More

    ಯಡಿಯೂರಪ್ಪ ಮಾಗಿದ ವ್ಯಕ್ತಿತ್ವ ಸಾಬೀತು; ರಾಜ್ಯ ಬಿಜೆಪಿಗೆ ಬಿಎಸ್​ವೈ ಅನಿವಾರ್ಯ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಹೈಕಮಾಂಡ್ ಹೇಳಿದ ದಿನ ರಾಜೀನಾಮೆ ಎಂಬ ಯಡಿಯೂರಪ್ಪ ಹೇಳಿಕೆಯ ಬಗ್ಗೆ ರಾಜಕೀಯ ವಿಶ್ಲೇಷಕರು ನಾನಾ ರೀತಿಯ ವ್ಯಾಖ್ಯಾನ ಮುಂದುವರಿಸಿದ್ದಾರೆ. ಯಡಿಯೂರಪ್ಪರ ಮಾತು ಮೇಲ್ನೋಟಕ್ಕೆ ರಾಜ್ಯದಲ್ಲಿ ಅವರ ವಿರೋಧಿಗಳಿಗೆ ನೀಡಿರುವ ಎಚ್ಚರಿಕೆಯ ಸಂದೇಶ ಎಂದೇ ಹೇಳಲಾಗುತ್ತಿದೆ. ಆದರೆ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿದರೆ, ಅದು ನೇರವಾಗಿ ಪಕ್ಷದ ಹೈಕಮಾಂಡ್​ಗೆ ವಾಸ್ತವವನ್ನು ಸ್ಪಷ್ಟಪಡಿಸಿದಂತಿದೆ. ರಾಜಕೀಯದಲ್ಲಿ ಯಾವತ್ತೂ ಎರಡು ಎರಡು ನಾಲ್ಕು ಆಗುವುದಿಲ್ಲ. ಇಲ್ಲಿನ ಬೆಳವಣಿಗೆಗಳು ಅದನ್ನೇ ಹೇಳುತ್ತವೆ. ಅದೆಲ್ಲವೂ ಗೊತ್ತಿರುವುದರಿಂದಲೇ ಯಡಿಯೂರಪ್ಪರ ಸಹನೆಯ ಕಟ್ಟೆಯೊಡೆದಿದೆ.

    ನಾಯಕತ್ವ ಬದಲಾವಣೆ ಸುಲಭವಲ್ಲ: ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಕೆಲ ಅತೃಪ್ತ ಮನಸ್ಸುಗಳು ಕಳೆದ ಕೆಲ ತಿಂಗಳಿನಿಂದ ಪ್ರಯತ್ನ ನಡೆಸಿವೆ. ಹೈಕಮಾಂಡ್ ಅಂಗಳದಲ್ಲಿಯೂ ಕೆಲ ಮನಸ್ಸುಗಳು ನೀರೆರಚಿ ಪೋಷಿಸುತ್ತಿವೆ. ಆದರೆ ಯಡಿಯೂರಪ್ಪರನ್ನು ಪದಚ್ಯುತಗೊಳಿಸುವ ಕೆಲಸ ಅಷ್ಟು ಸುಲಭವಿಲ್ಲ. ಹಿಂದೆ ನರೇಂದ್ರ ಮೋದಿ ಗುಜರಾತ್​ನ ಮುಖ್ಯಮಂತ್ರಿಯಾಗಿದ್ದಾಗ ಆ ರಾಜ್ಯದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆಗಲೂ ರಾಜ್ಯದಲ್ಲಿ 19 ಸ್ಥಾನಗಳನ್ನು ಯಡಿಯೂರಪ್ಪ ಗೆಲ್ಲಿಸಿಕೊಂಡಿದ್ದರು. ಈಗ ರಾಜ್ಯದಲ್ಲಿ 25 ಸ್ಥಾನಗಳನ್ನು ಯಡಿಯೂರಪ್ಪರ ಬಲದಿಂದ ಗೆಲ್ಲಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದರೆ ಯಡಿಯೂರಪ್ಪರ ನಾಮಬಲದ ಅಗತ್ಯ ಇದ್ದೇ ಇದೆ. ವಿಧಾನಸಭೆಯಲ್ಲಿಯೂ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಬೇಕೆ ಬೇಕು. ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಅದು ಚೆನ್ನಾಗಿಯೇ ಗೊತ್ತಿದೆ. ಅದು ಯಡಿಯೂರಪ್ಪ ಅವರಿಗೂ ತಿಳಿದಿದೆ. ಪರ್ಯಾಯ ಕುರಿತಂತೆ ಯಡಿಯೂರಪ್ಪ ದೊಡ್ಡ ಮನಸ್ಸಿನಿಂದ ಹೇಳಿದ್ದಾರೆ. ಆದರೆ ಈ ಹಿಂದೆಯೇ ಪರ್ಯಾಯದ ಪ್ರಯೋಗವನ್ನು ಮಾಡಿ ಬಿಜೆಪಿ ಸೋತಿದೆ. ಒಕ್ಕಲಿಗರಾದ ಸದಾನಂದಗೌಡ ಹಾಗೂ ಲಿಂಗಾಯಿತ ಸಮುದಾಯದ ಜಗದೀಶ ಶೆಟ್ಟರ್ ಅವರನ್ನು ಅಧಿಕಾರದ ಗದ್ದುಗೆ ತಂದು ಮಾಡಿದ ಪ್ರಯೋಗ ಯಡಿಯೂರಪ್ಪ ಅವರ ನಾಮಬಲವಿಲ್ಲದೇ ವಿಫಲವಾಗಿತ್ತು. ಹೀಗಾಗಿ ಮತ್ತೊಮ್ಮೆ ಅಂಥ ಪ್ರಯೋಗಕ್ಕೆ ಮುಂದಾದರೆ ಕೈಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚು.

    ವರಿಷ್ಠರಿಗೆ ನೆನಪು: ಮುಂದಿನ ಚುನಾವಣೆಯ ತನಕ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದರು. ಆ ಮಾತಿನಂತೆ ವರಿಷ್ಠರು ನಡೆದುಕೊಳ್ಳಬೇಕಾಗಿದೆ ಎಂಬುದನ್ನು ತಮ್ಮ ಮಾತಿನ ಮೂಲಕ ಯಡಿಯೂರಪ್ಪ ವರಿಷ್ಠರಿಗೆ ನೆನಪಿಸಿದ್ದಾರೆ.

    ಬಿಜೆಪಿಗಿದೆ ದೊಡ್ಡ ಸವಾಲು: ಬಿಜೆಪಿಯ ಮುಂದೆ ಇರುವುದು ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿದಂತೆ ಐದು ರಾಜ್ಯಗಳಿಗೆ ಮುಂದಿನ ವರ್ಷ ಎದುರಾಗಲಿರುವ ಚುನಾವಣೆ. ಪಶ್ಚಿಮ ಬಂಗಾಳದಲ್ಲಿ ಆಗಿರುವ ಮುಖಭಂಗವನ್ನು ತಪ್ಪಿಸಿಕೊಳ್ಳುವುದರ ಜತೆಗೆ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಗೆಲ್ಲಬೇಕಾಗಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿಯುವ ತನಕ ಯಡಿಯೂರಪ್ಪರ ಸುದ್ದಿಗೆ ಹೈಕಮಾಂಡ್ ಬರುವುದು ಸುಲಭದ ಮಾತಲ್ಲ.

    ರಾಜೀನಾಮೆ ಸಂಚಲನ

    • ಕೇವಲ ಒಂದು ಮಾತಿನ ಸ್ಪೋಟದಿಂದ ಹೈಕಮಾಂಡ್​ಗೆ ವಾಸ್ತವ ರವಾನೆ
    • ಬೆಂಬಲದ ಕ್ರೋಡೀಕರಣ
    • ನಮ್ಮನ್ನು ಮುಟ್ಟುವುದು ಸುಲಭವಲ್ಲ ಎಂಬ ಅಭಿಪ್ರಾಯ
    • ದಕ್ಷಿಣ ಭಾರತದಲ್ಲಿ ಕರ್ನಾಟಕ ಕಳೆದುಕೊಳ್ಳಬೇಡಿ ಎಂಬ ಸಂದೇಶ
    • ವರಿಷ್ಠರು ಮಾತಿನಂತೆ ನಡೆದುಕೊಳ್ಳಲೆಂಬ ನೆನಪು

    ರಾಜ್ಯ ಬಿಟ್ಟರೆ ದಕ್ಷಿಣ ಭಾರತದಲ್ಲಿ ದುರ್ಬಲ

    ಬಿಜೆಪಿ ದಕ್ಷಿಣ ಭಾರತದಲ್ಲಿ ಈಗ ದುರ್ಬಲವಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿದೆ. ಕೇರಳದಲ್ಲಿ ಇದ್ದ ಒಬ್ಬ ಶಾಸಕರು ಈ ಬಾರಿ ಗೆಲ್ಲಲಿಲ್ಲ, ತಮಿಳುನಾಡಿನಲ್ಲಿ ಮಿತ್ರಪಕ್ಷದೊಂದಿಗೆ ಅಧಿಕಾರ ಹಂಚಿಕೊಳ್ಳುವ ಕನಸು ಈಡೇರಿಲ್ಲ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಬಿಜೆಪಿ ಸಂಘಟನೆಯೇನು ಬಲವಾಗಿಲ್ಲ. ಕರ್ನಾಟಕ ಮಾತ್ರ ದಕ್ಷಿಣದ ಹೆಬ್ಬಾಗಿಲಾಗಿ ಉಳಿದಿರುವುದಕ್ಕೆ ಯಡಿಯೂರಪ್ಪ ಅವರ ಪ್ರಯತ್ನವೇ ಕಾರಣವಾಗಿದೆ. ಈ ವಿಷಯದಲ್ಲಿ ಯಡಿಯೂರಪ್ಪ ಸಹ ಸ್ಪಷ್ಟವಾಗಿದ್ದಾರೆ. ಪ್ರಮಾಣವಚನ ದಿನದಿಂದಲೇ ನಾಯಕತ್ವ ಬದಲಾವಣೆಯೆಂಬ ಪದ ಕೇಳಿ ಕೇಳಿ ಬೇಸತ್ತು ಕೊನೆಗೆ ರಾಜೀನಾಮೆ ಮಾತನ್ನು ನೇರವಾಗಿಯೇ ಹೇಳಿದ್ದಾರೆ.

    ಗೃಹಿಣಿ ಆಗುತ್ತಿರುವ ಬಾಲೆಯರು!; ಬಾಲ್ಯವನ್ನೇ ಕಸಿಯುತ್ತಿದೆ ಕರೊನಾ..

    ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ಡೈರೆಕ್ಟ್ ಮಾನೆಟೈಸೇಶನ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts