More

    ಯಡಿಯೂರಪ್ಪ ಹೆದರುವ ರಾಜಕಾರಣಿಯಲ್ಲ – ರಮೇಶ ಜಾರಕಿಹೊಳಿ


    ಬೆಳಗಾವಿ: ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾರೋ ಮಾಡುತ್ತಿರುವ ಬ್ಲಾೃಕ್‌ಮೇಲ್‌ಗೆ ಹೆದರುವ ರಾಜಕಾರಣಿ ಅಲ್ಲ. ಸಂಪುಟ ವಿಸ್ತರಣೆಯಲ್ಲಿ ಅವರು ತೆಗೆದುಕೊಂಡ ನಿರ್ಣಯಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

    ಜ.17 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಉಪಸ್ಥಿತಿಯಲ್ಲಿ ಜರುಗಲಿರುವ ‘ಜನಸೇವಕ ಸಮಾವೇಶ’ ಕಾರ್ಯಕ್ರಮ ಸ್ಥಳವನ್ನು ಗುರುವಾರ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಬಂದರೆ ಅವರಪರ ನಾವು ಇರುತ್ತೇವೆ. ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ. ಅದನ್ನು ವರಿಷ್ಠರು ಸರಿಪಡಿಸುತ್ತಾರೆ ಎಂದರು.

    ಯಾವ ಸಿಡಿಯೂ ಇಲ್ಲ: ಶಾಸಕ ಬಸವರಾಜ ಯತ್ನಾಳ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಅವರ ಸಿಡಿ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ವಿರುದ್ಧ ಯಾವ ಸಿಡಿ ಇಲ್ಲ, ಏನೂ ಇಲ್ಲ. ಈ ರೀತಿ ಸಿಡಿಗಳು ಬರುತ್ತವೆ, ಹೋಗುತ್ತವೆ. ರಾಜಕಾರಣದಲ್ಲಿ ವೈಯಕ್ತಿಕ ಜೀವನದ ಕುರಿತು ಈ ರೀತಿ ಮಾತಾಡಬಾರದು ಎಂದರು.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗಾಗಿ ಸಿ.ಪಿ. ಯೋಗೇಶ್ವರ ಅವರು ತಮ್ಮ ಮನೆಯ ಮೇಲೆ ಸಾಲ ಮಾಡಿಕೊಂಡರು. ಎಂ.ಟಿ.ಬಿ ನಾಗರಾಜ ಅವರಿಂದ ಅಂದು ಸಾಲ ತಂದರು. ಯೋಗೇಶ್ವರ ಅವರಿಗೆ ಅಂದು ನಮ್ಮನ್ನು ಒಗ್ಗೂಡಿಸುವುದು ಯಾಕೆ ಬೇಕಿತ್ತು? ಆರೋಗ್ಯ ಹಾಳು ಮಾಡಿಕೊಂಡು, ಸಾಲ ಮಾಡಿಕೊಂಡು ಕಷ್ಟಪಡುವುದು ಯಾಕೆ ಬೇಕಿತ್ತು? ಈಗ ಆರೋಪ ಮಾಡುತ್ತಿರುವವರೆಲ್ಲ ಆಗ ಎಲ್ಲಿದ್ದರು? 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಗೆದ್ದು ಸಚಿವರಾಗಲಿ. ಸದ್ಯದ ಸಂದರ್ಭದವನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು.

    ಈ ಸರ್ಕಾರ ರಚನೆಯಲ್ಲಿ ಯೋಗೇಶ್ವರ ಅವರ ಪಾತ್ರ ಬಹಳ ದೊಡ್ಡದಿದೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ಕೊಟ್ಟಿರುವುದು ಸರಿಯಿದೆ ಎಂದು ಸಚಿವ ರಮೇಶ ಸಮರ್ಥಿಸಿಕೊಂಡರು.

    ಬಾಂಬೆ ಟೀಮ್ ಕ್ಯಾಪ್ಟನ್ ನಾನಲ್ಲ

    ಮಾಜಿ ಸಚಿವ ನಾಗೇಶ, ಶಾಸಕ ಮುನಿರತ್ನ ಅವರು ಡ್ರಾಪ್ ಆಗುತ್ತಾರೆ ಎನ್ನುವ ಕಲ್ಪನೆ ಇರಲಿಲ್ಲ. ಅವರೂ ಸಚಿವರಾಗಬೇಕು. ಮಹೇಶ ಕುಮಠಳ್ಳಿ ಅವರೂ ಸಚಿವರಾಗಬೇಕು. ಜಿಪಂ, ತಾಪಂ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಲಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಜತೆಗೆ ಮಾತನಾಡಿ ಅವರನ್ನೂ ಮಂತ್ರಿ ಮಾಡುತ್ತೇವೆ. ‘ನಾನು ಬಾಂಬೆ ಟೀಮ್‌ನ ಕ್ಯಾಪ್ಟನ್ ಅಲ್ಲ. ಕೊನೆಯ 17ನೇ ಯವನು’ ಎಂದು ಸಚಿವ ರಮೇಶ ಈ ವೇಳೆ ಹಾಸ್ಯ ಚಟಾಕಿ ಸಿಡಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts