More

    ಐದು ದಿನದಲ್ಲಿ ವೇತನ ಸಮಸ್ಯೆ ಬಗೆ ಹರಿಸಿ, ಇಲ್ಲದಿದ್ದರೆ ಪೌರ ಕಾರ್ವಿುಕರೊಂದಿಗೆ ಪಾಲಿಕೆಗೆ ಮುತ್ತಿಗೆ, ಶಾಸಕ ಪ್ರಸಾದ ಅಬ್ಬಯ್ಯ ಎಚ್ಚರಿಕೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ತ್ಯಾಜ್ಯ ಸಾಗಿಸುವ ಆಟೋ ಟಿಪ್ಪರ್ ಚಾಲಕರು, ಗುತ್ತಿಗೆ ಪೌರ ಕಾರ್ವಿುಕರಿಗೆ ಸರಿಯಾಗಿ ಸಂಬಳ ನೀಡದೆ ಸಂಬಂಧಪಟ್ಟ ಏಜೆನ್ಸಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಶಾಮೀಲಾಗಿ ನೌಕರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರ ಗುತ್ತಿಗೆ ನೌಕರರ ಏಜೆನ್ಸಿಯವರು ಚಾಲಕರಿಗೆ ಎರಡು ತಿಂಗಳಿಂದ ಸಂಬಳ ನೀಡಿಲ್ಲ. ಏಜೆನ್ಸಿಯವರ ವಿರುದ್ಧ ಧ್ವನಿ ಎತ್ತಿದವರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ಇದರಿಂದ ಚಾಲಕರ ಕುಟುಂಬದವರು ಉಪವಾಸ ಬೀಳುವ ಪ್ರಸಂಗ ಬಂದಿದೆ. ಪಾಲಿಕೆಯಲ್ಲಿ ಕಮಿಷನ್ ದಂಧೆ ನಡೆದಿದೆ. ಇದು ನಿಲ್ಲಬೇಕು, ಐದು ದಿನಗಳ ಒಳಗೆ ಏಜೆನ್ಸಿ ರದ್ದು ಪಡಿಸಿ, ಕಪ್ಪು ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಆರನೇ ದಿನಕ್ಕೆ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ, ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಹೊರ ಗುತ್ತಿಗೆ ನೌಕರರಿಂದ ಪ್ರತಿ ತಿಂಗಳ ಸಂಬಳದಲ್ಲಿ ಏಜೆನ್ಸಿಯವರು ನಾಲ್ಕು ಸಾವಿರ ರೂಪಾಯಿವರೆಗೆ ಕಮಿಶನ್ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಜೀವನ ನಡೆಸುವುದೇ ಕಷ್ಟಕರವಾಗುತ್ತಿದೆ. ಎರಡು ತಿಂಗಳ ಹಿಂದೆ ಒಬ್ಬ ಚಾಲಕ ತೀರಿಕೊಂಡಾಗ ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲಿಯವರೆಗೂ ಅವರು ಧ್ವನಿ ಎತ್ತಿರಲಿಲ್ಲ. ಅವರಿಗೆ ನಾನೂ ಧೈರ್ಯ ತುಂಬಿದ್ದು, ಮುಂದಿನ ದಿನಗಳಲ್ಲಿ ಕರಾಳ ದಂಧೆ ವಿರುದ್ಧ ಹೋರಾಟ ನಡೆಯಲಿದೆ ಎಂದರು.

    3.84 ಲಕ್ಷ ಗುಳುಂ

    ಟಿಪ್ಪರ್ ಚಾಲಕರು ರಜೆ ಇದ್ದಾಗ ಬಳಸಿಕೊಳ್ಳಲು ಪರ್ಯಾಯವಾಗಿ 30 ಚಾಲಕರನ್ನು ನೇಮಿಸಲು ಏಜೆನ್ಸಿಯವರಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಮಹಾನಗರ ಪಾಲಿಕೆ ಪ್ರತಿ ತಿಂಗಳು 3.84 ಲಕ್ಷ ರೂ. ನೀಡುತ್ತದೆ. ಆದರೆ, ವಾಸ್ತವದಲ್ಲಿ ಪರ್ಯಾಯ ಚಾಲಕರನ್ನು ಏಜೆನ್ಸಿಯವರು ನೇಮಕ ಮಾಡಿಕೊಂಡಿಲ್ಲ. ಇದರಲ್ಲಿಯೂ ಬೋಗಸ್ ದಾಖಲೆ ಸೃಷ್ಟಿಸಿ ಹಣವನ್ನು ಪ್ರತಿ ತಿಂಗಳು ಗುಳುಂ ಮಾಡುತ್ತಿದ್ದಾರೆ. ಪಿಎಫ್ ಹಣ ಸರಿಯಾಗಿ ಭರ್ತಿ ಮಾಡುತ್ತಿಲ್ಲ, ಇಎಸ್​ಐ ಕಾರ್ಡ್ ಇದುವರೆಗೂ ನೀಡಿಲ್ಲ. ಅತ್ಯಂತ ಕೆಟ್ಟ ರೀತಿಯಲ್ಲಿ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಶಾಸಕರು ದೂರಿದರು.

    ಏಜೆನ್ಸಿಯವರ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ 16 ಜನ ಚಾಲಕರನ್ನು ಈಗಾಗಲೇ ಕೆಲಸದಿಂದ ತೆಗೆದು ಹಾಕಿದ್ದಾರೆ. ಇದೀಗ ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘ ರಚನೆ ಮಾಡಿಕೊಂಡಿದ್ದೇವೆ. ಶಾಸಕರ ಬೆಂಬಲವೂ ನಮಗೆ ಸಿಕ್ಕಿದೆ. ಪ್ರತಿಭಟನೆ ಮೂಲಕ ನ್ಯಾಯ ದೊರಕಿಸಿಕೊಳ್ಳುತ್ತೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಶಿರಗುಪ್ಪಿ ತಿಳಿಸಿದರು.

    ======

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts