More

    ಅಚ್ಚುಮೆಚ್ಚಾಗಲಿ ಗುಬ್ಬಚ್ಚಿ



    ಜಗತ್ತಿನಾದ್ಯಂತ ವಿಶ್ವ ಗುಬ್ಬಚ್ಚಿ ದಿನವನ್ನು ಪ್ರತಿವರ್ಷ ಮಾರ್ಚ್ 20ರಂದು ಆಚರಿಸಲಾಗುತ್ತದೆ. ತನ್ನಿಮಿತ್ತ ಲೇಖನ.

    ನರಗುಂದ: ಪರಿಸರ ಸಮತೋಲನ ಕಾಪಾಡಲು ಪ್ರಮುಖ ಪಾತ್ರ ವಹಿಸುವ, ವಿಶ್ವದೆಲ್ಲೆಡೆ ಕಂಡು ಬರುವ ಪಾಸರೀಡೆ ಕುಟುಂಬಕ್ಕೆ ಸೇರಿರುವ ಗುಬ್ಬಚ್ಚಿಗಳ (ಗುಬ್ಬಿಗಳ) ಸಂತತಿಯೂ ಮೊಬೈಲ್​ಫೋನ್, ಟಿವಿ, ಸೆನ್ಸಾರ್ ತರಂಗಗಳ ಹೊಡೆತಕ್ಕೆ ಇತ್ತೀಚಿನ ದಿನಮಾನಗಳಲ್ಲಿ ಗಣನೀಯ ಪ್ರಮಾಣದಲ್ಲಿ ನಶಿಸಿ ಹೋಗುತ್ತಿವೆ.

    ಸಣ್ಣಪುಟ್ಟ ಕೀಟ ಹಾಗೂ ದವಸ ಧಾನ್ಯಗಳು ಈ ಪಕ್ಷಿಗಳಿಗೆ ಪ್ರಮುಖ ಆಹಾರವಾಗಿವೆ. ವಿಶ್ವದಲ್ಲಿ ಇದುವರೆಗೆ 26 ವಿವಿಧ ಜಾತಿಯ ಗುಬ್ಬಿಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಭಾರತದಲ್ಲಿ ಪಾಸರ್ ಡೊಮೆಸ್ಟಿಕಸ್, ಪಾಸರ್ ಹಿಸ್ಪಾನಿಯೊಲೆನ್ಸಸ್, ಪಾಸರ್ ಪೈರೊನಾಟಸ್, ಪಾಸರ್ ರುಟಿಲನ್ಸ್, ಪಾಸರ್ ಮೊಂಟನಸ್ ಎಂಬ ಐದು ವಿಭಿನ್ನ ಜಾತಿಯ ಗುಬ್ಬಿಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಮನೆಯ ಗುಬ್ಬಿ ಸರ್ವವ್ಯಾಪಿಯಾಗಿದ್ದು, ಇದರ ಜೀವಿತಾವಧಿ ಮೂರು ವರ್ಷವಾಗಿದೆ.

    ಆಧುನಿಕ ಕಾಂಕ್ರೀಟ್ ಕಟ್ಟಡಗಳ ನಿರ್ವಣ, ಪಕ್ಷಿಗಳು ಗೂಡು ಕಟ್ಟುವ ತಾಣಗಳ ನಾಶ, ಮೊಬೈಲ್​ಫೋನ್ ರೇಡಿಯೆಷನ್, ಶಬ್ದ ಮಾಲಿನ್ಯ, ಮೈಕ್ರೊವೇವ್ ಮಾಲಿನ್ಯ ಹಾಗೂ ಮೀತಿ ಮಿರಿದ ಕೀಟನಾಶಕದ ಬಳಕೆಯಿಂದ ಗುಬ್ಬಚ್ಚಿಗಳ ಸಂತತಿಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿದೆ.

    ಹಂಚಿನ ಹಾಗೂ ಸಾಂಪ್ರದಾಯಿಕ ಮಡಿಗೆ ಮನೆಯ ಪ್ರಾಂಗಣಗಳಲ್ಲಿ ಗುಬ್ಬಿಗಳು ಗೂಡುಗಳನ್ನು ಕಟ್ಟಿ ಸಂಸಾರ ನಡೆಸುವುದು ಸಾಮಾನ್ಯ. ನಮ್ಮ ಹಿಂದಿನ ಕಾಲದ ಹಿರಿಯರು ತಮ್ಮ ದವಸ, ಧಾನ್ಯಗಳನ್ನು ಅಂಗಡಿ/ಸಂತೆಯಿಂದ ತಂದು ಮರದಿಂದ ಸ್ವಚ್ಛಗೊಳಿಸುವಾಗ ಸ್ವಲ್ಪ ಪ್ರಮಾಣದ ಕಾಳುಗಳನ್ನು ಮನೆಯ ಅಂಗಳಗಳಲ್ಲಿ ಗುಬ್ಬಿಗೋಸ್ಕರ ಚೆಲ್ಲುತ್ತಿದ್ದರು. ಇದರಿಂದ ಗುಬ್ಬಿಗಳು ಹಾಗೂ ಇತರ ಬೇರೆ ಪಕ್ಷಿಗಳಿಗೂ ಹೇರಳವಾಗಿ ಆಹಾರ ಸಿಗುತ್ತಿತ್ತು. ಆದರೆ, ಬದಲಾದ ಆಧುನಿಕ ಜೀವನ ಶೈಲಿಯಿಂದ, ಸೀಸ ಮಿಶ್ರಿತ ಪೆಟ್ರೋಲ್ ಬಳಕೆ, ಮೊಬೈಲ್​ಫೋನ್ ಗೋಪುರಗಳಿಂದ ಹೊರಸೂಸುವ ವಿದ್ಯುತ್ ಕಾಂತೀಯ ಸೂಕ್ಷ್ಮ ತರಂಗಗಳಿಂದ ಗುಬ್ಬಿಗಳು ಮೊಟ್ಟೆಯಿಂದ ಮರಿಯಾಗುವ ಪ್ರಕ್ರಿಯೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮಿತಿಮೀರಿದ ಶಬ್ದ ಮಾಲಿನ್ಯದಿಂದಲೂ ಗುಬ್ಬಿಗಳ ಸಂತತಿ ಕ್ಷೀಣಿಸಲು ಕಾರಣವಾಗಿದೆ.

    ಐಯುಸಿಎನ್ ವರದಿಯ ಪ್ರಕಾರ ಕಳೆದ 25 ವರ್ಷಗಳಲ್ಲಿ ಗುಬ್ಬಚ್ಚಿಗಳ ಸಂತತಿಯು ಶೇ. 71ರಷ್ಟು ಕುಸಿದಿದೆ. ಈ ಸಂತತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಸಂರಕ್ಷಿಸಲು ಗುಬ್ಬಚ್ಚಿಯನ್ನು 2012ರಲ್ಲಿ ದೆಹಲಿಯ ರಾಜ್ಯ ಪಕ್ಷಿ ಎಂದು ಘೊಷಿಸಲಾಯಿತು. ಇತ್ತೀಚೆಗೆ ಬಿಹಾರ ರಾಜ್ಯವು ಕೂಡ ಗುಬ್ಬಚ್ಚಿಯನ್ನು ತನ್ನ ರಾಜ್ಯದ ಪಕ್ಷಿಯನ್ನಾಗಿ ಘೊಷಿಸಿದೆ.

    ಹೀಗೆ ಸಂರಕ್ಷಿಸಬಹದು

    ಮಾನವನ ನಿಕಟ ಸಂಬಂಧಿಯಾಗಿರುವ ಗುಬ್ಬಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿನ ಸುತ್ತಮುತ್ತ ಗಿಡ, ಮರಗಳನ್ನು ಬೆಳೆಸಬೇಕು. ಗಿಡದ ರೆಂಬೆಗಳಿಗೆ ನೀರು ತುಂಬಿದ ಮಡಿಕೆ, ಪರ್ಯಾಣ ನೇತು ಹಾಕಬೇಕು. ಮನೆಯ ತಾರಸಿಗಳ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ಸಾಕಷ್ಟು ಪ್ರಾಣಿ ಪಕ್ಷಿಗಳು ಸಾವನ್ನಪ್ಪುತ್ತವೆ. ಬೇಸಿಗೆ ಮುಗಿಯುವವರೆಗೆ ಈ ರೀತಿ ಮಾಡುವುದರಿಂದ ಕೊಂಚ ಸಮಸ್ಯೆಯನ್ನು ತಗ್ಗಿಸಬಹುದು.

    ಪರಿಸರ ಸಮತೋಲನದಲ್ಲಿ ಪ್ರಾಣಿ, ಪಕ್ಷಿಗಳ ಪಾತ್ರ ಬಹಳ ಮಹತ್ತರವಾದದ್ದು. ಗುಬ್ಬಿಗಳು ಸಾಮಾನ್ಯವಾಗಿ ಮಾನವನ ನಿಕಟ ಸಂಬಂಧಿಗಳಾಗಿದ್ದರಿಂದ ಮನೆ ಪ್ರಾಂಗಣಗಳಲ್ಲಿ ಗೂಡು ನಿರ್ವಿುಸುತ್ತವೆ. ಇವುಗಳ ಪ್ರವೇಶ ಅಪಶಕುನ ಎಂದು ಪಕ್ಷಿಗಳ ಗೂಡನ್ನು ನಾಶಪಡಿಸಬಾರದು.

    | ಮಂಜುನಾಥ ನಾಯಕ ವನ್ಯಜೀವಿ ಸಂರಕ್ಷಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts