More

    ಅಂಗನವಾಡಿ ಅಂಗಳದಲ್ಲಿ ಚಿಣ್ಣರ ಕಲರವ

    ಬೆಳಗಾವಿ: ಕಳೆದ ಒಂದೂವರೆ ವರ್ಷದಿಂದ ಭಣಗುಡುತ್ತಿದ್ದ ಅಂಗನವಾಡಿ ಕೇಂದ್ರಗಳ ಅಂಗಳದಲ್ಲಿ ಸೋಮವಾರ ಚಿಣ್ಣರ ಕಲರವ ಕಂಡುಬಂತು. ಕರೊನಾ ಹಾವಳಿ ತಗ್ಗಿದ್ದರಿಂದ ಅಂಗನವಾಡಿ ಪುನರಾರಂಭಗೊಂಡಿದ್ದು, ಮೊದಲ ದಿನವೇ ಮಕ್ಕಳು ಉತ್ಸಾಹದಿಂದ ಬಂದು ಆಟ-ಪಾಠದಲ್ಲಿ ನಿರತರಾದರು.

    ಇಲ್ಲಿನ ರುಕ್ಮಿಣಿ ನಗರ ಅಂಗನವಾಡಿ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಂಗೋಲಿ ಚಿತ್ತಾರ ಅರಳಿತ್ತು. ಅಧಿಕಾರಿಗಳು ಹಾಗೂ ಅಂಗನವಾಡಿ ಸಿಬ್ಬಂದಿ, ಪುಟಾಣಿಗಳಿಗೆ ಹೂವು, ಬಲೂನ್ ನೀಡಿ ಅದ್ದೂರಿ ಸ್ವಾಗತ ಕೋರಿದರು. ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜ ವರವಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 5,331 ಅಂಗನವಾಡಿ ಕೇಂದ್ರಗಳಿವೆ. 3-6 ವರ್ಷ ವಯಸ್ಸಿನ 2 ಲಕ್ಷ ಮಕ್ಕಳು ಓದುತ್ತಿದ್ದಾರೆ. ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಿದ್ದೇವೆ. ದೈಹಿಕ ಅಂತರ ಕಾಯ್ದುಕೊಂಡು ಮಕ್ಕಳಿಗೆ ಪಾಠ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪಾಲಕರು ನಿರಾತಂಕವಾಗಿ ಮಕ್ಕಳನ್ನು ಕಳುಹಿಸಿಕೊಡಬೇಕು ಎಂದು ಕೋರಿದರು.

    ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕರು ಕರೊನಾ 2ನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಕರೊನಾ ನೆಗೆಟಿವ್ ವರದಿ ಬಂದವರನ್ನೇ ಕರ್ತವ್ಯಕ್ಕೆ ನಿಯೋಜಿಸಿದ್ದೇವೆ ಎಂದು ತಿಳಿಸಿದರು. ನಗರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್.ರೊಟ್ಟಿ, ಮೇಲ್ವಿಚಾರಕಿ ರುಬಿನಾ ಮಾದಾರ ಇತರರು ಹಾಜರಿದ್ದರು. ಕೆಲ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಸೋಮವಾರದಿಂದ ಆರಂಭಗೊಂಡವು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts