More

    ಉದ್ಯೋಗ ಖಾತ್ರಿಯಲ್ಲಿ ಹಾವೇರಿ ಜಿಲ್ಲೆಗೆ ಐದನೇ ಸ್ಥಾನ

    ಹಾವೇರಿ: ಲಾಕ್​ಡೌನ್ ನಡುವೆಯೂ ಜಿಲ್ಲೆಯ ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ನರೇಗಾ ಯೋಜನೆಯಲ್ಲಿ ಕೆಲಸ ಸಿಕ್ಕಿದೆ. ಯೋಜನೆಯ ಪ್ರಗತಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ.

    ಏಪ್ರಿಲ್ ತಿಂಗಳಲ್ಲಿ 2 ಲಕ್ಷ ಮಾನವ ದಿನಗಳ ಗುರಿಯನ್ನು (ಒಬ್ಬ ಕಾರ್ವಿುಕನ ಒಂದು ದಿನದ ಕೆಲಸಕ್ಕೆ ಒಂದು ಮಾನವ ದಿನ ಎನ್ನಲಾಗುತ್ತದೆ) ಜಿಪಂ ಹೊಂದಿತ್ತು. ಆದರೆ, ಈ ಸಮಯದಲ್ಲಿ ಲಾಕ್​ಡೌನ್ ಘೋಷಣೆಯಾಗಿದ್ದರಿಂದ ಆರಂಭದಲ್ಲಿ ಜನ ಮನೆಬಿಟ್ಟು ಹೊರಬರಲಿಲ್ಲ. ಆದರೆ, ನಿತ್ಯ ದುಡಿದು ಜೀವನ ಸಾಗಿಸುತ್ತಿದ್ದ ಬಡ ಕಾರ್ವಿುಕರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಗುರಿಯಾಗಿದ್ದರು. ಈ ಸಮಯದಲ್ಲಿ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಅನುಸರಿಸಿ ನರೇಗಾ ಯೋಜನೆಯ ಕಾಮಗಾರಿ ನಡೆಸಲು ಅನುಮತಿ ನೀಡಿತು. ಅದರಂತೆ ಜಿಪಂ ಸಿಇಒ ರಮೇಶ ದೇಸಾಯಿ ಅವರು ಎಲ್ಲ ಗ್ರಾಪಂಗಳಿಗೆ ಕೂಡಲೆ ನರೇಗಾ ಕಾಮಗಾರಿಗಳನ್ನು ಆರಂಭಿಸುವಂತೆ ಸೂಚನೆ ನೀಡಿದರು. ಆರಂಭದಲ್ಲಿ ಕೆಲ ಗ್ರಾಪಂಗಳಲ್ಲಿ ಜನ ಬರಲಿಲ್ಲ. ಕೆಲ ಗ್ರಾಪಂಗಳಲ್ಲಿ ಕಾಮಗಾರಿಗಳು ಆರಂಭಗೊಂಡವು. ಏ. 14ರ ಮೊದಲ ಲಾಕ್​ಡೌನ್ ಮುಕ್ತಾಯದ ನಂತರ ಜಿಲ್ಲೆಯ 224 ಗ್ರಾಪಂಗಳ ಪೈಕಿ 35 ಗ್ರಾಪಂ ಹೊರತುಪಡಿಸಿ ಉಳಿದ ಎಲ್ಲ ಗ್ರಾಪಂಗಳಲ್ಲಿಯೂ ಕಾಮಗಾರಿ ಆರಂಭಗೊಂಡವು.

    ಏಪ್ರಿಲ್ ಅಂತ್ಯಕ್ಕೆ ನರೇಗಾ ಪ್ರಗತಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಏಪ್ರಿಲ್​ನಲ್ಲಿ ಒಟ್ಟು 17,942 ಕುಟುಂಬಗಳ 33,808 ಜನರಿಗೆ, 1.35 ಲಕ್ಷ ಮಾನವ ದಿನಗಳ ಉದ್ಯೋಗ ಒದಗಿಸಲಾಗಿದೆ. ಒಟ್ಟು ಗುರಿಯಲ್ಲಿ ಶೇ. 68ರಷ್ಟು ಪ್ರಗತಿ ಸಾಧಿಸಲಾಗಿದೆ.

    ಹೊರಗಿನಿಂದ ಬಂದವರಿಗೂ ಉದ್ಯೋಗ: ಲಾಕ್​ಡೌನ್ ಸಡಿಲಿಕೆಯಿಂದ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗೆ ದುಡಿಯಲು ಹೋದ ಜನ ಊರಿಗೆ ವಾಪಸಾಗಿದ್ದಾರೆ. ಅವರಲ್ಲಿ ಉದ್ಯೋಗ ಕೇಳಿದವರಿಗೆ ಬಿಪಿಎಲ್ ಹಾಗೂ ಆಧಾರ್ ಕಾರ್ಡ್ ಪಡೆದು ಉದ್ಯೋಗ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದವರಿಗೂ ಉದ್ಯೋಗ ನೀಡಲು ಅವಕಾಶವಿದ್ದು, ಅವರವರ ಜಮೀನಿನಲ್ಲಿಯೇ ಕೆಲಸ ನೀಡಲಾಗಿದೆ. ಪ್ರಸಕ್ತ ಏಪ್ರಿಲ್​ನಿಂದ ನರೇಗಾ ಕೂಲಿಯನ್ನು ಸರ್ಕಾರ 275 ರೂ.ಗಳಿಗೆ ಏರಿಕೆ ಮಾಡಿದ್ದು, ಗ್ರಾಮೀಣ ಜನರಿಗೆ ಲಾಕ್​ಡೌನ್ ಅವಧಿಯಲ್ಲಿಯೂ ಆರ್ಥಿಕ ಚಟುವಟಿಕೆಗೆ ಅನುಕೂಲವಾಗಿದೆ. ಎಲ್ಲ ಗ್ರಾಪಂಗಳಲ್ಲಿಯೂ ಕನಿಷ್ಠ 100 ಜನರಿಗೆ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ.

    ಏಪ್ರಿಲ್ ಆರಂಭದಲ್ಲಿ ನಿರೀಕ್ಷಿತ ಜನರು ಉದ್ಯೋಗಕ್ಕೆ ಬರಲಿಲ್ಲ. ಎಲ್ಲ ಗ್ರಾಪಂಗಳಲ್ಲಿ ಜಾಗೃತಿ ಮೂಡಿಸಿದ ನಂತರ ಹೆಚ್ಚಿನ ಪ್ರಮಾಣದಲ್ಲಿ ಜನ ಬಂದರು. ಹೀಗಾಗಿ ನಮ್ಮ ಗುರಿಯಲ್ಲಿ ಶೇ. 68ರಷ್ಟು ಸಾಧಿಸಲು ಸಾಧ್ಯವಾಯಿತು. ಮೇ ಅಂತ್ಯದೊಳಗೆ 5 ಲಕ್ಷ ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿದೆ. ಹೊರ ಜಿಲ್ಲೆ, ರಾಜ್ಯದಿಂದ ಬಂದವರಿಗೂ ಕೂಲಿ ಕೆಲಸ ನೀಡಲಾಗುವುದು.
    | ರಮೇಶ ದೇಸಾಯಿ, ಜಿಪಂ ಸಿಇಒ ಹಾವೇರಿ

    ಜಲಸಂರಕ್ಷಣೆಗೆ ಆದ್ಯತೆ: ನರೇಗಾ ಕಾಮಗಾರಿಯಲ್ಲಿ ಈ ಬಾರಿ ಜಲಮೂಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಖಾಸಗಿ ಜಮೀನಿನಲ್ಲೂ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಗ್ರಾಮದಲ್ಲಿ 20 ಎಕರೆಯಷ್ಟು ಬದು ನಿರ್ವಣ, ಕನಿಷ್ಠ 10 ಎಕರೆಯಲ್ಲಿ ಒಂದು ಕೃಷಿ ಹೊಂಡ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ. ಈಗಾಗಲೇ 551 ರೈತರ ಹೊಲಗಳಲ್ಲಿ ಬದುನಿರ್ವಣ ಕಾಮಗಾರಿ, 200 ನೀರು ಸಂರಕ್ಷಣಾ ಕಾಮಗಾರಿ, 150 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ ಗೋಕಟ್ಟೆಗಳ ಪುನಶ್ಚೇತನಕ್ಕೆ 618 ಕಾಮಗಾರಿಗಳನ್ನು ಗುರುತಿಸಲಾಗಿದೆ. ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯಡಿ ಎಲ್ಲ ತಾಲೂಕುಗಳಲ್ಲಿ ಸಬ್​ವಾಟರ್ ಶೆಡ್, 45 ಮೈಕ್ರೋ ವಾಟರ್ ಶೆಡ್ ನಿರ್ವಣಕ್ಕೆ 104 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಲಾಮೃತ ಯೋಜನೆಯಡಿ 16 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 33 ಗ್ರಾಪಂಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. 2,600ಜಲಮೂಲಗಳನ್ನು ಸರ್ಕಾರದ ಮೊಬೈಲ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. 58 ಕೆರೆಗಳನ್ನು ಆಯ್ಕೆ ಮಾಡಿ 26 ಕೆರೆಗಳ ಟೆಂಡರ್ ಕರೆದು ಹೂಳೆತ್ತಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts