More

    ನಟಿ ಅಭಿನಯಾ ತಾಯಿಯ ಶಿಕ್ಷೆ ಪ್ರಮಾಣವನ್ನು 2 ವರ್ಷದಿಂದ 5 ವರ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್!

    ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಹಿಂದಿನ ಪ್ರಕರಣದಲ್ಲಿ ನಟಿ ಅಭಿನಯ ಮತ್ತವರ ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜ್‌ಗೆ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ತೀರ್ಪು ನೀಡಿದೆ. ಲಕ್ಷ್ಮೀದೇವಿ ಎಂಬುವರಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣದಿಂದ ಅಭಿನಯ ಸೇರಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಕೋರಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ದೂರುದಾರೆ ಲಕ್ಷ್ಮೀದೇವಿ ಸಹ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.

    ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರೀ ಅವರಿದ್ದ ಪೀಠ ಪ್ರಕಟಿಸಿದ್ದು, ಆರೋಪಿಗಳನ್ನು ಖುಲಾಸೆಗೊಳಿಸಿ ಸೆಷನ್ಸ್ ನ್ಯಾಯಾಲಯ 2012ರ ಮಾ.9ರಂದು ನೀಡಿದ್ದ ಆದೇಶವನ್ನು ರದ್ದುಪಡಿಸಿದೆ. ಜತೆಗೆ, ಪ್ರಕರಣದಲ್ಲಿ ಅಭಿನಯ ಮತ್ತವರ ಕುಟುಂಬ ಸದಸ್ಯರನ್ನು ದೋಷಿಗಳೆಂದು ತೀರ್ಮಾನಿಸಿ 2010ರ ಜ.5ರಂದು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಹೊರಡಿಸಿದ್ದ ಆದೇಶ ಎತ್ತಿಹಿಡಿದಿದೆ.

    ಮೇಲ್ಮನವಿ ವಿಚಾರಣಾ ಹಂತದಲ್ಲಿದ್ದಾಗಲೇ ಮೊದಲ ಆರೋಪಿ ಶ್ರೀನಿವಾಸ್ ಹಾಗೂ ಎರಡನೇ ಆರೋಪಿ ರಾಮಕೃಷ್ಣ ಮೃತಪಟ್ಟಿದ್ದರು. ಇದರಿಂದ, ಹೈಕೋರ್ಟ್ ಅವರನ್ನು ಪ್ರಕರಣದಿಂದ ಕೈಬಿಟ್ಟಿತು. ಇದೀಗ, ಮ್ಯಾಜಿಸ್ಟ್ರೇಟ್ ಕೋರ್ಟ್ 3ನೇ ಆರೋಪಿ ಜಯಮ್ಮ, 4ನೇ ಆರೋಪಿ ಚೆಲುವರಾಜ್ ಹಾಗೂ 5ನೇ ಆರೋಪಿ ಅಭಿನಯ ಅವರಿಗೆ ಐಪಿಸಿ ಸೆಕ್ಷನ್ 498-ಎ ಅಡಿಯಲ್ಲಿ ವಿಧಿಸಿದ್ದ 2 ವರ್ಷ ಶಿಕ್ಷೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 4ರ ಅಡಿ ಜಯಮ್ಮ ಅವರಿಗೆ ವಿಧಿಸಿದ್ದ 2 ವರ್ಷ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, ಸೆಕ್ಷನ್ 3ರ ಅಡಿ ಜಯಮ್ಮ ಅವರಿಗೆ ವಿಧಿಸಿದ್ದ 2 ವರ್ಷ ಶಿಕ್ಷೆಯನ್ನು 5 ವರ್ಷಕ್ಕೆ ಹೆಚ್ಚಿಸಿದೆ. ಸೆಕ್ಷನ್ 3ರ ಅಡಿಯಲ್ಲಿ ಅಪರಾಧ ಸಾಬೀತಾದರೆ, ಕನಿಷ್ಠ 5 ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ, ಎಸಿಎಂಎಂ ಕೋರ್ಟ್ ವಿಧಿಸಿರುವ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸುವ ಅಗತ್ಯತೆ ಇದೆ ಎಂದು ಹೈಕೋರ್ಟ್ ಹೇಳಿದೆ.

    ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಒದಗಿಸಿರುವ ಸಾಕ್ಷಾೃಧಾರಗಳು ಆರೋಪಿಗಳು ಕೃತ್ಯ ಎಸಗಿರುವುದನ್ನು ಸಾಬೀತುಪಡಿಸುತ್ತಿವೆ. ಅದರ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರನ್ನು ದೋಷಿಗಳೆಂದು ತೀರ್ಮಾನಿಸಿದೆ. ಹೀಗಿದ್ದರೂ ಸೆಷನ್ಸ್ ನ್ಯಾಯಾಲಯ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಹೊರಡಿಸಿರುವ ಆದೇಶ ಲೋಪದಿಂದ ಕೂಡಿದೆ ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

    ಪ್ರಕರಣವೇನು?
    ಪ್ರಕರಣದ ದೂರು ಹಾಗೂ ಸಾಕ್ಷ್ಯಗಳ ಪ್ರಕಾರ, ನಟಿ ಅಭಿನಯ ಅವರ ಅಣ್ಣ ಶ್ರೀನಿವಾಸ್ ಹಾಗೂ ಲಕ್ಷ್ಮೀದೇವಿ ಅವರ ವಿವಾರ 1998ರ ಮಾ.23ರಂದು ನಡೆದಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ 80 ಸಾವಿರ ರೂ. ನಗದು ಹಾಗೂ 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ಅದಾದ ನಂತರವೂ ಹೆಚ್ಚುವರಿ 20 ಸಾವಿರ ರೂ. ಪಡೆದಿದ್ದರು. ಈ ಮಧ್ಯೆ ಗರ್ಭಿಣಿಯಾಗಿದ್ದ ಲಕ್ಷ್ಮೀದೇವಿ ತವರು ಮನೆಗೆ ತೆರಳಿದ್ದರು. 1999ರ ಅ.24ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ವರ್ಷಗಳು ಕಳೆದರೂ ಲಕ್ಷ್ಮೀದೇವಿ ಮತ್ತು ಮಗುವನ್ನು ಶ್ರೀನಿವಾಸ್ ಮನೆಗೆ ಕರೆಸಿಕೊಂಡಿರಲಿಲ್ಲ.

    ಇದರಿಂದ, 2002ರ ನ.9ರಂದು ಲಕ್ಷ್ಮೀದೇವಿ ತಂದೆಯೇ ಮನೆಗೆ ತೆರಳಿ, ಮಗಳು ಹಾಗೂ ಮೊಮ್ಮಗನನ್ನು ಮನೆಗೆ ಕರೆಸಿಕೊಳ್ಳುವಂತೆ ಕೇಳಿಕೊಂಡಿದ್ದರು. ಅದಕ್ಕೆ ನಿರಾಕರಿಸಿದ್ದ ಶ್ರೀನಿವಾಸ್ ಮತ್ತವರ ಕುಟುಂಬದವರು 1 ಲಕ್ಷ ರೂ. ವರದಕ್ಷಿಣೆ ನೀಡುವವರೆಗೂ ಲಕ್ಷ್ಮೀದೇವಿಯನ್ನು ಮನೆಗೆ ಸೇರಿಸುವುದಿಲ್ಲ ಎಂದು ಹೇಳಿದ್ದರಲ್ಲದೆ, ಅವರ ತಂದೆಗೆ ನಿಂದಿಸಿ, ಅಪಮಾನ ಮಾಡಿ ಕಳುಹಿಸಿದ್ದರು.

    ಘಟನೆಯ ಮರುದಿನವೇ ಲಕ್ಷ್ಮೀದೇವಿ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ಪತಿ ಶ್ರೀನಿವಾಸ್, ಮಾವ ರಾಮಕೃಷ್ಣ, ಅತ್ತೆ ಜಯಮ್ಮ, ಮೈದುನ ಚೆಲುರಾಜ್ ಹಾಗೂ ನಾದಿನಿ ಅಭಿನಯ ವಿರುದ್ಧ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498-ಎ (ವರದಕ್ಷಿಣೆ ಕಿರುಕುಳ) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಹಾಗೂ 4ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

    ದೋಷಿಗಳೆಂದು ತೀರ್ಮಾನಿಸಿದ್ದ ಎಸಿಎಂಎಂ ಕೋರ್ಟ್:
    ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, ಶ್ರೀನಿವಾಸ್ ಮತ್ತವರ ಕುಟುಂಬ ಸದಸ್ಯರನ್ನು ದೋಷಿಗಳೆಂದು ತೀರ್ಮಾನಿಸಿ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಗಳೆಲ್ಲರಿಗೂ ತಲಾ 2 ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿತ್ತು. ಜತೆಗೆ, ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಜಯಮ್ಮ ಅವರಿಗೆ 2 ವರ್ಷ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ಮತ್ತು ಸೆಕ್ಷನ್ 4ರ ಅಡಿಯಲ್ಲಿ 6 ತಿಂಗಳು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 2010ರ ಜ.5ರಂದು ಆದೇಶಿಸಿತ್ತು.

    ಇದನ್ನು ಪ್ರಶ್ನಿಸಿ ಆರೋಪಿಗಳೆಲ್ಲರೂ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ, ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3ರ ಅಡಿ ವಿಧಿಸಲಾಗಿರುವ ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಕೋರಿ ಸರ್ಕಾರ ಸಹ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, ಆರೋಪಿಗಳ ಮೇಲ್ಮನವಿ ಮಾನ್ಯ ಮಾಡಿ, ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತಲ್ಲದೆ, ಶಿಕ್ಷೆಯ ಪ್ರಮಾಣ ಹೆಚ್ಚಳಕ್ಕೆ ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ, 2012ರ ಮಾ.9ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹಾಗೂ ದೂರುದಾರೆ ಲಕ್ಷ್ಮೀದೇವಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts