More

    ಆಕರ್ಷಕ ರಥಕ್ಕೆ ಆಧುನಿಕ ಸ್ಪರ್ಶ

    ಲಕ್ಷ್ಮೇಶ್ವರ: ಸ್ಟೇರಿಂಗ್, ಬ್ರೇಕ್ ಮತ್ತು ಜಾಕ್ ವ್ಯವಸ್ಥೆ ಒಳಗೊಂಡ ತಾಂತ್ರಿಕ ನೈಪುಣ್ಯವುಳ್ಳ ರಥವೊಂದು ಶಿಗ್ಲಿ ಗ್ರಾಮದ ಯುವಶಿಲ್ಪಿ ಚಂದ್ರು ಪತ್ತಾರ ಅವರ ಕೈಚಳಕದಿಂದ ಸುಂದರವಾಗಿ ರೂಪಗೊಂಡಿದ್ದು, ಶಿವಮೊಗ್ಗಕ್ಕೆ ಹೊರಡಲು ಸಿದ್ಧಗೊಂಡಿದೆ.

    ಶಿವಮೊಗ್ಗದ ಬಸವೇಶ್ವರ ದೇವಸ್ಥಾನದ ಸಮಿತಿಯವರು ರಥ ನಿರ್ವಣಕ್ಕೆ ಅವಕಾಶ ಕೊಟ್ಟಿದ್ದನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಚಂದ್ರು ಅವರು ತಮ್ಮೆಲ್ಲ ಪ್ರತಿಭೆ ಧಾರೆ ಎರೆದು ರಥಕ್ಕೆ ಜೀವಕಳೆ ತುಂಬಿದ್ದಾರೆ. ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ನಿರ್ವಣಗೊಡಿರುವ ಆಧುನಿಕ ತಂತ್ರಜ್ಞಾನದ ಜತೆಗೆ ಕಲಾಕೃತಿಗಳು ಅರಳಿ ಕಣ್ಮನ ಸೆಳೆಯುತ್ತಿವೆ.

    ಬಾಲ್ಯದಿಂದಲೇ ಚಿತ್ರಕಲೆ ಬಗ್ಗೆ ಚಂದ್ರು ಹೊಂದಿದ್ದ ಆಸಕ್ತಿಗೆ ತಾಯಿ ಪ್ರೇಮಾ ಪತ್ತಾರ ನೀರೆರೆದು ಪೋಷಿಸಿದರು. ಬಿ.ಎಸ್ಸಿ ಪದವಿ ನಂತರ ತನ್ನ ಆಸಕ್ತಿಯ ಶಿಲ್ಪಕಲಾ ಕ್ಷೇತ್ರದಲ್ಲಿ ವಿಶೇಷವಾದದ್ದನ್ನು ಸಾಧಿಸಬೇಕು ಎಂಬ ಆಸೆಯಿಂದ ಕಾರ್ಕಳದ ಸಿ.ಇ. ಕಾಮತ್ ಕರಕುಶಲ ತರಬೇತಿ ಕೇಂದ್ರದಲ್ಲಿ ಶಿಲ್ಪಕಲೆಯಲ್ಲಿ 2 ವರ್ಷಗಳ ಕಾಲ ತರಬೇತಿ ಪಡೆದರು. ಬಳಿಕ ಅಲ್ಲಿಯೇ 3 ವರ್ಷ ಹಿರಿಯ ಶಿಲ್ಪಕಲಾ ಪರಿಣತರಾದ ಪ್ರಶಾಂತ ಗುಡಿಗಾರ, ಗುಣವಂತೇಶ್ವರ ಭಟ್, ಹರೀಶ ನಾಯಕ್, ನಾಗೇಶಾಚಾರ್ ಗರಡಿ ಯಲ್ಲಿ ಪಳಗಿದರು.

    ಕಳೆದ ಏಳೆಂಟು ವರ್ಷಗಳಿಂದ ಶಿಗ್ಲಿ ಗ್ರಾಮದಲ್ಲಿ ತಮ್ಮದೇ ನಾರಾಯಣ ಶಿಲಾ-ಶಿಲ್ಪ ಎಂಬ ಕುಟೀರ ಆರಂಭಿಸಿ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮಸ್ಥರು ಮೊದಲ ಹೆಜ್ಜೆಯಾಗಿ ಗ್ರಾಮದ ಬಸವೇಶ್ವರ ದೇವಸ್ಥಾನದ ರಥ ನಿರ್ವಣದ ಜವಾಬ್ದಾರಿಯನ್ನು ಇವರಿಗೆ ವಹಿಸಿದ್ದರು. ನಿಗದಿತ ಕಾಲಾವಧಿ ಯೊಳಗೆ ಅತ್ಯಂತ ಸುಂದರ ಮತ್ತು ಶಾಸ್ತ್ರೋಕ್ತವಾಗಿ 20 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ವಿುಸಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಇಲ್ಲಿಂದ ಆರಂಭವಾದ ಅವರ ರಥ ನಿರ್ವಣದ ಪಯಣ ಭರದಿಂದ ಸಾಗಿತು. ಈಗಾಗಲೇ ಕೆಸರಳ್ಳಿ, ಕೋಣನ ತಂಬಗಿ ( ತೆಪ್ಪದ ತೇರು) ರಾಜನ ಹಳ್ಳಿಗೆ ರಥ ನಿರ್ವಿುಸಿಕೊಟ್ಟಿದ್ದಾರೆ. ಯಲಬುರ್ಗ, ಹಾವೇರಿ, ಧಾರವಾಡ, ಲಕ್ಷ್ಮೇಶ್ವರ, ರಾಮಗೇರಿ, ಶಿಶುನಾಳ, ಹರದಗಟ್ಟಿ, ಕಡಕೋಳ, ಹತ್ತಿಮತ್ತೂರ, ಮಂಟಗಾಣಿ, ಶಿಗ್ಲಿ, ಒಡೆಯರಮಲ್ಲಾಪುರ ಮತ್ತಿತರ ಗ್ರಾಮದ ದೇವಸ್ಥಾನಗಳಲ್ಲಿ ಚಂದ್ರು ಅವರು ನಿರ್ವಿುಸಿದ ಮೂರ್ತಿಗಳು ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಡುತ್ತಿವೆ.

    ಈಗ ಶಿವಮೊಗ್ಗದ ದೇವಸ್ಥಾನಕ್ಕಾಗಿ ಆಧುನಿಕ ಯಂತ್ರ ವ್ಯವಸ್ಥೆ ಇರುವ ರಥ ನಿರ್ವಿುಸಿದ್ದಾರೆ. ಆದರೆ, ಶಾಸ್ತ್ರೋಕ್ತವಾಗಿ ಇರಬೇಕಾದ ಸಂಗತಿಗಳನ್ನು ಮರೆತಿಲ್ಲ. ಧರ್ಮಶಾಸ್ತ್ರ, ಸಂಪ್ರದಾಯದಂತೆ ರಥದಲ್ಲಿ ಅಷ್ಟ ದಿಕ್ಪಾಲಕರು, ಚಾಮರಧಾರೆಯರು, ಮಿಥುನ ಶಿಲ್ಪಿಗಳು, ಸರಪಳಿ ವಿನ್ಯಾಸ, ಸಿಂಹಗಳು, ಗಣಪತಿ, ಮತ್ತು ಪರಿವಾರ ದೇವತೆಗಳ ಸೂಕ್ಷ್ಮವಾದ ಕುಸುರಿ ಕೆಲಸ ಈ ರಥದಲ್ಲಿ ಮೇಳೈಸಿದೆ. ಮುಂದಿನ ಬಸವ ಜಯಂತಿ ದಿನ ಶಿವಮೊಗ್ಗದಲ್ಲಿ ನಡೆಯುವ ಬಸವೇಶ್ವರ ಜಾತ್ರೆಯಲ್ಲಿ ಈ ರಥ ಬಳಸಲಾಗುತ್ತದೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ರಾಜ್ಯ ಮಟ್ಟದ ಕಲಾ ಶಿಬಿರ ಸೇರಿ ಅನೇಕ ಸಂಘ ಸಂಸ್ಥೆಗಳನ್ನು ಇವರನ್ನು ಗೌರವಿಸಿವೆ.

    ವಿಶಿಷ್ಟ ತೇರು

    27 ಅಡಿ ಎತ್ತರದ ಈ ರಥ ನಿರ್ವಣಕ್ಕೆ ಒಟ್ಟು 250 ಘನಪೂಟ್​ನಷ್ಟು ಸಾಗವಾನಿ ಮತ್ತು ಹೊನ್ನಿ ಕಟ್ಟಿಗೆಯನ್ನು ಬಳಸಲಾಗಿದೆ. ರಥದ ಗಾಲಿ ಮತ್ತು ಅಚ್ಚಿಗೆ ಮಾತ್ರ ಹೊನ್ನಿ ಕಟ್ಟಿಗೆ ಬಳಸಿದರೆ ಇನ್ನುಳಿದ ಎಲ್ಲದಕ್ಕೂ ಗುಣಮಟ್ಟದ ಸಾಗವಾನಿ ಬಳಸಲಾಗಿದೆ. ರಥಕ್ಕೆ ಸಾಮಾನ್ಯ ವಾಹನಗಳಿಗೆ ಬಳಸುವಂತೆ ಸ್ಟೇರಿಂಗ್, ಬ್ರೇಕ್ ಮತ್ತು ಜಾಕ್ ಅಳವಡಿಸಲಾಗಿದೆ. ರಥಕ್ಕೆ ತಕ್ಕಂತೆ ಸ್ಥಳೀಯವಾಗಿಯೇ ಮೆಕಾನಿಕಲ್, ಇಂಜಿನಿಯರಿಂಗ್ ವರ್ಕ್ಸ್ ಮಾಡುವ ಪರಿಣತರ ಸಹಾಯ ಪಡೆಯಲಾಗಿದೆ. ಕಬ್ಬಿಣ ಸ್ಟೇರಿಂಗ್, ಆಯಿಲ್ ಬ್ರೇಕ್, ಜಾಕ್ ಅಳವಡಿಸಲಾಗಿದೆ. ರಥವನ್ನು ಸಂಪ್ರದಾಯದಂತೆ ಹಗ್ಗದ ಮೂಲಕ ಎಳೆಯಲಾಗುತ್ತದೆ. ಆದರೆ, ಉರುಳುವ ಸಂದರ್ಭದಲ್ಲಿ ರಥ ಚಲಾಯಿಸುವ ವ್ಯಕ್ತಿ ರಥವನ್ನು 8 ಇಂಚಿನಷ್ಟು ಅತ್ತ-ಇತ್ತ ಹೊರಳಿಸಬಹುದು ಮತ್ತು ರಥದ ವೇಗ ತಡೆಯಬಹುದು. ಇದರಿಂದ ರಥೋತ್ಸವ ಸಂದರ್ಭದಲ್ಲಿ ಆಗುವ ಅಪಾಯ-ಅವಘಡ ತಡೆಯಬಹುದು. ಈ ರಥ ನಿರ್ವಣಕ್ಕೆ 10 ತಿಂಗಳ ಕಾಲ ನಿತ್ಯ 4 ಜನ ಕಲಾವಿದರು ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ಪ್ರಕಾಶ ಆಚಾರ್ಯ, ಮಂಜು ಆಚಾರ್ಯ ಅವರೂ ಸಹಕಾರ ನೀಡಿದ್ದಾರೆ. ಈಗಾಗಲೇ ರಥದ ಚಾಲನೆಯನ್ನು ಪ್ರಾಯೋಗಿಕ ಪರೀಕ್ಷೆಗೊಳಪಡಿಸಲಾಗಿದೆ. ರಥದ ಸಾಗಾಟದ ಸಂದರ್ಭದಲ್ಲಿ ರಥದ ಎಲ್ಲ ಭಾಗಗಳನ್ನು ಬಿಡಿಸಿ ಟ್ರಕ್​ನಲ್ಲಿ ಸಾಗಿಸಲಾಗುತ್ತದೆ. ಅದಕ್ಕಾಗಿ ಅರಣ್ಯ ಇಲಾಖೆಯ ಅನುಮತಿಯನ್ನೂ ಪಡೆಯಲಾಗುತ್ತದೆ. ಶಿವಮೊಗ್ಗದಲ್ಲಿ ಸಂಪ್ರದಾಯದಂತೆ ತೆಂಗಿನ ಮರದ ಬಡ್ಡಿಗಳ ಮೇಲೆ ರಥವನ್ನು ಜೋಡಿಸಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ವಿವರಿಸುತ್ತಾರೆ ಚಂದ್ರು ಪತ್ತಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts