More

    ಪುಣೆಯಲ್ಲಿ ಕಂಡು ಬಂತು ಝೀಕಾ ವೈರಸ್​! ಆ ವ್ಯಕ್ತಿಗೆ ಇದ್ದ ರೋಗ ಲಕ್ಷಣ ಹೀಗಿದೆ…

    ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬವ್ಧಾನ್ ಪ್ರದೇಶದಲ್ಲಿ 67 ವರ್ಷದ ವ್ಯಕ್ತಿಯೊಬ್ಬರಿಗೆ ಝಿಕಾ ವೈರಸ್ ತಗುಲಿದೆ ಎಂದು ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ. ಸೋಂಕಿತ ವ್ಯಕ್ತಿ ನಾಸಿಕ್ ನಿವಾಸಿಯಾಗಿದ್ದು, ನವೆಂಬರ್ 6 ರಂದು ಪುಣೆಗೆ ಬಂದಿದ್ದರು.

    ರೋಗಿ ನ.16 ರಂದು ಜ್ವರ, ಕೆಮ್ಮು, ಕೀಲು ನೋವು ಮತ್ತು ಆಯಾಸದಿಂದ ಜಹಾಂಗೀರ್ ಆಸ್ಪತ್ರೆಗೆ ಬಂದಿದ್ದರು. ನ.18 ರಂದು ಖಾಸಗಿ ಪ್ರಯೋಗಾಲಯದಲ್ಲಿ ಅವರಿಗೆ ಝಿಕಾ ವೈರಸ್ ಇರುವುದು ಖಚಿತವಾಗಿದೆ. ರೋಗಿಯ ಆರೋಗ್ಯ ಈಗ ಸ್ಥಿರವಾಗಿದ್ದು ಯಾವುದೇ ತೊಂದರೆಗಳಿಲ್ಲ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ತಿಳಿಸಿದೆ.

    ಭವಿಷ್ಯದಲ್ಲಿ ಝೀಕಾ ವೈರಸ್​ ಏಕಾಏಕಿ ಹರಡುವುದನ್ನು ತಗ್ಗಿಸಲು ಪುಣೆ ನಗರದಾದ್ಯಂತ ಝಿಕಾ ವೈರಸ್‌ನ ಕೀಟಶಾಸ್ತ್ರೀಯ ಸಮೀಕ್ಷೆಗೆ ಅಧಿಕಾರಿಗಳು ಆದೇಶಿಸಿದ್ದಾರೆ. ನಗರದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

    ಮಹಾರಾಷ್ಟ್ರದಲ್ಲಿ ಇದು ಝಿಕಾ ವೈರಸ್‌ನ ಮೂರನೇ ಪ್ರಕರಣವಾಗಿದೆ. ಇದಕ್ಕೂ ಮೊದಲು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಗೆ ಸೊಳ್ಳೆ ಕಡಿತದಿಂದ ಈ ವೈರಸ್ ಸೋಂಕು ತಗುಲಿತ್ತು. ಇದಕ್ಕೂ ಮೊದಲು, ಕಳೆದ ವರ್ಷ ಜುಲೈನಲ್ಲಿ ಪುಣೆಯಲ್ಲಿ ಮೊದಲ ರೋಗಿ ಪತ್ತೆಯಾಗಿದ್ದರು.

    1947 ರಲ್ಲಿ ಉಗಾಂಡಾದ ಕೋತಿಯಲ್ಲಿ ಮೊದಲ ಬಾರಿಗೆ ಪತ್ತೆಯಾದ ಝೀಕಾ ವೈರಸ್ 2007 ರಲ್ಲಿ ಮೈಕ್ರೋನೇಷಿಯಾದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕವಾಗಿ ಹರಡಿ ಎಲ್ಲರಲ್ಲಿ ಆತಂಕ ಉಂಟುಮಾಡಿತ್ತು. 2015 ರಲ್ಲಿ ಲ್ಯಾಟಿನ್ ಅಮೆರಿಕಾದಲ್ಲಿ, ವಿಶೇಷವಾಗಿ ಬ್ರೆಜಿಲ್​ನಲ್ಲಿ ಸ್ಫೋಟಿಸಿತ್ತು. ಇದು ಈಡಿಸ್ ಸೊಳ್ಳೆಯಿಂದ ಹರಡುವ ವೈರಸ್‌ನಿಂದ ಉಂಟಾಗುತ್ತದೆ. ಝಿಕಾ ವೈರಸ್‌ನ ಲಕ್ಷಣಗಳಲ್ಲಿ ಸೌಮ್ಯ ಜ್ವರ, ದದ್ದುಗಳು, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಅಥವಾ ತಲೆನೋವು ಸೇರಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts