More

    ಕೋಟೆನಗರಿಯಲ್ಲಿ ಯಶಸ್ವಿನಿ ರಂಗಪ್ರವೇಶ

    ಕೋಟೆನಗರಿಯಲ್ಲಿ ಯಶಸ್ವಿನಿ ರಂಗಪ್ರವೇಶ

    ಚಿತ್ರದುರ್ಗ: ವಿಘ್ನನಿವಾರಕ ವಿನಾಯಕನ ಪ್ರಾರ್ಥನೆ, ನೃತ್ಯದ ಅಧಿದೇವತೆ ನಟರಾಜನಿಗೆ ಪೂಜೆ ಸಲ್ಲಿಸಿ, ಕಲಾ ಸರಸ್ವತಿಯ ಆವಾಹನೆಯೊಂದಿಗೆ ಪ್ರದರ್ಶನವಾದ ಯಶಸ್ವಿನಿಯ ನೃತ್ಯಗಳು ನೋಡುಗರನ್ನು ಮಂತ್ರಮುಗ್ಧರಾಗಿಸಿದವು.

    ತರಾಸು ರಂಗಮಂದಿರದಲ್ಲಿ ಭಾನುವಾರ ರಾತ್ರಿ ಲಾಸಿಕಾ ಫೌಂಡೇಶನ್‌ನಿಂದ ಆಯೋಜಿಸಿದ್ದ ರಂಗಪ್ರವೇಶಕ್ಕೆ ನೂರಾರು ಕಲಾಸಕ್ತರು ಸಾಕ್ಷಿಯಾದರು.
    ಹಿಮ್ಮೇಳ ಕಲಾವಿದರಿಂದ ಪುಷ್ಪಾಂಜಲಿಯೊಂದಿಗೆ ವೇದಿಕೆ ಪ್ರವೇಶಿಸಿದ ಯಶಸ್ವಿನಿ ಭೂ ಮಾತೆಗೆ ಪ್ರಣಾಮ ಸಲ್ಲಿಸಿ ಭಕ್ತಿಯಿಂದ ಶರಣಾದರು. ಸಭಿಕರಿಗೂ ವಂದಿಸಿ, ಗಣಪತಿ ಸ್ತುತಿ, ಜತಿಸ್ವರ, ಭರತನಾಟ್ಯದ ಕೇಂದ್ರ ಭಾಗವಾದ ಕಮಾಚ್ ರಾಗ ಆದಿತಾಳದಲ್ಲಿರುವ ವರ್ಣ ನೃತ್ಯವನ್ನು ಪ್ರದರ್ಶಿಸಿದರು.

    ಪ್ರಬುದ್ಧ ಅಭಿನಯ ತೋರಿದ ಯಶಸ್ವಿನಿ, ಶಿವಸ್ತುತಿ, ಮಿಶ್ರಜಂಝೂಟಿ, ತಿಶ್ರ ಏಕ ತಾಳದಲ್ಲಿರುವ ಭಜನ್ ಮತ್ತಿತರ ಕೃತಿಗಳಿಗೆ ಹೆಜ್ಜೆ ಹಾಕಿದರು. ಭರತನಾಟ್ಯ ಕಲಿಕೆಯ ಗುರುವಾದ ಶ್ವೇತಾ ಮಂಜುನಾಥ್ ಅವರು ಗೆಜ್ಜೆ ತೊಡಿಸುವುದರ ಮೂಲಕ ರಂಗಪ್ರವೇಶಕ್ಕೆ ಅನುವು ಮಾಡಿಕೊಟ್ಟು ಮಾರ್ಗದರ್ಶನ ನೀಡಿದರು. ಬೆಂಗಳೂರಿನ ವಿದ್ವಾನ್ ರೋಹಿತ್ ಭಟ್, ವಿದ್ವಾನ್ ನಾಗೇಂದ್ರ ಪ್ರಸಾದ್ (ಮೃದಂಗ), ವಿದ್ವಾನ್ ಶಶಾಂಕ್ ಜೋಡೀದಾರ್ (ಕೊಳಲು ವಾದನ), ವಿದ್ವಾನ್ ಗೋಪಾಲ್ ವೆಂಕಟ್ರಮಣ ಅವರ ವೀಣಾ ವಾದನದ ಮೂಲಕ ಸಾಥ್ ನೀಡಿದರು.

    ಬೆಂಗಳೂರಿನ ನಾಟ್ಯಂತರಂಗ ಸಂಸ್ಥೆಯ ನಿರ್ದೇಶಕಿ ಶುಭಾ ಧನಂಜಯ ಗುರುವಂದನೆ ಸ್ವೀಕರಿಸಿದರು. ಬ್ರಹ್ಮಕುಮಾರಿ ರಶ್ಮಿ, ಸಂತ ಜೋಸೆಫರ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕಿ ರಿಜಿಕೊರಿಯ ಕೋಸ್, ಗಾಯತ್ರಿ ಶಿವರಾಂ, ಅಂಜನಾ ನೃತ್ಯ ಕಲಾಕೇಂದ್ರದ ಡಾ.ನಂದಿನಿ ಶಿವಪ್ರಕಾಶ್, ಕಲಾವಿದ ಕಿರಣ್, ರಂಗಭೂಮಿ ಕಲಾವಿದ ಕೆಪಿಎಂ ಗಣೇಶಯ್ಯ, ಲಾಸಿಕಾ ಫೌಂಡೇಶನ್‌ನ ಮಂಜುನಾಥ್ ಭಾಗವತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts