More

    ಎಪಿಎಂಸಿಯಲ್ಲೇ ಹೆಚ್ಚು ದರ

    ಹುಬ್ಬಳ್ಳಿ: ಧಾರವಾಡ ಹಾಗೂ ಗದಗ ಜಿಲ್ಲೆಯ ವಿವಿಧ ಎಪಿಎಂಸಿಗಳಲ್ಲಿ ಹೆಸರುಕಾಳು ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಸರ್ಕಾರ ಆರಂಭಿಸಿರುವ ಹೆಸರುಕಾಳು ಖರೀದಿ ಕೇಂದ್ರಗಳತ್ತ ರೈತರು ಸುಳಿಯುತ್ತಿಲ್ಲ.

    ರಾಜ್ಯದಲ್ಲಿ ಗದಗ ಅತಿ ಹೆಚ್ಚು ಹೆಸರು ಉತ್ಪಾದಿಸುವ ಜಿಲ್ಲೆ. ಅದೇ ರೀತಿ ಧಾರವಾಡ ಜಿಲ್ಲೆ ನಂತರದ ಸ್ಥಾನದಲ್ಲಿದ್ದು, ಇಲ್ಲಿ ಈ ಬಾರಿ 44ಸಾವಿರ ಹೆಕ್ಟೇರ್​ನಲ್ಲಿ ಹೆಸರು ಬಿತ್ತನೆಯಾಗಿತ್ತು. ಬೆಳೆ ಉತ್ತಮವಾಗಿತ್ತು. ಆದರೆ, ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಬಹುತೇಕ ಬೆಳೆ ನಷ್ಟವಾಗಿದೆ. ಅಳಿದುಳಿದ ಬೆಳೆಗೆ ಬೆಲೆ ಇಲ್ಲ ಎಂದು ರೈತರು ಅಲವತ್ತುಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಿತ್ತು.

    ಜಿಲ್ಲೆಯಲ್ಲಿ ಒಟ್ಟು 11 ಖರೀದಿ ಕೇಂದ್ರಗಳಿದ್ದು, ಅಕ್ಟೋಬರ್ 29ರ ವರೆಗೆ ರೈತ ನೋಂದಣಿಗೆ ಅವಕಾಶ ನೀಡಲಾಗಿತ್ತು. ಒಟ್ಟು 572 ರೈತರು ತಮ್ಮ ಹೆಸರು ನೋಂದಣಿ ಮಾಡಿದ್ದು, ಖರೀದಿ ಕೇಂದ್ರಕ್ಕೆ ಹೆಸರು ತೆಗೆದುಕೊಂಡು ಬನ್ನಿ ಎಂದರೂ ಯಾರೂ ತರುತ್ತಿಲ್ಲ. ಮಾರುಕಟ್ಟೆಯಲ್ಲೇ ಉತ್ತಮ ದರ ಸಿಗುತ್ತಿರುವುದರಿಂದ ಇತ್ತ ಯಾರೂ ಬರುತ್ತಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.

    ಸದ್ಯ ಎಪಿಎಂಸಿಗಳಲ್ಲಿ ಹೆಸರುಕಾಳಿನ ಬೆಲೆ ಪ್ರತಿ ಕ್ವಿಂಟಾಲ್​ಗೆ ಹುಬ್ಬಳ್ಳಿಯಲ್ಲಿ ಗರಿಷ್ಠ 7305 ರೂ. ಹಾಗೂ ಗದಗನಲ್ಲಿ 8570 ರೂ. ಸಿಗುತ್ತಿದೆ. ಇನ್ನು ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಪ್ರತಿ ಕ್ವಿಂಟಾಲ್​ಗೆ 7195 ರೂ. ನಿಗದಿ ಮಾಡಿದೆ. ಅಲ್ಲದೆ, ಈಗ ಖರೀದಿ ಕೇಂದ್ರಗಳಿಗೆ ಹೆಸರು ಮಾರಾಟ ಮಾಡಿದರೆ ಒಟ್ಟಾರೆ ಪ್ರಕ್ರಿಯೆ ಮುಗಿದು ಆ ನಂತರ ರೈತರ ಖಾತೆಗೆ ಹಣ ಜಮಾ ಆಗಲಿದೆ.

    ಸದ್ಯ ದೀಪಾವಳಿ ಹಬ್ಬ, ಹಿಂಗಾರು ಬಿತ್ತನೆ ಸೇರಿ ಇತರೆ ಕಾರ್ಯಗಳಿಗೆ ರೈತರಿಗೆ ಹಣದ ಅವಶ್ಯಕತೆ ಇದೆ. ಮಾರುಕಟ್ಟೆಯಲ್ಲೂ ಉತ್ತಮ ದರವಿದೆ. ಹಾಗಾಗಿ ಒಂದಿಷ್ಟು ಹೆಚ್ಚು ಕಡಿಮೆಯಾದರೂ ಎಪಿಎಂಸಿಗಳಲ್ಲೇ ಮಾರಾಟಕ್ಕೆ ರೈತರು ಮುಂದಾಗುತ್ತಿದ್ದಾರೆ.

    ಅನುಕೂಲವಾಗಿದೆ: ಮುಂಗಾರು ಹಂಗಾಮಿನ ಮೊದಲ ಬೆಳೆ ಹೆಸರುಕಾಳು ಕೊಯ್ಲಿಗೆ ಬಂದಾಗ ಮಾರುಕಟ್ಟೆಯಲ್ಲಿ ದರ ಬಿದ್ದು ಹೋಗಿತ್ತು. ಇದರಿಂದ ರೈತರು ಆತಂಕದಲ್ಲಿದ್ದರು. ಕೂಡಲೆ ಸರ್ಕಾರ ಮಧ್ಯ ಪ್ರವೇಶಿಸಿ ಖರೀದಿ ಕೇಂದ್ರ ತೆರೆಯಲು ರೈತ ಸಮುದಾಯದಿಂದ ಒತ್ತಾಯ ಕೇಳಿ ಬಂದಿತ್ತು.

    ಸರ್ಕಾರ ಖರೀದಿ ಕೇಂದ್ರ ಆರಂಭಿಸುವ ಘೋಷಣೆ ಮಾಡುತ್ತಿದ್ದಂತೆ ಮಾರುಕಟ್ಟೆಯಲ್ಲೂ ಹೆಸರಿನ ಬೆಲೆ ಏರುಮುಖವಾಯಿತು. ಇದೀಗ ಬೆಂಬಲ ಬೆಲೆಗಿಂತಲೂ ಉತ್ತಮ ದರ ಇರುವುದರಿಂದ ರೈತರಿಗೆ ಒಂದು ರೀತಿ ಅನುಕೂಲವೇ ಆಗಿದೆ. ಖರೀದಿ ಕೇಂದ್ರ ಮಾಡಿದ್ದರಿಂದಲೇ ಎಪಿಎಂಸಿಗಳಲ್ಲಿ ಹೆಸರುಕಾಳಿನ ಬೆಲೆ ಸ್ಥಿರವಾಗಿದೆ. ಇಲ್ಲದಿದ್ದರೆ ರೈತರ ಶೋಷಣೆ ಉಂಟಾಗುತ್ತಿತ್ತು ಎಂಬುದು ಮಾರುಕಟ್ಟೆ ತಜ್ಞರ ಅಭಿಮತ.

    ಎಲ್ಲೆಲ್ಲಿ ಕೇಂದ್ರಗಳಿವೆ?: ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಹೆಬಸೂರ, ಉಪ್ಪಿನಬೆಟಗೇರಿ, ಅಣ್ಣಿಗೇರಿ, ನವಲಗುಂದ, ಮೊರಬ, ಕುಂದಗೋಳ, ಯರಗುಪ್ಪಿ ಸೇರಿ 11 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಸದ್ಯ 9 ಕೇಂದ್ರಗಳ ಸಿಬ್ಬಂದಿ ರೈತರಿಗೆ ಹೆಸರು ತರಲು ಹೇಳುತ್ತಿದ್ದಾರೆ. ಆದರೆ, ಯಾರೂ ತರುತ್ತಿಲ್ಲ.

    ಧಾರವಾಡ ಜಿಲ್ಲೆಯ ವಿವಿಧ ಹೆಸರುಕಾಳು ಖರೀದಿ ಕೇಂದ್ರಗಳಲ್ಲಿ 572 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನವೆಂಬರ್ ಮೊದಲ ವಾರದಿಂದ ಖರೀದಿ ಪ್ರಕ್ರಿಯೆ ಆರಂಭವಾಗಿದೆ ಆದರೆ, ಯಾರೊಬ್ಬರೂ ಧಾನ್ಯ ತೆಗೆದುಕೊಂಡು ಬರುತ್ತಿಲ್ಲ. ಎಪಿಎಂಸಿಯಲ್ಲಿ ಹೆಸರಿಗೆ ಉತ್ತಮ ದರ ಇರುವುದರಿಂದ ಅಲ್ಲಿಯೇ ಮಾರಾಟ ಮಾಡುತ್ತಿರಬಹುದು. | ಗಾಯತ್ರಿ ಪವಾರ ಮಾರ್ಕೆಟಿಂಗ್ ಫೆಡರೇಶನ್ ವ್ಯವಸ್ಥಾಪಕರು, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts