More

    ಅಪಾಯದ ಮಟ್ಟ ಮೀರಿದ ಇಂದಿರಮ್ಮನ ಕೆರೆ

    ಧಾರವಾಡ: ಅಳ್ನಾವರ ತಾಲೂಕು ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಅಳ್ನಾವರ ನಾಲೆಗೆ ನುಗ್ಗುತ್ತಿದೆ. ಹೀಗಾಗಿ ಈ ವರ್ಷವೂ ಪ್ರವಾಹ ಎದುರಾಗಬಹುದು ಎಂಬ ಭೀತಿ ಉಂಟಾಗಿದೆ.

    2 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆ ಭರ್ತಿಯಾಗಿದೆ. ಈಗಾಗಲೇ ಕ್ರೆಸ್ಟ್ ಗೇಟ್ ತೆರೆದಿದ್ದು, ಕೆರೆ ನೀರು ಹರಿದುಹೋಗುತ್ತಿದೆ. ಆದರೆ, ಇದೇ ಪ್ರಮಾಣದಲ್ಲಿ ಮಳೆ ಸುರಿದರೆ ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಂಭವ ಇರುವ ಕಾರಣಕ್ಕೆ ಪಟ್ಟಣದಲ್ಲಿ ಮುನ್ನೆಚ್ಚರಿಕೆ ಘೊಷಿಸಲಾಗಿದೆ.

    ಕೆರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಮರೇಶ ಪಮ್ಮಾರ, ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಡಿವೈಎಸ್ಪಿ ರವಿ ನಾಯಕ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆರೆ ಪ್ರದೇಶದತ್ತ ಹೆಚ್ಚಿನ ಜನರು ತೆರಳದಂತೆ ಬಂದೋಬಸ್ತ್ ಮಾಡಲಾಗಿದೆ.

    ಜಿಲ್ಲಾಧಿಕಾರಿ ನಿರ್ದೇಶನದಂತೆ ಮುಂಜಾಗ್ರತೆ ಕ್ರಮವಾಗಿ ಪಟ್ಟಣದ 6 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಪಪಂನಲ್ಲಿ ನಿಯಂತ್ರಣ ಕೊಠಡಿ ಪ್ರಾರಂಭಿಸಿದ್ದು, ಕರೊನಾ ಹಿನ್ನೆಲೆಯಲ್ಲಿ ವಾರ್ಡ್​ಗಳಲ್ಲಿ ರಚಿಸಿದ್ದ ಸಮಿತಿಗಳನ್ನೇ ಪ್ರವಾಹ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಪ್ರವಾಹ ಎದುರಾದಲ್ಲಿ ಜನರ ರಕ್ಷಣೆಗಾಗಿ ಅಗ್ನಿ ಶಾಮಕ ದಳ ಸಿಬ್ಬಂದಿ ಸಹ ಪಟ್ಟಣದಲ್ಲಿ ಠಿಕಾಣಿ ಹೂಡಿದ್ದಾರೆ.

    ನೀರಿನ ಪ್ರಮಾಣ ಹೆಚ್ಚಿದಲ್ಲಿ ದೇಸಾಯಿ ಚಾಳ, ಕಾಳೆ ಪ್ಲಾಟ್, ಸಾತೇರಿ ಪ್ಲಾಟ್, ತಿಲಕನಗರ ಜಲಾವೃತೊಳ್ಳುವ ಸಾಧ್ಯತೆ ಇದೆ ಎಂದು ಪಂಚಾಯಿತಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಹೀಗಾಗಿ ಜನರ ರಕ್ಷಣೆ ನಿಟ್ಟಿನಲ್ಲಿ ಪಂಚಾಯಿತಿ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಇನ್ನು ಜನರು ಮಾತ್ರ ಕಳೆದ ವರ್ಷದಂತೆ ಈ ಬಾರಿ ಕಷ್ಟ ಬರದಿರಲಿ ಎಂದ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ತಹಸೀಲ್ದಾರ್ ಅಮರೇಶ ಪಮ್ಮಾರ ಪ್ರತಿಕ್ರಿಯಿಸಿ, ಭಾನುವಾರ ರಾತ್ರಿಯಿಂದಲೇ ಮಳೆ ಕಡಿಮೆಯಾಗಿದೆ. ಇನ್ನೂ ಕೆಲ ದಿನಗಳ ಕಾಲ ಮಳೆ ಪ್ರಮಾಣ ಕಡಿಮೆಯಾದಲ್ಲಿ ಪ್ರವಾಹ ಭೀತಿ ಇಲ್ಲ. ಒಂದು ವೇಳೆ ಮಳೆ ಹೆಚ್ಚಾದಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜನರಿಗೆ ತಿಳಿಸಿ, ಸಹಕಾರ ನೀಡಲು ಕೋರಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts