More

    ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮರಳಿ ಸೇರಿಕೊಳ್ಳುವ ಸುಳಿವು ನೀಡಿದ ಸುರೇಶ್ ರೈನಾ

    ನವದೆಹಲಿ: ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಐಪಿಎಲ್ ಟೂರ್ನಿಯನ್ನು ತ್ಯಜಿಸಿ ದಿಢೀರ್ ತವರಿಗೆ ಮರಳಿದ ಬಳಿಕ ಅದಕ್ಕೆ ವಿವಿಧ ಕಾರಣಗಳ ಊಹಾಪೋಹಗಳು ಹರಿದಾಡಿದ್ದವು. ಇದೀಗ ಮೌನ ಮುರಿದಿರುವ ಸುರೇಶ್ ರೈನಾ, ಕರೊನಾ ಭೀತಿ ಮತ್ತು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಿ ಯುಎಇಯಿಂದ ತವರಿಗೆ ವಾಪಸ್ ಬಂದೆ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ದುಬೈನಲ್ಲಿ ಮತ್ತೆ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಕೂಡಿಕೊಳ್ಳುವ ಸುಳಿವನ್ನೂ ನೀಡಿದ್ದಾರೆ. ಜತೆಗೆ, ಸಿಎಸ್‌ಕೆ ಮಾಲೀಕ ಎನ್. ಶ್ರೀನಿವಾಸನ್ ತಮಗೆ ತಂದೆ ಸಮಾನರು ಮತ್ತು ತಮ್ಮನ್ನು ಬೈಯ್ಯಲು ಅವರಿಗೆ ಎಲ್ಲ ಹಕ್ಕು ಇದೆ ಎಂದಿದ್ದಾರೆ.

    ಸೆಪ್ಟೆಂಬರ್ 19ರಂದು ಐಪಿಎಲ್ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕೆ ಮುನ್ನವೇ ಸುರೇಶ್ ರೈನಾ ತಂಡವನ್ನು ಮರಳಿ ಕೂಡಿಕೊಳ್ಳುವರೇ ಎಂಬ ಪ್ರಶ್ನೆಯೂ ಎದ್ದಿದೆ. ಅವರು ಆಗಸ್ಟ್ 15ರಂದು ಎಂಎಸ್ ಧೋನಿ ಬೆನ್ನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆದರೆ ಐಪಿಎಲ್‌ನಲ್ಲಿ ಇನ್ನೂ 4-5 ವರ್ಷಗಳ ಕಾಲ ಆಡುವೆ ಎಂದು ಹೇಳಿದ್ದಾರೆ.

    ‘ದುಬೈನಿಂದ ಮರಳಿ ಬರುವುದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು. ಕುಟುಂಬಕ್ಕಾಗಿ ನಾನು ಮರಳಿ ಬಂದೆ. ಬಯೋ-ಬಬಲ್ ಸಂಪೂರ್ಣ ಸುರಕ್ಷಿತವಲ್ಲ ಎನ್ನಲಾಗಿರುವ ಕಾರಣ ನಾನು ಭೀತಿಗೆ ಒಳಗಾದೆ. ಇಬ್ಬರು ಚಿಕ್ಕ ಮಕ್ಕಳು ಮತ್ತು ಹಿರಿಯರಿರುವ ಕುಟುಂಬ ನನ್ನದು. ಸಿಎಸ್‌ಕೆ ಕೂಡ ನನಗೆ ಕುಟುಂಬ ಇದ್ದಂತೆ. ಮಹಿ ಭಾಯಿ (ಎಂಎಸ್ ಧೋನಿ) ಕೂಡ ನನಗೆ ಅತ್ಯಂತ ಪ್ರಮುಖರು. ಹೀಗಾಗಿ ಇದೊಂದು ಕಠಿಣ ನಿರ್ಧಾರವಾಗಿತ್ತು’ ಎಂದು ರೈನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಸಮಬಲಕ್ಕೆ ತೃಪ್ತಿಪಟ್ಟ ಇಂಗ್ಲೆಂಡ್

    ‘ಸಿಎಸ್‌ಕೆ ತಂಡ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾರೂ 12.5 ಕೋಟಿ ರೂ. ಮೊತ್ತದ ಸಂಭಾವನೆಯನ್ನು ಪಕ್ಕಕ್ಕಿಟ್ಟು, ಕಾರಣವಿಲ್ಲದೆ ಹೊರನಡೆಯುವುದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಾನು ನಿವೃತ್ತಿ ಹೊಂದಿರಬಹುದು. ಆದರೆ ಐಪಿಎಲ್‌ನಲ್ಲಿ ಇನ್ನೂ 4-5 ವರ್ಷಗಳ ಕಾಲ ಆಡುವತ್ತ ಗಮನ ಹರಿಸಿದ್ದೇನೆ’ ಎಂದು ರೈನಾ ವಿವರಿಸಿದ್ದಾರೆ.

    ‘ನಾನೀಗ ತವರಿಗೆ ಮರಳಿದ ಬಳಿಕ ಕ್ವಾರಂಟೈನ್‌ನಲ್ಲಿದ್ದರೂ, ಟ್ರೇನಿಂಗ್ ಮುಂದುವರಿಸಿದ್ದೇನೆ. ಯಾರಿಗೆ ಗೊತ್ತು, ನೀವು ಮತ್ತೊಮ್ಮೆ ನನ್ನನ್ನು ಸಿಎಸ್‌ಕೆ ತಂಡದ ಶಿಬಿರದಲ್ಲಿ ನೋಡಬಹುದು’ ಎಂದು 33 ವರ್ಷದ ರೈನಾ ಹೇಳಿದ್ದಾರೆ. ಆದರೆ ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಮಾತ್ರ, ರೈನಾ ಈ ವರ್ಷದ ಐಪಿಎಲ್‌ನಲ್ಲಿ ಮರಳಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಆದರೆ ಮುಂದಿನ ವರ್ಷದ ಟೂರ್ನಿಗೆ ಮರಳಿ ಬರಬಹುದು ಎಂದಿದ್ದಾರೆ.

    ಕರೊನಾವನ್ನು ಮಣಿಸಿದ ಕುಸ್ತಿ ತಾರೆ ವಿನೇಶ್ ಪೋಗಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts