More

    ಸುಡು ಬಿಸಲು ಬಿರುಸಿನ ಪ್ರಚಾರ

    ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

    ಬಿಸಿಲಿನ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲಾಗುತ್ತಿದ್ದು, ಮನೆಯಲ್ಲಿದ್ದರೂ ಬಿಸಿ ತಟ್ಟುತ್ತಿದೆ. ಆದರೆ, ಲೋಕಸಭೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು, ನಾಯಕರು, ಬೆಂಬಲಿಗರು ಬಿರು ಬಿಸಿಲಿನಲ್ಲೇ ಬೆವರಿಳಿಸುತ್ತಾ ಪ್ರಚಾರಕ್ಕಿಳಿದಿದ್ದಾರೆ.

    ಬಳ್ಳಾರಿ ಲೋಕಸಭೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರಮುಖ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲೂ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬೆಳಗ್ಗೆಯಿಂದ ರಾತ್ರಿಯವರೆಗೂ ಪ್ರಚಾರ ಮಾಡುತ್ತಿದ್ದಾರೆ. ಆದರೂ ಎಲ್ಲ ಕಡೆ ಹೋಗಲು ಸಾಧ್ಯವಾಗುತ್ತಿಲ್ಲ. ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು, ಮಾಜಿ ಶಾಸಕರ ನೇತೃತ್ವದಲ್ಲಿ ಪ್ರಚಾರ ನಡೆದಿದೆ. ಬೆಳಗ್ಗೆ 7ರಿಂದ 10 ಗಂಟೆವರೆಗೆ, ಸಂಜೆ 4ರಿಂದ ರಾತ್ರಿ 9ರವರೆಗೂ ಪ್ರಚಾರಕ್ಕೆ ವೇಳಾಪಟ್ಟಿ ಮಾಡಿದ್ದರೂ ಅದರಂತೆ ಹೊಸ ಕಾರ್ಯಕ್ರಮಗಳು ನಡೆಯದ್ದರಿಂದ ಮಧ್ಯಾಹ್ನದ ವೇಳೆಯೂ ಕ್ಯಾಂಪೇನ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿಯೂ ಟೋಪಿ ಧರಿಸಿ, ಮಜ್ಜಿಗೆ, ಲಸ್ಸಿ ಸೇರಿದಂತೆ ತಂಪು ಪಾನೀಯಗಳನ್ನು ಸೇವಿಸುತ್ತ ಪ್ರಚಾರ ಮಾಡುವುದು ಸಾಮಾನ್ಯವಾಗಿದೆ. ಚುನಾವಣೆಗೆ ಕೆಲವೇ ದಿನಗಳು ಉಳಿದಿರುವುದರಿಂದ ಬಿಸಿಲಿನ ಜತೆ ಚುನಾವಣೆ ಕಾವು ಕೂಡ ಜೋರಾಗಿದೆ. ಆದ್ದರಿಂದ ಬಿಸಿಲನ್ನೂ ಲೆಕ್ಕಿಸದೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

    ಗಿಡಮರಗಳ ಆಸರೆ: ಬಹುತೇಕ ನಾಯಕರು, ಬೆಂಬಲಿಗರು ಕಾಟನ್ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಹಲವರು ಟೋಪಿಗಳ ಮೊರೆ ಹೋಗಿದ್ದಾರೆ. ಕೆಲವರು ವಾಹನಗಳಲ್ಲಿ ನೀರಿನ ಕ್ಯಾನ್, ಬಾಟಲಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಮಜ್ಜಿಗೆ, ಪಾನಕ, ಎಳನೀರು ಸೇವನೆ ಮಾಡುವ ಮೂಲಕ ದಾಹ ತೀರಿಸಿಕೊಳತ್ತಿದ್ದಾರೆ. ಸಾಗುವ ಮಾರ್ಗದಲ್ಲಿ ಗಿಡಮರಗಳು ಸಿಕ್ಕರೆ ಕೆಲ ಹೊತ್ತು ಉಳಿದು ದಣಿವಾರಿಸಿಕೊಂಡು ಮುಂದೆ ಸಾಗುತ್ತಿದ್ದಾರೆ.

    ಜನರ ಸೇರಿಸುವುದೇ ಸವಾಲು

    ಬಿಸಿಲು 42 ಡಿ.ಸೆ. ದಾಟಿದೆ. ಬಿಸಿಗಾಳಿ, ತಾಪಮಾನ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮಧ್ಯಾಹ್ನದ ವೇಳೆಗೆ ಹಳ್ಳಿಗಳಲ್ಲಿ ನಡೆಯುವ ಪ್ರಚಾರ ಸಭೆಗಳಲ್ಲಿ ಜನರನ್ನು ಸೇರಿಸುವುದೇ ಸ್ಥಳೀಯ ಮುಖಂಡರಿಗೆ ಸವಾಲಾಗಿದೆ. ದೇವಸ್ಥಾನಗಳಲ್ಲಿ ರಾಜಕೀಯ ಸಭೆಗಳನ್ನು ನಡೆಸಬಾರದು ಎಂದಿರುವುದೂ ಸಮಸ್ಯೆಯಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಮೊತ್ತ ನಿಗದಿ ಪಡಿಸಿರುವುದರಿಂದ ವೇದಿಕೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮಗಳ ಅರಳಿಕಟ್ಟೆ, ನಾಯಕರ ದೊಡ್ಡಮನೆಗಳ ಮುಂದಿನ ಆವರಣದಲ್ಲಿ ಸಭೆ ಮಾಡಲಾಗುತ್ತಿದೆ. ಕೆಲವೆಡೆ ಬಿಸಿನಲ್ಲಿಯೇ ಪ್ರಚಾರ ಸಭೆ ಮಾಡಬೇಕಾಗಿದೆ. ಹವಾ ನಿಯಂತ್ರಿತ ಕೊಠಡಿಗಳಲ್ಲಿರುತ್ತಿದ್ದ ನಾಯಕರೂ ಬೆವರಿಳಿಸುತ್ತಾ ಮತಯಾಚನೆ ಮಾಡುತ್ತಿದ್ದಾರೆ.

    ಮತ ಸೆಳೆಯಲು ನಾನಾ ತಂತ್ರ

    ಅಭ್ಯರ್ಥಿಗಳು ಮತದಾರರ ಮನೆ ಬಾಗಿಲಿಗೆ ಹೋದ ಕೂಡಲೇ ಅಕ್ಕ, ಅಣ್ಣ ನನಗೆ ವೋಟ್ ಹಾಕಬೇಕು. ಈ ಸಲ ನಾನು ನಿಮ್ಮ ತಮ್ಮ ಇದ್ದಂಗೆ ಕೈ ಬಿಡಬ್ಯಾಡ್ರಿ ಎಂದು ಬೇಡುತ್ತಿದ್ದಾರೆ. ನಾನು ಬರುತ್ತೀನಿ ಇನ್ನೂ ಊರಾಗ ಎಲ್ಲರಿಗೂ ಹೇಳಬೇಕು ಎನ್ನುತ್ತಲೇ ಮತ್ತೊಂದು ಮನೆಗೆ ಹೋಗಿ ಮತಯಾಚಿಸುತ್ತಿದ್ದಾರೆ. ಗೆಲುವಿಗೆ ಇದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದು ಚುನಾವಣೆ ನಂತರವೇ ಗೊತ್ತಾಗಲಿದೆ. ಹಳ್ಳಿಗಳಲ್ಲಿ ಎಲ್ಲಿ ನೋಡಿದರೂ ಚುನಾವಣೆ ಕುರಿತು ಚರ್ಚೆಗಳೇ ನಡೆದಿವೆ. ಅಭ್ಯರ್ಥಿಗಳು ಬೆಂಬಲಿಗರನ್ನು ಕಟ್ಟಿಕೊಂಡು ಭರದಿಂದ ಪ್ರಚಾರ ಕೈಗೊಂಡಿದ್ದು, ಮತ ಸೆಳೆಯಲು ನಾನಾ ತಂತ್ರ ಅನುಸರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts