

ಭುವನೇಶ್ವರ: ಎಲ್ಲವೂ ಮುಗಿಯಿತು. ಇನ್ನು ನಮ್ಮ ಬದುಕು ಮತ್ತೆ ಸರಿದಾರಿಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಎಂಬಂತೆ ದೇಶದಲ್ಲಿ ಎದ್ದಿರುವ ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆ ಜನರನ್ನು ಭಾರಿ ಆತಂಕಕ್ಕೆ ದೂಡಿದೆ.
ದಿನೇದಿನೆ ಪ್ರಕರಣಗಳ ಸಂಖ್ಯೆಯ ಜತೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ ಐಎಂಎಸ್ ಮತ್ತು ಎಸ್ಯುಎಂ ಆಸ್ಪತ್ರೆಯ 34 ವರ್ಷದ ಯುವ ವೈದ್ಯರೊಬ್ಬರು ಕರೊನಾಗೆ ಬಲಿಯಾಗಿದ್ದಾರೆ. ಕರ್ತವ್ಯದಲ್ಲಿ ಇರುವಾಗಲೇ ಶನಿವಾರ ಅಸುನೀಗಿದ್ದಾರೆ.
ಮೃತ ವೈದ್ಯರನ್ನು ಹೃದಾನಂದಾ ಭುಯಾನ್ ಎಂದು ಗುರುತಿಸಲಾಗಿದೆ. ಇವರು ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಕಳೆದ ಕೆಲವು ದಿನಗಳಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ಭುಯಾನ್, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಭುಯಾನ್ ಅವರಿಗೆ ಕಳೆದ ವರ್ಷವಷ್ಟೇ ಮದುವೆ ಆಗಿತ್ತು. ಇವರಿಗೆ ಸಕ್ಕರೆ ರೋಗ, ಅಧಿಕ ಒತ್ತಡ ಸೇರಿದಂತೆ ಇತರೆ ಯಾವುದೇ ರೀತಿಯ ಕಾಯಿಲೆ ಇರಲಿಲ್ಲ. ಆದರೂ ಕರೊನಾ ಮಹಾಮಾರಿಗೆ ಬಲಿಯಾಗಿರುವುದು ಇತರರ ಆತಂಕಕ್ಕೆ ಕಾರಣವಾಗಿದೆ. ಸಹೋದ್ಯೋಗಿಗಳ ನಡುವೆ ಒಳ್ಳೆಯ ಸ್ನೇಹ ಸಂಬಂಧವನ್ನು ಭುಯಾನ್ ಹೊಂದಿದ್ದರು. ಇದೀಗ ಅವರ ಅಕಾಲಿಕ ಮರಣದಿಂದಾಗಿ ಇಡೀ ವೈದ್ಯಕೀಯ ಬಳಗವು ಸಂತಾಪ ವ್ಯಕ್ತಪಡಿಸಿದೆ.
ಕೆಲಸದಲ್ಲೂ ಸಹ ಭುಯಾನ್ ಅವರು ಒಳ್ಳೆಯ ಹೆಸರು ಮಾಡಿದ್ದರು. ಅಲ್ಲದೆ, ಅನೇಕರಿಗೆ ಸ್ಫೂರ್ತಿ ಸಹ ಆಗಿದ್ದರು. ಹೀಗಾಗಿ ಭುಯಾನ್ ಸೇವೆಯನ್ನು ಪರಿಗಣಿಸಿ ಸರ್ಕಾರ ಅವರಿಗೆ ಸಕಲ ಸರ್ಕಾರಿ ಗೌರವವನ್ನು ನೀಡಬೇಕೆಂದು ವೈದ್ಯ ಬಳಗ ಮನವಿ ಮಾಡಿಕೊಂಡಿದೆ. (ಏಜೆನ್ಸೀಸ್)