More

    ಅರ್ಚಕರು ಸಮಾಜದ ಮಾರ್ಗದರ್ಶಕರು

    ಭದ್ರಾವತಿ: ದೇವಾನುದೇವತೆಗಳನ್ನು ಪೂಜಿಸುವ ಅರ್ಚಕರು ಮಹಾನ್ ಶಕ್ತಿವಂತರು. ಅವರು ಪಡೆದ ದೈವ ಶಕ್ತಿಯನ್ನು ನಮಗೂ ಸಿಗಲೆಂದು ಭಕ್ತರಾದ ನಾವು ಅವರ ಪಾದ ಮುಟ್ಟಿ ನಮಸ್ಕರಿಸುತ್ತೇವೆ ಎಂದು ನಿವೃತ್ತ ಉಪನ್ಯಾಸಕ ಬಿ.ಕೃಷ್ಣ ಉಪಾಧ್ಯಾಯ ಹೇಳಿದರು.

    ಜನ್ನಾಪುರದ ಏಕದಂತ ಸಭಾಭವನದಲ್ಲಿ ಶ್ರೀ ಧರ್ಮಜಾಗರಣಾ ಅರ್ಚಕರ ಸಭಾ ಮಂಡಳಿ ಆಯೋಜಿಸಿದ್ದ 17ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಮನಲ್ಲಿ ದೈವತ್ವವನ್ನು ಕಂಡ ಆಂಜನೇಯ ಶ್ರೀರಾಮ ದೇವರೆಂದು ಪೂಜಿಸಿ ಮಹಾತ್ಮನ ಶಕ್ತಿ ಪಡೆದುಕೊಂಡಂತೆ, ಅರ್ಚಕರು ಶ್ರೀರಾಮ, ಆಂಜನೇಯ ಸೇರಿ ಇನ್ನಿತರೆ ದೇವರನ್ನು ತಮ್ಮ ಧ್ಯಾನ, ಅರ್ಚನೆ ಮಂತ್ರ ಶಕ್ತಿಯಿಂದ ಪೂಜಿಸಿ ಅವರ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ತಾವು ಪಡೆದ ದೈವಶಕ್ತಿಯನ್ನು ಹರಿಸುವ ಮೂಲಕ ಧರ್ಮದ ಪ್ರಭಾವವನ್ನು ಹೆಚ್ಚು ಮಾಡುತ್ತಾರೆ. ಕಲಿಯುಗದಲ್ಲಿ ದೇವರನ್ನು ಕಾಣಲು ಯಾರಿಂದಲೂ ಸಾಧ್ಯವಾಗಿಲ್ಲ. ಯಾವುದೆ ಆಸೆಗಳಿಗೆ ಬಲಿಯಾಗದ ಅರ್ಚಕರು ಸಮಾಜಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

    ವೇ.ಬ್ರ.ರಂಗನಾಥಶರ್ಮ ಮಾತನಾಡಿ, ಪರಮಾತ್ಮನನ್ನು ಮುಟ್ಟಿ ಪೂಜಿಸುವ ಅವಕಾಶ ದೊರೆತಿರುವ ಅರ್ಚಕರು ಬಡವರಲ್ಲ ಅವರು ಶ್ರೀಮಂತರು. ಅರ್ಚಕರಿಗೆ ದೇವರ ಅನುಗ್ರಹವಾದರೆ ಅರ್ಚಕರ ಮೂಲಕ ಭಕ್ತರಿಗೂ ಅನುಗ್ರಹವಾಗುತ್ತದೆ. ನಮಗೆ ಏನೇ ಕಷ್ಟ ಬಂದರೂ ದೇವರ ಮೊರೆ ಹೋದರೆ ಕಷ್ಟ ಪರಿಹಾರವಾಗುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಮಕ್ಕಳು ಶಾಸ್ತ್ರಗಳನ್ನು ಕಲಿಯಬೇಕಾದರೆ ನಾವು ಪರಿಪೂರ್ಣವಾಗಿ ಕಲಿತು ಮಾರ್ಗದರ್ಶಕರಾಗಬೇಕಿದೆ ಎಂದು ಹೇಳಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಎಸ್.ಕೃಷ್ಣಮೂರ್ತಿ ಸೋಮಯಾಜಿ, ಧರ್ಮ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಧರ್ಮ ಜಾಗರಣಾ ಅರ್ಚಕರ ಮಂಡಳಿಗೆ 17 ವರ್ಷತುಂಬಿವೆ. ಇದಕ್ಕೆ ತಾಲೂಕಿನ ಎಲ್ಲ್ಲ ಅರ್ಚಕರ ಸಹಕಾರವೇ ಕಾರಣ. ಇತ್ತೀಚೆಗೆ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಿರುವುದು ನೋಡಿದರೆ ನಮ್ಮ ಸಂಘಟನೆಗೂ ದೃಷ್ಟಿದೋಷ ಆದಂತಿದೆ. ಮುಂದಿನ ದಿನಗಳಲ್ಲಿ ನಿವೇಶನ ಇಲ್ಲವೇ ಭವನ ನಿರ್ಮಾಣ ನಮ್ಮ ಗುರಿಯಾಗಿದ್ದು ನಗರ ಹಾಗೂ ಗ್ರಾಮಾಂತರ ಅರ್ಚಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಎಂ.ವೆಂಕಟರಾಮ್ ಶಿವಲಿಂಗಪ್ಪ, ಎಂ.ಜಿ.ಮುರುಗೇಂದ್ರಪ್ಪ, ಕೃಷ್ಣಪ್ಪ ಅರ್ಚಕ ದಂಪತಿಗೆ ಸನ್ಮಾನಿಸಲಾಯಿತು. ಧರ್ಮ ಜಾಗರಣಾ ಅರ್ಚಕರ ಸಭಾ ಮಂಡಳಿ ಅಧ್ಯಕ್ಷ ಎಸ್.ವಿ.ರಾಮಾನುಜ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ಶಂಕರಮೂರ್ತಿ, ಶ್ರಿನಿವಾಸ್, ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts