More

    ಹೆಚ್ಚಾಗುತ್ತಿದೆ ಜಿಕಾ ವೈರಸ್ ಆಟಾಟೋಪ; ಮಕ್ಕಳ ಬಗ್ಗೆ ಇರಲಿ ಎಚ್ಚರ..!

    ಬೆಂಗಳೂರು: ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ವರದಿಯಾಗಿದ್ದು, ಆಂತಕ ಸೃಷ್ಟಿಸಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎನ್ನುತ್ತಾರೆ ಮಕ್ಕಳ ತಜ್ಞರು.

    ಜಿಕಾ ವೈರಸ್ ಒಂದೇ ಮಾದರಿಯ ಆರ್‌ಎನ್‌ಎ ವೈರಸ್ ಗುಂಪಿಗೆ (ಫ್ಲೇಮಿ ವೈರಸ್ ಗುಂಪು) ಸೇರಿದ್ದಾಗಿದೆ. ಈಡಿಸ್ ಜಾತಿಯ ಸೊಳ್ಳೆ ಕಚ್ಚುವುದರಿಂದ ಜಿಕಾ ಹರಡುತ್ತದೆ. ಡೆಂಘೆಗೂ ಇದೇ ಸೊಳ್ಳೆ ಕಾರಣ. ಹಳದಿ ಜ್ವರ, ಜಪಾನೀಸ್ ಎನ್ಸೆಲೈಟಿಸ್ ಮತ್ತು ವೆಸ್ಟ್​ ನೈಲ್ ವೈರಸ್​ಗಳೊಂದಿಗೆ ಇದು ನಿಕಟ ಸಂಬಂಧ ಹೊಂದಿದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

    ಈ ಕುರಿತು ನಗರದ ರೈನ್‌ಬೋ ಮಕ್ಕಳ ಆಸ್ಪತ್ರೆಯ ಸಮಾಲೋಚಕ ಡಾ. ನವೇದ್ ಅಜಮ್, ಜಿಕಾ ವೈರಸ್ ಹರಡುವಿಕೆಯ ಇತರೆ ಸ್ವರೂಪಗಳನ್ನು ವಿವರಿಸಿದ್ದಾರೆ. ನವಜಾತ ಶಿಶುವಿಗೆ ತಾಯಿಯಿಂದ, ಸೋಂಕಿತ ತಾಯಿಯ ಸ್ತನ್ಯಪಾನದಿಂದ, ಸೋಂಕಿತ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ, ರಕ್ತದ ವರ್ಗಾವಣೆ, ಅಂಗಾಂಗ ಕಸಿ ಇವು ಜಿಕಾ ವೈರಸ್ ಹರಡುವಿಕೆಗೆ ಕಾರಣಗಳಾಗಿವೆ ಎಂದಿದ್ದಾರೆ.

    ಮಕ್ಕಳ ಬಗ್ಗೆ ಎಚ್ಚರಿಕೆ ಅಗತ್ಯ:
    ಕೋವಿಡ್‌ಗಿಂತ ಭಿನ್ನವಾಗಿ, ಸುಮಾರು 20 ಪಿಸಿ ಸೋಂಕಿತ ರೋಗಿಗಳಲ್ಲಿ ಜಿಕಾ ರೋಗಲಕ್ಷಣ ಕಂಡುಬಂದಿದೆ. ಇದು ಹರಡಿದ ನಂತರದ 3 ರಿಂದ 14 ದಿನಗಳಲ್ಲಿ ರೋಗಲಕ್ಷಣಗಳು ಗೋಚರಿಸುತ್ತವೆ. ರಕ್ತದಲ್ಲಿನ ವೈರಸ್ ಮಟ್ಟ 7 ದಿನಗಳವರೆಗೆ ಹೆಚ್ಚಾಗಿರುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ 2 ವಾರಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ವೈರಸ್ ಕಂಡುಬರುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

    ಪ್ರಮುಖ ರೋಗಲಕ್ಷಣಗಳು:
    ತೀವ್ರ ಜ್ವರ, ಮ್ಯಾಕ್ಯುಲೋಪಾಪ್ಯುಲರ್ ರ‌್ಯಾಶಸ್, ಕೀಲು ನೋವು, ಕಾಂಜಂಕ್ಟಿವಿಟಿಸ್, ಮೈಯಾಲ್ಜಿಯಾ ಮತ್ತು ತಲೆನೋವು ಪ್ರಮುಖ ರೋಗ ಲಕ್ಷಣಗಳು.
    ಜಿಕಾ ವೈರಸ್ ಗರ್ಭಾವಸ್ಥೆಯಲ್ಲಿ ಕಂಡುಬಂದರೇ, ಮೈಕ್ರೊಸೆಫ್ಲೇ, ಗರ್ಭಪಾತ, ಕಷ್ಟದ ಹೆರಿಗೆ, ಕಳಪೆ ಮೆದುಳಿನ ರಚನೆಗಳು, ಕಣ್ಣಿನ ದೋಷಗಳು, ಶ್ರವಣ ದೋಷ, ದುರ್ಬಲ ಬೆಳವಣಿಗೆ ಇತ್ಯಾದಿಗೆ ಇದು ಕಾರಣವಾಗಬಹುದು ಎಂದು ವಿವರಿಸಿದ್ದಾರೆ.

    ವೈರಸ್ ತಗುಲಿದರೆ ಏನು ಮಾಡಬೇಕು?:
    ಈ ವೈರಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಸಾಮಾನ್ಯ ಜ್ವರದ ಔಷಧಿ (ಪ್ಯಾರಸಿಟಮಾಲ್), ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುವುದು, ಮತ್ತು ವಿಶ್ರಾಂತಿಯ ಮೂಲಕ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರತರವಾದ ಕಾಯಿಲೆಯ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಿಸುವುದು ಅಗತ್ಯವಾಗಬಹುದು. ಹಾಗಾಗಿ ಸೊಳ್ಳೆಗಳು ಉತ್ಪತ್ತಿ ಆಗದಂತೆ ಕ್ರಮ ವಹಿಸುವುದೊಂದಿಗೆ ಇದಕ್ಕೆ ಪರಿಹಾರ ಎಂದು ವೈದ್ಯರು ಹೇಳಿದ್ದಾರೆ.

    https://www.vijayavani.net/lambani-awards/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts