More

    ಎಮ್ಮೆ ಹಾಲು ಉತ್ಪಾದನೆಯಲ್ಲಿ ಜಿಲ್ಲೆ ಮುಂಚೂಣಿ

    ಬೆಳಗಾವಿ: ರಾಜ್ಯದಲ್ಲಿ ಎಮ್ಮೆ ಹಾಲಿನ ಉತ್ಪಾದನೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರ ಸಂಘಗಳು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷ ವಿವೇಕರಾವ ಪಾಟೀಲ ಹೇಳಿದರು.

    ಇಲ್ಲಿನ ಮಹಾಂತೇಶ ನಗರದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುಣಮಟ್ಟದ ಹಾಲಿನಿಂದಲೇ ನಾವು ವರ್ಷದಿಂದ ವರ್ಷಕ್ಕೆ ಮಾರುಕಟ್ಟೆ ವಿಸ್ತರಣೆ ಮಾಡುತ್ತಿದ್ದೇವೆ ಎಂದರು.

    ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಲು ಮಹಾಮಂಡಳ ಅಧ್ಯಕ್ಷರಾದ ಬಳಿಕ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸಾಕಷ್ಟು ಅನುಕೂಲವಾಗಿದೆ. ಜತೆಗೆ ಹಾಲು ಉತ್ಪಾದಕರ ಸಂಘಗಳ ಸಂಖ್ಯೆ ಹೆಚ್ಚಾಗಿದೆ. ರೈತರಿಗೆ, ಹಾಲು ಉತ್ಪಾದಕರಿಗೆ ನೇರವಾಗಿ ಸೌಲಭ್ಯ ಸಿಗುತ್ತಿವೆ. ಸರ್ಕಾರದ ಯೋಜನಾ ಸೌಕರ್ಯ ತಲುಪುತ್ತಿವೆ ಎಂದರು.

    ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಆರ್ಥಿಕ ಬಲಿಷ್ಠವಾಗಿ ಬೆಳೆದಿದೆ. ಸದ್ಯ 5 ಕೋಟಿ ರೂ. ಠೇವಣಿ ಇಡಲಾಗಿದ್ದು, ಯಾವುದೇ ರೀತಿ ಸಾಲ ಇಲ್ಲ. 3 ಲಕ್ಷ ಲೀ. ಹಾಲು ನಿರ್ವಹಣೆ ಮಾಡುವ ಸಾಮರ್ಥ್ಯ ನಮ್ಮ ಒಕ್ಕೂಟಕ್ಕಿದೆ. ಹಾಲು ಉತ್ಪಾದನೆ ಮತ್ತು ಹಾಲಿನ ಉತ್ಪನ್ನ ಮಾರಾಟದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು.
    ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮಾತನಾಡಿ, ಹಾಲಿನ ಮೇಲಿನ ಕಮಿಷನ್ ಹೆಚ್ಚಳ ಮಾಡಿ ಉತ್ಪಾದಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿ, ಗಡಿ ಭಾಗಕ್ಕೆ ಹೊಂದಿರುವ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಹಾಲು ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದೆ. ಇದಕ್ಕೆ ಒಕ್ಕೂಟವು ಪರ್ಯಾಯ ವ್ಯವಸ್ಥೆ ಮಾಡಬೇಕು ಹಾಗೂ 100 ಲೀ. ಹೆಚ್ಚು ಹಾಲು ಸಂಗ್ರಹಿಸುವ ಉತ್ಪಾದಕರ ಸಂಘಕ್ಕೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

    ಒಕ್ಕೂಟ ನಿರ್ದೇಶಕರಾದ ಬಾಬು ಕಟ್ಟಿ, ಸೋಮಲಿಂಗಪ್ಪ ಮುಗಳಿ, ಉದಯಸಿಂಹ ಶಿಂಧೆ, ಮಲ್ಲಪ್ಪ ಪಾಟೀಲ, ಅಪ್ಪಾಸನ ಅವತಾಡೆ, ಬಿ.ಎಂ.ಪರವಣ್ಣವರ, ಬಾಬುರಾವ ವಾಘಮೋಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts