಆಗಿದ್ದರಿಂದ ಬಹುತೇಕ ಚರಂಡಿಗಳಲ್ಲಿ ಕಸ-ಕಡ್ಡಿ ತುಂಬಿದ್ದರಿಂದ ಎಲ್ಲಿಯೂ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಹೀಗಾಗಿ ನೀರು ಸಿಕ್ಕ ಕಡೆಗೆಲ್ಲ ನುಗ್ಗಿ ಅವಾಂತರ ಸೃಷ್ಟಿಸಿದೆ.
    ಸೇಡಂ ರಸ್ತೆ ವೀರೇಂದ್ರ ಪಾಟೀಲ್ ಬಡಾವಣೆಯಲ್ಲಿರುವ ಎಂಬಿ ನಗರ ಪೊಲೀಸ್ ಠಾಣೆಗೆ ಹೋಗುವ ರಸ್ತೆಯಲ್ಲಿ ನಿಲ್ಲಿಸಿದ್ದ ನಾಲ್ಕೈದು ಕಾರುಗಳ ಮೇಲೆ ಮರಗಳು ಉರುಳಿ ಜಖಂಗೊಂಡಿವೆ. ವಿದ್ಯುತ್ ಕಂಬ ಸಹ ಮುರಿದು ಬಿದ್ದಿದೆ. ಇನ್ನೊಂದೆಡೆ ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದ ಗೋದಾಮಿನ ಪತ್ರಾಸ್ಗಳು ಗಾಳಿಗೆ ಕಿತ್ತು ಹೋಗಿದ್ದರಿಂದ ನೂರಾರು ಚೀಲ ತೊಗರಿ ಮಳೆಯಲ್ಲಿ ತೊಯ್ದು ಹಾನಿಯಾಗಿದೆ. ಒಂದೇ ಗಂಟೆಯಲ್ಲಿ ವರುಣಾರ್ಭಟ ಹಲವು ಅವಾಂತರ ಸೃಷ್ಟಿಸಿದೆ. ಇದು ಮಹಾನಗರ ಪಾಲಿಕೆಗೂ ಎಚ್ಚರಿಕೆ ಗಂಟೆಯಾಗಿದೆ. ಮುಂದಿನ ಮಳೆಗಾಲ ಎದುರಿಸಲು ಈಗಿನಿಂದಲೇ ಸಿದ್ಧ್ದತೆ ಮಾಡಿಕೊಳ್ಳುವ ಅಗತ್ಯವಿದೆ.

    ಮಳೆಯಿಂದಾಗಿ ನಗರದ ಕೆಲವೆಡೆ ನೀರು ನಿಂತಿದ್ದು, ಮನೆಗಳಿಗೂ ನೀರು ನುಗ್ಗಿರುವುದು ಗಮನಕ್ಕೆ ಬಂದಿದೆ. ಆ ಪ್ರದೇಶಗಳಿಗೆ ಮತ್ತು ರಸ್ತೆ, ಚರಂಡಿ ಹಾನಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸರಿಪಡಿಸುವ ಕೆಲಸ ಕೈಗೊಳ್ಳಲಾಗುವುದು. ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು.
    | ರಾಹುಲ್ ಪಾಂಡ್ವೆ
    ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts