More

    ತೆರಿಗೆ ಪರಿಷ್ಕರಣೆಗೆ ಡಿಸೆಂಬರ್ ಡೆಡ್​ಲೈನ್ ; ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್ ಸೂಚನೆ

    ಕೋಲಾರ: ಜಿಲ್ಲೆಯ ಎಲ್ಲ ಗ್ರಾಮಪಂಚಾಯಿತಿಗಳು ಡಿಸೆಂಬರ್ ಅಂತ್ಯದೊಳಗೆ ವೈಜ್ಞಾನಿಕವಾಗಿ ತೆರಿಗೆ ಪರಿಷ್ಕರಣೆಗೆ ಹಾಗೂ ನರೇಗಾದಡಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ವಿಶೇಷ ಪ್ರಯತ್ನ ನಡೆಸುವಂತೆ ಪಿಡಿಒ ಹಾಗೂ ಗ್ರಾಪಂ ಆಡಳಿತಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್ ಸೂಚನೆ ನೀಡಿದರು.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸ್ಥಳೀಯ ಸರ್ಕಾರವಾಗಿ ಕರ ಸಂಗ್ರಹಣೆ ಗ್ರಾಮ ಪಂಚಾಯಿತಿಯ ಪ್ರಾಥಮಿಕ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ತೆರಿಗೆ ಸಂಗ್ರಹಣೆ ಶೇ.49ರಷ್ಟಿದೆ. ಇಲಾಖೆಯ ನಿರ್ದೇಶನದಂತೆ ವೈಜ್ಞಾನಿಕವಾಗಿ ತೆರಿಗೆ ಪರಿಷ್ಕರಣೆ ಕಾರ್ಯ ನಡೆಸಿ ಡಿಸೆಂಬರ್ ಮಾಸಾಂತ್ಯದೊಳಗೆ ಮುಗಿಸಬೇಕೆಂದು ಸೂಚಿಸಿದರು.

    ಮಕ್ಕಳಿಗೂ ಹಕ್ಕುಗಳಿವೆ. ಮಕ್ಕಳ ಹಕ್ಕುಗಳ ಬಗ್ಗೆ ಗ್ರಾಮ ಸಭೆ ನಡೆಸಬೇಕು. ಗ್ರಾಪಂ ಮಟ್ಟದ ಶಿಕ್ಷಣ ಕಾರ್ಯಪಡೆ ಮಕ್ಕಳ ಹಕ್ಕುಗಳ ಕುರಿತು ಗಮನಹರಿಸಬೇಕು. 0-18 ವರ್ಷದ ಮಕ್ಕಳ ಆರೋಗ್ಯ ಸೇವೆ, ಶಾಲಾ ದಾಖಲಾತಿ ಕಾರ್ಯಪಡೆಯ ಜವಾಬ್ದಾರಿ ಎಂದರು. ದೇಶದಲ್ಲೇ ಕರ್ನಾಟಕ ಪ್ರಥಮವಾಗಿ ಓದುವ ಬೆಳಕು ಕಾರ್ಯಕ್ರಮದಡಿ ಗ್ರಂಥಾಲಯದಲ್ಲಿ ಮಕ್ಕಳಿಗೆ ಉಚಿತ ಸದಸ್ಯತ್ವ ನೀಡುತ್ತಿದೆ. ಗ್ರಂಥಾಲಯಗಳು ಜ್ಞಾನ ಕೇಂದ್ರಗಳಾಗಬೇಕು. 10 ವಾರಗಳ ಕಾರ್ಯಕ್ರಮ ರೂಪಿಸಿ ವಾರದಲ್ಲಿ ಒಂದು ದಿನ ಕಾರ್ಯಕ್ರಮ ನಡೆಸುವಂತೆ ತಿಳಿಸಿದರು.

    ನರೇಗಾದಡಿ ಮಹಿಳಾ ಪ್ರಾತಿನಿಧ್ಯ: ಮಹಿಳೆಯರಿಗೂ ಪುರುಷರಷ್ಟೇ ಸಮಾನ ವೇತನ ಸಿಗುತ್ತಿರುವುದು ನರೇಗಾದಲ್ಲಿ ಮಾತ್ರ. ನರೇಗಾದಡಿ ಮಹಿಳೆಯರ ಭಾಗವಹಿಸುವಿಕೆ ಕೇರಳದಲ್ಲಿ ಶೇ.95ರಷ್ಟಿದ್ದು, ರಾಜ್ಯದಲ್ಲಿ ಬೆಳಗಾವಿಯಲ್ಲಿ ಶೇ.76ರಷ್ಟು ಇರುವ ಮೂಲಕ ಮುಂಚೂಣಿಯಲ್ಲಿದೆ. ಕೋಲಾರ 12ನೇ ಸ್ಥಾನದಲ್ಲಿದೆ. ಈ ದಿಸೆಯಲ್ಲಿ ಪ್ರತಿ ಪಂಚಾಯಿತಿಗಳು ವಿಶೇಷ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಕರೊನಾದಿಂದಾಗಿ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಳ್ಳಲು ಸಕಾಲವಾಗಿದ್ದು, ಅಗತ್ಯ ಸಹಕಾರ ನೀಡುವಂತೆ ಬಿಇಒ ಕೆ.ಎಸ್. ನಾಗರಾಜಗೌಡ ಕೋರಿದರು.

    ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ಶಾಲೆಗಳಿಗೆ ಜಲಜೀವನ್ ಮಿಷನ್ ಅಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ನರೇಗಾದಡಿ ಪೌಷ್ಟಿಕ ಕೈ ತೋಟ ನಿರ್ವಿುಸಲು 20 ಜಾತಿಯ ಸಸಿಗಳನ್ನು ಗುರುತಿಸಿ ಸಸಿ ಪೂರೈಸಲು ನರ್ಸರಿ ಗೊತ್ತುಪಡಿಸಲಾಗಿದೆ. ಮುಖ್ಯಶಿಕ್ಷಕರು, ಸಹಶಿಕ್ಷಕರು ನಮ್ಮ ಶಾಲೆ ಎಂಬ ಭಾವನೆಯಿಂದ ಕಾರ್ಯನಿರ್ವಹಿಸಬೇಕು. ಅಗತ್ಯ ಅನುದಾನ ಒಗಿಸಲು ಸಿದ್ಧ. ಅನುದಾನ ಬಳಕೆಯಲ್ಲಿ ಲೋಪವಾದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

    ಡಿಸಿ ಸಿ.ಸತ್ಯಭಾಮ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಗ್ರಾಮೀಣ ಭಾಗದಲ್ಲಿ ಈವರೆಗೆ 2187 ಕೇಸ್ ಹಾಕಿ 1.03 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಗ್ರಾಮೀಣ ಮಟ್ಟದ ಟಾಸ್ಕ್ ಫೊರ್ಸ್ ಸಮಿತಿ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿಲ್ಲ. ದಂಡ ವಿಧಿಸಲು ಪೊಲೀಸ್ ಇಲಾಖೆ ರಸೀದಿ ಕೊರತೆ ಮುಂದಿಟ್ಟಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಬೇಕೆಂದು ಉಸ್ತುವಾರಿ ಕಾರ್ಯದರ್ಶಿಗಳನ್ನು ಕೋರಿದರು.

    ಆರ್​ಡಿಪಿಆರ್ ನಿರ್ದೇಶಕ ಅಶ್ರಫುಲ್ ಹಸನ್ ತೆರಿಗೆ ಪರಿಷ್ಕರಣೆ ಮತ್ತು ವಸೂಲಾತಿ ಕುರಿತು ಪಿಡಿಒಗಳ ಸಂದೇಹ ನಿವಾರಿಸಿದರಲ್ಲದೆ ಇನ್ನು ಮುಂದೆ ಪರವಾನಗಿ ಪ್ರಕ್ರಿಯೆ ಆನ್​ಲೈನ್ ಮೂಲಕ ನಡೆಯಲಿದೆ ಎಂದರು. ಅರ್ಜಿ ವಿಲೇವಾರಿಗೆ ನಿಗದಿಪಡಿಸಿರುವ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲಾಗುವುದು, ತಿರಸ್ಕರಿಸದಿದ್ದರೆ ಪರವಾನಗಿ ನೀಡಲಾಗಿದೆ ಎಂದು ಭಾವಿಸಲಾಗುತ್ತದೆ. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದೆ ಎಂದರು.

    ನ.14ರಿಂದ ಜ.24ರ ಒಳಗೆ ಮಕ್ಕಳ ಗ್ರಾಮಸಭೆ ನಡೆಸಬಹುದಾಗಿದ್ದು, ವೃತ್ತಿ ಮಾರ್ಗದರ್ಶನ, ಕೌಶಲ ಅಭಿವೃದ್ಧಿ ಕುರಿತು ಮಾಹಿತಿ ನೀಡಬೇಕು. ಮಹಿಳಾ ಗ್ರಾಮ ಸಭೆಗಳಲ್ಲಿ ಸಬಲೀಕರಣ, ಮಹಿಳೆಯರ ಹಕ್ಕುಗಳ ಕುರಿತು ಚರ್ಚೆ ಆಗಬೇಕು. ಆರೋಗ್ಯ, ಗ್ರಂಥಾಲಯ ಕರಗಳನ್ನು ಆಯಾ ಲೆಕ್ಕಶೀರ್ಷಿಕೆಗೆ ಜಮಾ ಮಾಡಬೇಕು. ಅಡಾಕ್ ಕಮಿಟಿ ಸಭೆ ನಡೆಸಬೇಕೆಂದು ಪಿಡಿಒಗಳಿಗೆ ಸೂಚಿಸಿದರಲ್ಲದೆ, ಲೆಕ್ಕಪರಿಶೋಧನಾ ಕಮಿಟಿ ವ್ಯಕ್ತಪಡಿಸಿರುವ ಆಕ್ಷೇಪಣೆ, ವಸೂಲಾತಿಯನ್ನು ಡಿ.15ರ ಒಳಗೆ ಪೂರ್ಣಗೊಳಿಸುವಂತೆ ಲೆಕ್ಕಾಧಿಕಾರಿ ಗಂಗಾಧರ್​ಗೆ ನಿರ್ದೇಶನ ನೀಡಿದರು.

    ನಮ್ಮ ಊರು-ನನ್ನ ದೇವರು : ರಾಮನಗರ ಜಿಲ್ಲೆಯಲ್ಲಿ ನಮ್ಮ ಊರು-ನನ್ನ ದೇವರು ಎಂಬ ಪರಿಕಲ್ಪನೆಯಲ್ಲಿ ನರೇಗಾದಡಿ ಐತಿಹಾಸಿಕ ಕಲ್ಯಾಣಿಗಳನ್ನು ಸುಂದರಗೊಳಿಸಿ ಸ್ಥಳೀಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳಿಸಲಾಗಿದೆ. ಜಿಲ್ಲೆಯಲ್ಲೂ ಸಾಕಷ್ಟು ಕಲ್ಯಾಣಿಗಳಿದ್ದು, ಲೋಕಲ್ ಟೂರಿಸಂಗೆ ಒತ್ತು ನೀಡುವಂತೆ ಉಮಾಮಹದೇವನ್ ಸೂಚಿಸಿದರು.

    ಕೋಲಾರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಡಿಸಿ ಸಿ.ಸತ್ಯಭಾಮ, ಸಿಇಒ ಎಂ.ಆರ್.ರವಿಕುಮಾರ್, ಆರ್​ಡಿಪಿಆರ್ ನಿರ್ದೇಶಕ ಅಶ್ರಫುಲ್ ಹಸನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts