More

    ಕೊಕ್ಕರ್ಣೆಯಲ್ಲಿ ಹಳದಿ ಕಪ್ಪೆಗಳ ಹಿಂಡು

    ಉಡುಪಿ/ಕೊಕ್ಕರ್ಣೆ: ನಾಲ್ಕೂರು ಗ್ರಾಮದ ಅರ್ಬಿ ಎಂಬಲ್ಲಿ ಕೃಷಿಕ ರಾಘವೇಂದ್ರ ನಾಯ್ಕ ಎಂಬುವರ ಜಮೀನಿನಲ್ಲಿ ನೂರಾರು ಸಂಖ್ಯೆಯಲ್ಲಿ ಹಳದಿ ಬಣ್ಣದ ಕಪ್ಪೆಗಳು ಕಾಣಸಿಕ್ಕಿವೆ. ಅಕ್ಕಪಕ್ಕದ ಕೃಷಿಭೂಮಿಯಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಹಳದಿ ಬಣ್ಣದ ಕಪ್ಪೆಗಳು ಕಂಡುಬಂದಿದ್ದು, ಸ್ಥಳೀಯರು ಒಂದೇ ರೀತಿ ಬಣ್ಣದ ರಾಶಿ ರಾಶಿ ಕಪ್ಪೆಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಇದನ್ನು ಇಂಡಿಯನ್ ಬುಲ್ ಫ್ರಾಗ್ (ಭಾರತದ ಗೂಳಿ ಕಪ್ಪೆ) ಎಂಬ ಹೆಸರಿನಿಂದ ಗುರುತಿಸಲಾಗಿದೆ ಎಂದು ಕಪ್ಪೆ ಸಂಶೋಧಕ ಡಾ.ಗುರುರಾಜ್ ಕೆ.ವಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಮಳೆಗಾಲದಲ್ಲಿ ಹಾರ್ಮೋನ್ ಬದಲಾವಣೆಯಾಗಿ ಮೈಬಣ್ಣ ಕಂದು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ಹೀಗೆ ಬಣ್ಣ ಬದಲಾಯಿಸಿ, ಸಂತಾನಭಿವೃದ್ಧಿ ಮಾಡಲಾಗುತ್ತದೆ. ಆರಂಭದಲ್ಲಿ ಮಳೆ ಬೀಳುವ ಪ್ರದೇಶ, ಹೆಚ್ಚಾಗಿ ನೀರು ನಿಂತ ಜಾಗದಲ್ಲಿ ಇವುಗಳು ಇರುತ್ತವೆ. ಕಪ್ಪೆಗಳಲ್ಲಿ ಲಿಂಗಾನುಪಾತ ಒಂದು ಹೆಣ್ಣಿಗೆ 10 ಅಥವಾ ಅದಕ್ಕಿಂತ ಹೆಚ್ಚು ಗಂಡು ಕಪ್ಪೆಗಳು. ಆದ್ದರಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಒಟ್ಟುಗೂಡುತ್ತವೆ. ಬಣ್ಣ, ಗಾತ್ರ, ಕೂಗುವ ಶೈಲಿ ಗಮನಿಸಿ ಹೆಣ್ಣು ಕಪ್ಪೆ ತನಗೆ ಆಕರ್ಷಕವಾಗಿ ಕಾಣುವ ಗಂಡು ಕಪ್ಪೆಯನ್ನು ಕೂಡಲು ಬಯಸುತ್ತದೆ. ನಿಂತ ನೀರಿನಲ್ಲಿ ಈ ಕಪ್ಪೆಗಳು ಮೊಟ್ಟೆ ಇಡುತ್ತವೆ.

    ಪಶ್ಚಿಮಘಟ್ಟ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ಸಮಾನ್ಯ. ಇದರಿಂದ ಪ್ರಕೃತಿಗೆ ಮತ್ತು ಮನುಷ್ಯರಿಗೆ ಯಾವುದೇ ಅಪಾಯ ಇಲ್ಲ. ಇದೊಂದು ಜೀವ ವೈವಿಧ್ಯತೆಯ ಸುಂದರ ವಿದ್ಯಮಾನ.
    – ಡಾ.ಗುರುರಾಜ್ ಕೆ.ವಿ., ಕಪ್ಪೆ ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts