More

    ಅಗ್ನಿಶಾಮಕ ಸಿಬ್ಬಂದಿಗೆ ಜೀವಭಯ! ದಾವಣಗೆರೆ ಫೈರ್ ಸ್ಟೇಷನ್, ವಸತಿಗೃಹಕ್ಕಿಲ್ಲ ಸುರಕ್ಷತೆ -ನೀರು ಬಸಿವ ಕಟ್ಟಡಗಳು, ಬೀಳುತ್ತಿವೆ ಛಾವಣಿ!

    ಡಿ.ಎಂ.ಮಹೇಶ್, ದಾವಣಗೆರೆ
    ದಾವಣಗೆರೆ ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುವವರಿಗೆ ಗಟ್ಟಿ ಗುಂಡಿಗೆ ಇರಬೇಕು! ವಸತಿ ಗೃಹದಲ್ಲಿನ ಸಿಬ್ಬಂದಿಯ ಕುಟುಂಬಗಳಿಗೂ ಧೈರ್ಯವೇ ಸರ್ವತ್ರ ಸಾಧನ!!
    ಕಾರಣ ಇಷ್ಟೆ. ಹೊಸ ಬಸ್ ನಿಲ್ದಾಣ ಸನಿಹದಲ್ಲಿ 60 ವರ್ಷ ಹಳೆಯದಾದ ಈ ಠಾಣೆ ಶಿಥಿಲಾವಸ್ಥೆಯಲ್ಲಿದೆ. ಸ್ಟೋರ್ ರೂಂ ಸೇರಿ ಯಾವುದೇ ಕೊಠಡಿಯಲ್ಲಿ ಕಣ್ಣಾಯಿಸಿದರೂ ಛಾವಣಿ ಕಳಚಿದ್ದು ಕಬ್ಬಿಣದ ರಾಡುಗಳು ಹೊರಗೆ ಬಂದಿವೆ! ಕೆಲವೆಡೆ ಹೊರಭಾಗದಲ್ಲಿ ಸಂಪರ್ಕ ಕಲ್ಪಿಸಲಾದ ಕರೆಂಟ್ ವೈರ್‌ಗಳು ನೇತಾಡುತ್ತಿವೆ.
    ಸಿಬ್ಬಂದಿ ವಿಶ್ರಾಂತಿ ಕೊಠಡಿಯಲ್ಲಿ ನೀರು ಬಸಿಯುತ್ತಿದೆ. ಕರೆ ಸ್ವೀಕರಿಸುವ ಸಿಬ್ಬಂದಿ ತಲೆಗೆ ಹೆಲ್ಮೆಟ್ ಹಾಕಿ ಕೂತ ನಿದರ್ಶನಕ್ಕೂ ಠಾಣೆ ಸಾಕ್ಷಿಯಾಗಿದೆ! ಹೊರಗಿನ ಛಡಿಗಳೂ ಮರಣಶಯ್ಯೆಯಲ್ಲಿವೆ. ಯಾವಾಗ ಬೇಕಾದರೂ ಬೀಳಬಹುದು; ಅವರ ತಲೆಗೆ ಅವರೇ ಜವಾಬ್ದಾರರು.
    1964ರ ಮಾರ್ಚ್ 15ರಂದು ಅಂದಿನ ಮೈಸೂರು ಸರ್ಕಾರದ ಗೃಹ ಸಚಿವ ಆರ್.ಎಂ.ಪಾಟೀಲ್ ಶಿಲಾನ್ಯಾಸ ನೆರವೇರಿಸಿದ್ದರು. ಇದೇ ಅವಧಿಯಲ್ಲಿ ನಿರ್ಮಾಣವಾಗಿದ್ದ ಬಳ್ಳಾರಿ, ಶಿವಮೊಗ್ಗ ಜಿಲ್ಲೆಯ ಅಗ್ನಿಶಾಮಕ ಠಾಣೆಗಳು ದಶಕದ ಹಿಂದೆ ಜೀರ್ಣೋದ್ಧಾರ ಕಂಡಿವೆ. ಆದರೆ ದಾವಣಗೆರೆ ಠಾಣೆ ಚಿಂತಾಜನಕ ಸ್ಥಿತಿಯಲ್ಲೇ ಇದೆ.
    ಮಳೆ ಬಂದರೆ ಸಾಕು ಠಾಣೆ, ವಸತಿಗೃಹಕ್ಕೆ ಹೋಗಲು ದಾರಿ ಬಂದಾಗುತ್ತದೆ. ರಸ್ತೆ ಮಟ್ಟಕ್ಕಿಂತ ಒಂದು ಮೀಟರ್‌ನಷ್ಟು ತಗ್ಗಿನಲ್ಲಿದ್ದು ಕಾಂಪೌಂಡ್ ಎತ್ತರಿಸಿದ್ದರೂ ಮೂರ್ನಾಲ್ಕು ಅಡಿಯಷ್ಟು ಜಲಾವೃತವಾಗುತ್ತದೆ. ರಾಜಕಾಲುವೆಯ ಕೊಳಚೆ ನೀರೂ ಪ್ರವೇಶವಾಗುತ್ತದೆ. ಪ್ರತಿ ಬಾರಿ ವಾಹನ, ಪಂಪ್ ಬಳಸಿ ಮಳೆ ನೀರನ್ನು ಹೊರಹಾಕುವ ಡ್ರಿಲ್ ಮಾಮೂಲಿ.
    ಅತಿವೃಷ್ಟಿಯಾದಾಗ ದಾಖಲಾತಿ, ಕಂಪ್ಯೂಟರ್ ಇತರ ಸಾಧನಗಳನ್ನು ರಕ್ಷಣೆ ಮಾಡಬೇಕಿದೆ. ಅಷ್ಟು ನೀರು ನಿಂತರೂ ಅದೃಷ್ಟವಶಾತ್ ಇದುವರೆಗೆ ವಿದ್ಯುತ್ ಗ್ರೌಂಡ್ ಇನ್ನಿತರೆ ಯಾವುದೇ ಅನಾಹುತವಾಗಿಲ್ಲ.
    ಇನ್ನು ಹಳೆಯದಾದ ಸಿಬ್ಬಂದಿ ವಸತಿಗೃಹದಲ್ಲಿ 32 ಮನೆಗಳಿವೆ. 2010ರಲ್ಲಿ ಹಿರಿಯ ಅಧಿಕಾರಿಗಳಿಗೆಂದೇ ನಿರ್ಮಿತ ನಾಲ್ಕು ವಸತಿ ವ್ಯವಸ್ಥೆ ಇದೆ. ಯಾವುವೂ ಸುಸ್ಥಿತಿಯಲ್ಲಿಲ್ಲ. ಹೊಸ ಕಟ್ಟಡಗಳಲ್ಲಿ ನೆಲದಲ್ಲೇ ನೀರು ಬಸಿಯುತ್ತಿದೆ.
    ಹಳೆಯ ಕಟ್ಟಡಗಳಲ್ಲಿ ಕೆಲವು ಬಳಕೆಗೆ ಯೋಗ್ಯವಿಲ್ಲದೆ ಪಾಳು ಬಿದ್ದಿವೆ. ಗೋಡೆ ಬಿರುಕು ಬಿಟ್ಟಿವೆ. ಕೆಲವು ಛಡಿಗಳು ಐಸಿಯುನಲ್ಲಿವೆ. ಸೋರುವ, ಗೋಡೆಗಳಲ್ಲಿ ನೀರು ಇಂಗುವ ಕೆಲವು ಮನೆಗಳಲ್ಲಿ ವಾಸಿಸುತ್ತಿರುವ ಸಿಬ್ಬಂದಿ ಕುಟುಂಬದವರು ಭಯದಲ್ಲೇ ದಿನ ಎಣಿಸುತ್ತಿದ್ದಾರೆ. ‘ಯಾವ ಜಿಲ್ಲೆಯಲ್ಲೂ ಇಂತಹ ಹೀನಾಯ ಸ್ಥಿತಿಯಲ್ಲಿ ವಸತಿಗೃಹಗಳಿಲ್ಲ’ ಎಂದು ಶಪಿಸುತ್ತಿದ್ದಾರೆ. ಬೆರಳೆಣಿಕೆಯವರು ಇದರ ಸಹವಾಸ ಬೇಡೆಂದು ಪ್ರತ್ಯೇಕ ಬಾಡಿಗೆ ಮನೆಯಲ್ಲಿದ್ದಾರೆ.
    ಎಂಥದ್ದೇ ಸಂದರ್ಭದಲ್ಲೂ ಅಗ್ನಿ ದುರಂತ, ಮಳೆ ಅನಾಹುತ- ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕರೆ ಬಂದರೂ ಸಾಕು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಸಹಾಯಕ ಅಧಿಕಾರಿ ಆದಿಯಾಗಿ ವಾಹನ ಚಾಲಕರು, ತಂತ್ರಜ್ಞರು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಧಾವಿಸಿ ಜನರು ಮತ್ತು ಸಾರ್ವಜನಿಕ ಆಸ್ತಿ ರಕ್ಷಣಾಕಾರ್ಯಕ್ಕೆ ಮುಂದಾಗುತ್ತಾರೆ. ಆದರೆ ಸೇವಕರು ಮತ್ತು ಅವರ ಕುಟುಂಬಕ್ಕೆ ಸುರಕ್ಷತೆ ಇಲ್ಲ ಎಂಬುದೇ ಜಿಲ್ಲೆಗೆ ಕಪ್ಪುಚುಕ್ಕೆ. ಠಾಣೆ ಹಾಗೂ ವಸತಿಗೃಹಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು ತುರ್ತು ಅಗತ್ಯವಿದ್ದು ಗೃಹ ಇಲಾಖೆ ನೆರವು ಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸಬೇಕಿದೆ.

    ಸ್ಮಾರ್ಟ್‌ಸಿಟಿ ಅನುದಾನಕ್ಕೆ ಪ್ರಸ್ತಾವ
    ಅಗ್ನಿಶಾಮಕ ಠಾಣೆ, ವಸತಿಗೃಹ ನೂತನ ಕಟ್ಟಡ ಹಾಗೂ ವಾಹನ ನಿಲುಗಡೆಗೆ ಅತ್ಯಾಧುನಿಕ ನಿಲುಗಡೆ ಕೇಂದ್ರವನ್ನು ಅನುದಾನದೊಂದಿಗೆ ಕಟ್ಟಿಸಿಕೊಡುವಂತೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ಕಂಪನಿಗೆ ಜೂ.30ರಂದು ಪ್ರಸ್ತಾವ ಸಲ್ಲಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
    ‘ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಬಂದಿದ್ದು, ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಲ್ಲಿನ ಅನುದಾನ ಬಳಸಬಹುದೇ ಬೇಡವೆ ಎಂಬುದು ಜಿಲ್ಲಾ ಸಚಿವರ ಹಂತದಲ್ಲಿ ತೀರ್ಮಾನ ಆಗಬೇಕಿದೆ’ ಎಂದು ದಾವಣಗೆರೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್‌ಕುಮಾರ್ ತಿಳಿಸಿದ್ದಾರೆ.

    ಕಳೆದ ಐದು ವರ್ಷದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅಗ್ನಿಶಾಮಕ ಠಾಣೆ, ವಸತಿಗೃಹದ ದುಸ್ಥಿತಿ ಬಗ್ಗೆ ಅವರ ಗಮನಕ್ಕೆ ಬಂದಿರಲಿಲ್ಲವೆ? ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು.
    ಎಸ್.ಎಸ್.ಮಲ್ಲಿಕಾರ್ಜುನ
    ಜಿಲ್ಲಾ ಉಸ್ತುವಾರಿ ಸಚಿವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts