More

    ಇಲ್ಲೇನ್ ನಡೀತಿದೆ ಕಣ್ಣೆತ್ತಿ ನೋಡ್ಲಿ ಮೋದಿ

    ಕಲಬುರಗಿ: ರಾಜ್ಯ ಸರ್ಕಾರ ಪರ್ಸೆಟೇಜ್ ಪಡೆಯುತ್ತಿದೆ ಎಂದು ಗುತ್ತಿಗೆದಾರರು ಪ್ರಧಾನಿವರೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈಗ ರಾಜ್ಯದಲ್ಲಿ ಏನು ನಡೆದಿದೆ ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಣ್ತೆರೆದು ನೋಡಲಿ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.

    ಅಭಿವೃದ್ಧಿಗೆ ಹೆಸರಾದ ಕರ್ನಾಟಕದಲ್ಲಿ ಪರ್ಸೆಟೇಜ್ ರಾಜಕಾರಣ ನಡೆದಿರುವುದು ದುರಂತ. ಹೀಗಿದ್ದರೂ ನಾನು ಮಾಡಿದ್ದೇ ಕರೆಕ್ಟ್ ಅನ್ನೋ ಭ್ರಮೆಯಲ್ಲಿದ್ದಾರೆ. ಈ ಕೆಟ್ಟ ಮನಸ್ಥಿತಿಯಿಂದ ಮೋದಿ ಹೊರಬರಬೇಕು. ಏನು ಮಾಡಿದರೂ ಜನರು ಸಹಿಸಿಕೊಳ್ಳುತ್ತಾರೆ ಎಂದು ಭಾವಿಸುವುದು ಸರಿಯಲ್ಲ ಎಂದು ಮಂಗಳವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ವಾಗ್ದಾಳಿ ನಡೆಸಿದರು.

    ಪರ್ಸೆಟೇಜ್ ಗುತ್ತಿಗೆದಾರರು ನಲುಗಿ ಹೋಗಿದ್ದಾರೆ. ಡಬಲ್ ಇಂಜಿನ್ ಸರ್ಕಾರವೆಂದು ಹೇಳಿ ಜನರನ್ನು ಯಾಮಾರಿಸುತ್ತಿರುವ ಬಿಜೆಪಿ ರಾಜ್ಯವನ್ನೇ ಹಾಳು ಮಾಡುತ್ತಿದೆ. ಗುತ್ತಿಗೆದಾರರು ಭ್ರಷ್ಟಾಚಾರ ಸಮಸ್ಯೆ ಎಷ್ಟಿದೆ ಎಂದು ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಬಂದಾಗ ಇಲ್ಲಿನ ವ್ಯವಸ್ಥೆ ಬಗ್ಗೆ ಚರ್ಚಿಸಿರುವೆ. ಈ ರೀತಿ ಬೆಳವಣಿಗೆಗಳಿಂದ ಸರ್ಕಾರ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ತಕ್ಷಣ ಕಡಿವಾಣ ಹಾಕಿ ಎಂದು ಹೇಳಿದ್ದೇನೆ. ಆದರೆ ಅವರು ಗಂಭೀರತೆ ಪ್ರದರ್ಶಿಸಿಲ್ಲ. ಇದರ ಪರಿಣಾಮ ಅವರು(ಬಿಜೆಪಿಯವರು) ಎದುರಿಸುತ್ತಾರೆ ಎಂದರು.

    ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಸರ್ಕಾರದ ಪರ್ಸೆಟೇಜ್ ಹೊಡೆತದಿಂದ ಗುತ್ತಿಗೆದಾರರು ಬೇಸತ್ತಿದ್ದಾರೆ. ಈ ಹಿಂದೆ ಸಚಿವರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಲು ಗುತ್ತಿಗೆದಾರರು ಹಿಂಜರಿಯುತ್ತಿದ್ದರು. ಆದರೀಗ ಸರ್ಕಾರ ವಿರುದ್ಧ ಬಹಿರಂಗ ಸಮರವೇ ಸಾರಿದ್ದಾರೆ. ಯಾವುದೇ ಘಟನೆ ಕುರಿತು ಕಾಂಗ್ರೆಸ್ ಕಾಲದಲ್ಲಿ ಏನಾಗಿತ್ತು ಅಂತ ಕೇಳ್ತಾರೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ನೀವು ಈಗೇನ್ ಮಾಡುತ್ತಿದ್ದೀರಿ ಎಂದು ಖರ್ಗೆ ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು.

    ಡಬಲ್ ಇಂಜಿನ್ ಸರ್ಕಾರದಲ್ಲಿ ರೈಲ್ವೆ ಹಳಿ ಮೇಲೆ ಕುಳಿತವರು ಸಾಯುತ್ತಿದ್ದಾರೆ. ರೈಲು ಹಿಂದೆ ಹೋದರೂ, ಮುಂದೆ ಹೋದರೂ ಜನರ ಮೇಲೆಯೇ ಹಾಯುತ್ತಿದೆ. ಇ.ಡಿ.ವಿಚಾರಣೆ ಬಗ್ಗೆ ಮಾತನಾಡಲ್ಲ. ಅದು ನಮ್ಮ ಪಕ್ಷದ ವಿಚಾರ. ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ಗಲಾಟೆ ಎಬ್ಬಿಸಿದರೆ ದೊಡ್ಡ ಕೈಗಾರಿಕೆಗಳು ಬೇರೆಡೆ ಹೋಗಿ ಅಭಿವೃದ್ಧಿಗೆ ಪೆಟ್ಟು ಬೀಳಬಹುದು.
    |ಡಾ.ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ

    ಸಂತೋಷ ಸಾವಿಗೆ ಸರ್ಕಾರ ಹೊಣೆ: ಪರ್ಸೆಟೇಜ್ ನಿಂದ ತತ್ತರಿಸಿ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ದೂರಿದರು. ಇದೊಂದು ಗಂಭೀರ ಪ್ರಕರಣ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಪ್ರಕರಣದ ಸಮಗ್ರ ತನಿಖೆಗೆ ನಿವೃತ್ತ ನ್ಯಾಯಾಧೀಶರಿಂದ ನಡೆಸಬೇಕು. ಸಂತೋಷ ಡೆತ್ ನೋಟ್​ನಲ್ಲಿ ಉಲ್ಲೇಖಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಶೇ. 40 ಕಮಿಷನ್ ಬೇಡಿಕೆ ಇಟ್ಟಿದೆ ಎಂದು ಆರೋಪಿಸಿ ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೂ ಸರ್ಕಾರ ಗಂಭೀರ ಪರಿಗಣಿಸಿಲ್ಲ. ಎಲ್ಲದಕ್ಕೂ ದಾಖಲೆ ಕೇಳುತ್ತಿದೆ. ಈಗ ಒಂದು ಜೀವ ಹೋಗಿದೆ. ಇದಕ್ಕಿಂತ ದೊಡ್ಡ ಪ್ರೂಫ್ ಬೇಕಾ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಪರ್ಸೆಟೇಜ್ ಮಿತಿ ಮೀರಿದೆ. ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಸ್ಪಷ್ಟವಾಗಿ ಸಂತೋಷ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದರಿಂದ ಅವರ ವಿರುದ್ಧ ಕೇಸ್ ದಾಖಲಿಸಬೇಕು. ಸಿಎಂ ಹಾಗೂ ಸಕರ್ಾರಕ್ಕೆ ತಾಕತ್ತಿದ್ದರೆ ಅವರಿಗೆ ಬಂಧಿಸಲಿ ಎಂದು ಸವಾಲೆಸೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts