More

    ಅನರ್ಹ ಕಂಪನಿಗಳಿಗೆ ಸಹಾಯಧನ ನಿಲ್ಲಿಸಿ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೃತ್ತಿ ರಂಗಭೂಮಿ ಕಂಪನಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ಪಾರದರ್ಶಕ ಮಾನದಂಡಗಳನ್ನು ರೂಪಿಸಿ ಅರ್ಹ ಕಂಪನಿಗಳಿಗೆ ನೀಡಬೇಕು. ಅನರ್ಹ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಕೆ.ಬಿ.ಆರ್. ಡ್ರಾಮಾ ಕಂಪನಿಯ ಮುಖ್ಯ ವ್ಯವಸ್ಥಾಪಕ ಚಿಂದೋಡಿ ಶಂಭುಲಿಂಗಪ್ಪ ಒತ್ತಾಯಿಸಿದರು.

    ನಗರದ ಹೆಗ್ಗೇರಿ ರಸ್ತೆಯಲ್ಲಿ ಹಾಕಿರುವ ನಾಟಕ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಸರ್ಕಾರ 25 ನಾಟಕ ಕಂಪನಿಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಅದರಲ್ಲಿ ಕೆಲವು ಅನರ್ಹ ಕಂಪನಿಗಳು ಸೇರ್ಪಡೆಗೊಂಡಿವೆ. ಇದರಿಂದ ನಿಜವಾಗಿಯೂ ರಂಗಭೂಮಿ ಸೇವೆ ಮಾಡುವ ಕಂಪನಿಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರವು ಪ್ರೋತ್ಸಾಹ ಧನ ನೀಡಲು ವರ್ಷದಲ್ಲಿ ಕನಿಷ್ಠ ಆರು ತಿಂಗಳು ಕಾಲ ನಾಟಕ ಪ್ರದರ್ಶನ ನೀಡುವುದನ್ನು ಕಡ್ಡಾಯಗೊಳಿಸಿದೆ. ಆದರೆ, ಕೆಲವು ಕಂಪನಿಗಳು ಪ್ರೋತ್ಸಾಹ ಧನ ಪಡೆಯಲೆಂದೇ ಹುಟ್ಟಿಕೊಂಡಿವೆ. ಇವುಗಳಿಂದ ವರ್ಷದಲ್ಲಿ 360 ದಿನಗಳ ಕಾಲ ಪ್ರದರ್ಶನ ನೀಡುವ ಕಂಪನಿಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಇದನ್ನು ಪರಿಶೀಲಿಸಿ ಪ್ರೋತ್ಸಾಹಧನ ನಿಗದಿಗೊಳಿಸಬೇಕು. ಇಲ್ಲವಾದರೆ ರಂಗಭೂಮಿಯನ್ನೇ ನಂಬಿಕೊಂಡಿರುವ ಕಂಪನಿಗಳು ಈ ವೃತ್ತಿಯಿಂದ ವಿಮುಖವಾಗುವ ಸಾಧ್ಯತೆಗಳಿವೆ ಎಂದರು.

    ಸದ್ಯ ರಾಜ್ಯದಲ್ಲಿ ಸರ್ಕಾರದ ಧನ ಸಹಾಯ ಪಡೆಯುತ್ತಿರುವ 25 ಕಂಪನಿಗಳಲ್ಲಿ 10ರಿಂದ 12 ಕಂಪನಿಗಳು ಮಾತ್ರ ಪ್ರೋತ್ಸಾಹ ಧನ ಪಡೆಯಲು ಅರ್ಹತೆ ಪಡೆದುಕೊಂಡಿವೆ. ಇದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಂಪನಿಗಳಿಗೆ ಅನ್ಯಾಯವಾಗುತ್ತಿದೆ. ರಂಗಭೂಮಿಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವ ಕಂಪನಿಗಳಿಗೆ ಗ್ರೇಡ್ ನಿಗದಿಪಡಿಸಿ ಕನಿಷ್ಠ 25 ಲಕ್ಷ ರೂ. ಪ್ರೋತ್ಸಾಹ ಧನ ನಿಗದಿಪಡಿಸಬೇಕು. ನಾಟಕ ಕಂಪನಿಗಳಿಗೆ ಪ್ರತಿದಿನಕ್ಕೆ ಕಲಾವಿದರು, ತಂತ್ರಜ್ಞರು ಸೇರಿ 25ರಿಂದ 30 ಸಾವಿರ ರೂ.ಗಳ ಖರ್ಚು ಬರುತ್ತಿದೆ. ಇದನ್ನೆಲ್ಲ ಸರ್ಕಾರ ಪರಿಗಣಿಸಬೇಕು ಎಂದು ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ಚಿಂದೋಡಿ ವಿಜಯಕುಮಾರ, ಚಿಂದೋಡಿ ಕಿಶೋರಕುಮಾರ ಇದ್ದರು.

    ಎಷ್ಟು ನಗ್ತಿ ನಗು ನಾಟಕ ಪ್ರದರ್ಶನ ಇಂದಿನಿಂದ

    ನಗರದ ಹೆಗ್ಗೇರಿಕೆರೆ ರಸ್ತೆಯ ವಿಆರ್​ಎಲ್ ಗೋದಾಮು ಪಕ್ಕದಲ್ಲಿ ಹಾಕಿರುವ ರಂಗಸಜ್ಜಿಕೆಯಲ್ಲಿ ನಾಲ್ಕನೇ ನಾಟಕವಾಗಿ ಎಷ್ಟು ನಗ್ತಿ ನಗು ಎಂಬ ಹಾಸ್ಯ ಪ್ರಧಾನ ನಾಟಕ ಪ್ರದರ್ಶನವನ್ನು ಸೆ. 11ರಿಂದ ಆರಂಭಿಸಲಾಗುವುದು. ಈ ನಾಟಕವು ಈಗಾಗಲೇ ಚಲನಚಿತ್ರವಾಗಿದ್ದು, ಹಾಸ್ಯ ಪ್ರಧಾನ ಹಾಗೂ ಕುಟುಂಬ ಸಮೇತ ನೋಡಬಹುದಾಗಿದೆ. ಜಿಲ್ಲೆಯ ಕಲಾಪ್ರೇಮಿಗಳು ನಾಟಕ ವೀಕ್ಷಿಸಿ ಪ್ರೋತ್ಸಾಹಿಸಬೇಕು. ಸೆ. 11ರಂದು ಮಧ್ಯಾಹ್ನ 2.15ಕ್ಕೆ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಚಾಲನೆ ನೀಡುವರು. ಬಣ್ಣದಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಎಸ್​ಪಿ ಹನುಮಂತರಾಯ ಅಧ್ಯಕ್ಷತೆ ವಹಿಸುವರು. ಎಎಸ್​ಪಿ ವಿಜಯಕುಮಾರ ಸಂತೋಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ಉದ್ಯಮಿ ಪವನಕುಮಾರ ದೇಸಾಯಿ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರತಿದಿನ ಮಧ್ಯಾಹ್ನ 2.15 ಹಾಗೂ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಚಿಂದೋಡಿ ಶಂಭುಲಿಂಗಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts