More

    ಎಚ್.ಆಂಜನೇಯಗೆ ಪರಿಷತ್ ಸದಸ್ಯ ಸ್ಥಾನ ನೀಡಿ:ಎಂ.ಆರ್. ವೆಂಕಟೇಶ್

    ಹಾಸನ: ದಲಿತ, ಶೋಷಿತ ಸಮುದಾಯಗಳ ನಾಯಕ ಹಾಗೂ ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಮೂಲಕ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಒತ್ತಾಯಿಸಿದರು.
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಸೋತಿರುವ, ಅಲಕ್ಷಿತ ಸಮುದಾಯಗಳ ನಾಯಕ ಎಚ್.ಆಂಜನೇಯ ಅವರನ್ನು ಕಾಂಗ್ರೆಸ್ ಸರ್ಕಾರ ಎಂಎಲ್‌ಸಿಯಾಗಿ ನೇಮಕ ಮಾಡಿ ಸಚಿವ ಸ್ಥಾನ ನೀಡುವಂತೆ ಹಾಸನ ಜಿಲ್ಲಾ ಕಾಂಗ್ರೆಸ್ ದಲಿತ ಮುಖಂಡರ ಪರವಾಗಿ ಒತ್ತಾಯಪೂರ್ವಕವಾಗಿ ಮನವಿ ಮಾಡುತ್ತಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
    ಎಚ್. ಆಂಜನೇಯ ಅವರು ಶೋಷಿತ ತಳ ಸಮುದಾಯಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದಾರೆ. ಧ್ವನಿ ಇಲ್ಲದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ಮೂಲಕ ರಾಜ್ಯದಲ್ಲಿ ಖ್ಯಾತಿ ಪಡೆದಿದ್ದಾರೆ. ಇವರ ಸೋಲು ದಲಿತ, ಶೋಷಿತ, ಅಲಕ್ಷಿತ ಸಮುದಾಯಗಳಿಗೆ ಸಾಕಷ್ಟು ನಷ್ಟವಾಗಿದೆ. ನೊಂದ ಸಮುದಾಯಗಳ ಏಳಿಗೆಗಾಗಿ ದುಡಿಯುತ್ತಿರುವ ರಾಜಕೀಯ ನಾಯಕರಲ್ಲಿ ಎಚ್. ಆಂಜನೇಯ ಅವರು ಮುಂಚೂಣಿ ನಾಯಕರು. ಆದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದರು.
    2013ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಆಂಜನೇಯ ಅವರು ಕ್ರಾಂತಿಕಾರ ಬದಲಾವಣೆ ತಂದಿದ್ದಾರೆ. ಎಸ್ಸಿ, ಎಸ್ಟಿ ಅನುದಾನ ಕಾಯ್ದೆ ಜಾರಿ, ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮೂಲಕ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ, ಎಸ್ಟಿ, ಅಲೆಮಾರಿ, ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ನೂರಾರು ಹೈಟೆಕ್ ಹಾಸ್ಟೆಲ್‌ಗಳನ್ನು ಹಾಗೂ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡುವಲ್ಲಿ ಆಂಜನೇಯ ಅವರ ಪಾತ್ರ ದೊಡ್ಡದು. ಈ ಕಾರ್ಯಗಳ ಮೂಲಕ ಹಿಂದುಳಿದ ದಲಿತ ಸಮುದಾಯಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಗೆವಾಳು ದ್ಯಾವಪ್ಪ, ರವೀಶ್ ಬಸವಪುರ, ಶಂಕರ್ ರಾಜು, ಕಬ್ಬಳ್ಳಿ ರಾಮಚಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts