More

    ಪತ್ನಿ ಮೇಲಿರೋ ಅನುಮಾನಕ್ಕೆ ಮೂರನೇ ವ್ಯಕ್ತಿಯ ಮೊಬೈಲ್​ ಮಾಹಿತಿ ಕೇಳಿದ್ದ ಪತಿರಾಯ! ಇದಕ್ಕೆ ಹೈಕೋರ್ಟ್​ ಹೇಳಿದ್ದಿಷ್ಟು…

    ಬೆಂಗಳೂರು: ಪತ್ನಿ ಅನೈತಿಕ ಸಂಬಂಧ ಹೊಂದಿರುವ ಕುರಿತ ಪತಿಯ ಅನುಮಾನ ಸಾಬೀತುಪಡಿಸಲು ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಹಾಗೂ ಕರೆಗಳ ಮಾಹಿತಿ ಕೇಳುವ ಮೂಲಕ ಖಾಸಗಿತನದ ಹಕ್ಕಿಗೆ ಧಕ್ಕೆ ತರುವುದು ಸರಿಯಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

    ಪತಿ-ಪತ್ನಿ ನಡುವಿನ ಕೌಟುಂಬಿಕ ಪ್ರಕರಣವೊಂದರಲ್ಲಿ ತಮ್ಮ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಮೊಬೈಲ್ ನೆಟ್ವರ್ಕ್ ಕಂಪನಿಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೂರನೇ ವ್ಯಕ್ತಿ (ಪತ್ನಿಯ ಪ್ರಿಯಕರ ಎನ್ನುವುದು ಪತಿಯ ಆರೋಪ) ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಸಂವಿಧಾನದ ಪರಿಚ್ಛೇದ 21ರಡಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕಿದೆ. ಅದರಲ್ಲಿ ಖಾಸಗಿತನದ ಹಕ್ಕೂ ಸಹ ಒಳಗೊಂಡಿದೆ. ಕೌಟುಂಬಿಕ ವಿಚಾರದಲ್ಲಿ ಮೂರನೇ ವ್ಯಕ್ತಿಯ ವಿವರ ನೀಡುವಂತೆ ಆದೇಶಿಸುವ ಮೂಲಕ ಆ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಕೌಟುಂಬಿಕ ಕೋರ್ಟ್ ನೀಡಿದ್ದ ಆದೇಶ ರದ್ದುಪಡಿಸಿದೆ.

    ಕಾನೂನಿನ ಮನ್ನಣೆ ಸಾಧ್ಯವಿಲ್ಲ:
    ಪ್ರಕರಣದಲ್ಲಿ ಅರ್ಜಿದಾರರ ಮೊಬೈಲ್ ಟವರ್ ಮತ್ತು ಕರೆಗಳ ವಿವರ ಒದಗಿಸುವಂತೆ ಆದೇಶಿಸಲಾಗಿದೆ. ಇದೇ ಮೊದಲ ಬಾರಿಗೆ ಅರ್ಜಿದಾರರನ್ನು ಪ್ರಕರಣದಲ್ಲಿ ಎಳೆಯಲಾಗಿದೆ. ಅದೂ ಅನೈತಿಕ ಸಂಬಂಧದ ಕಾರಣಕ್ಕೆ. ಈ ವಿಚಾರಣೆಯಲ್ಲಿ ಆತ ಮೂರನೇ ವ್ಯಕ್ತಿಯಾಗಿದ್ದಾರೆ. ಬೇರೊಬ್ಬ ವ್ಯಕ್ತಿಯೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಪತಿಯ ಅನುಮಾನ ಸಾಬೀತುಪಡಿಸಲು ಮೂರನೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ. ಅದಕ್ಕೆ ಕಾನೂನಿನ ಮನ್ನಣೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

    ಪ್ರಕರಣವೇನು?
    ದಂಪತಿಯ ನಡುವೆ ಕೌಟುಂಬಿಕ ವ್ಯಾಜ್ಯವಿದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ದಾವೆಗಳನ್ನು ಹೂಡಿದ್ದಾರೆ. ಪತ್ನಿ ಮೂರನೇ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಅದನ್ನು ಸಾಬೀತುಪಡಿಸಲು ಆ ವ್ಯಕ್ತಿಯ ಮೊಬೈಲ್ ಕರೆ ಮತ್ತು ಟವರ್ ವಿವರಗಳನ್ನು ನೀಡುವಂತೆ ಮೊಬೈಲ್ ಕಂಪನಿಗೆ ನಿರ್ದೇಶನ ನೀಡಬೇಕೆಂದು ಕೋರಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಮಾನ್ಯ ಮಾಡಿದ್ದ ಕೋರ್ಟ್, ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಮೊಬೈಲ್ ಕಂಪನಿಗೆ 2019ರ ಫೆ.23ರಂದು ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಆ ವ್ಯಕ್ತಿ. ವಿಚ್ಚೇದನ ಪ್ರಕರಣದಲ್ಲಿ ತಾನು ಪ್ರತಿವಾದಿಯಲ್ಲದಿದ್ದರೂ ಕೋರ್ಟ್ ಈ ರೀತಿಯ ಆದೇಶ ನೀಡಿದೆ. ಮೇಲಾಗಿ, ಮೊಬೈಲ್ ಟವರ್ ಮಾಹಿತಿಯಿಂದ ನನ್ನ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕೆಂದು ಕೋರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts