More

    ಹಡಿಲು ಗದ್ದೆ ಹಸಿರಿಗೆ ಯಂತ್ರಶ್ರೀ ಕೊಡುಗೆ

    ಬಂಡೀಮಠ ಶಿವರಾಮ ಆಚಾರ್ಯ

    ಗ್ರಾಮೀಣ ಯುವ ಜನತೆಯ ವಲಸೆಯನ್ನು ತಡೆಯಲು ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಭತ್ತದ ಬೇಸಾಯಕ್ಕೆ ಆಸರೆಯಾಗಿದೆ.
    ಈ ವರ್ಷ ಅನೇಕರು ಪಟ್ಟಣದಲ್ಲಿದ್ದು ಕೆಲಸ ಕಳೆದುಕೊಂಡು ಮರಳಿ ಗ್ರಾಮಗಳತ್ತ ವಲಸೆ ಬಂದು ಸರ್ಕಾರದ ಯೋಜನೆಯಾದ ಉದ್ಯೋಗ ಖಾತ್ರಿ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿತ್ತು. ಅದೇ ರೀತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀಯೂ ಹಡಿಲು ಗದ್ದೆಗಳ ಬೇಸಾಯಕ್ಕೆ ನೆರವಾಗಿದೆ. ಉಡುಪಿ ಜಿಲ್ಲೆಯಲ್ಲಿ ಯಂತ್ರಶ್ರೀ ಮೂಲಕ ಈ ವರ್ಷ 750 ಎಕರೆ ಹಡಿಲು ಭೂಮಿಯಲ್ಲಿ ಬೇಸಾಯ ಮಾಡಲಾಗಿದ್ದು, 450 ಕುಟುಂಬಗಳು ಪ್ರಯೋಜನ ಪಡೆದಿವೆ.

    ಉಳುಮೆ, ನಾಟಿ, ಕಳೆ ಮತ್ತು ಕಟಾವು ಮಾಡಲು ಯಾಂತ್ರೀಕರಣಕ್ಕೆ ಸಂಘದ ಸದಸ್ಯರಿಗೆ ಕೃಷಿ ಸಾಲವಾಗಿ ಎಕರೆಗೆ 20 ಸಾವಿರ ರೂ. ನೆರವನ್ನು ನೀಡಲಾಗುತ್ತಿದೆ. ಶ್ರೀ ಪದ್ಧತಿಯಲ್ಲಿ ಭತ್ತ ನಾಟಿ ಮಾಡಿ ಮುಂಗಾರು ಬೆಳೆಯಲ್ಲಿ ಎಕರೆಗೆ 30 ಕ್ವಿಂಟಾಲ್ ಫಸಲು ಬರುವ ನಿರೀಕ್ಷೆ ನಿಜಗೊಳಿಸಿದೆ. ಜಿಲ್ಲೆಯ ಬಾರಕೂರು, ಬ್ರಹ್ಮಾವರ, ಕೊಕ್ಕರ್ಣೆ ಸೇರಿದಂತೆ ಬಹುತೇಕ ರೈತರು ಮುಂದಿನ ಸುಗ್ಗಿ ಬೆಳೆಯಲ್ಲಿ ಇದೇ ಮಾದರಿ ಮುಂದುವರಿಸುವ ಸಿದ್ಧತೆಯಲ್ಲಿದ್ದಾರೆ.

    ಡಾ. ವೀರೇಂದ್ರ ಹೆಗ್ಗಡೆಯವರು ಈ ವರ್ಷ ಕೃಷಿಯ ಕುರಿತು ವಿಮುಕ್ತರಾಗುವ ಜನರನ್ನು ಸೆಳೆಯಲು ಮತ್ತು ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಬೆಳೆ ತೆಗೆಯಲು ಯೋಜನೆಯೊಂದನ್ನು ನೀಡಿದ್ದರು. ಅದು ಉಡುಪಿ ಜಿಲ್ಲೆಯಲ್ಲಿ ಯಶಸ್ಸು ಕಂಡಿದೆ. ಮುಂದೆ ಹಿಂಗಾರು ಬೆಳೆಗೆ ಕೂಡ ವಿಸ್ತರಿಸುವ ಯೋಜನೆ ಇದೆ .
    ಗಣೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕರು

    ನಮಗೆ ಇರುವ ಕೃಷಿ ಭೂಮಿಯ ಜತೆ ಈ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಯೋಜನೆಯ ಪ್ರೇರಣೆಯಿಂದ ನಮ್ಮ ಅಕ್ಕ ಪಕ್ಕದಲ್ಲಿರುವ ಹಡಿಲು ಬಿದ್ದ ಗದ್ದೆಗಳಲ್ಲಿ ಈ ವರ್ಷ ಭತ್ತದ ಬೆಳೆಯನ್ನು ಮಾಡಲಾಗಿ ಯಶಸ್ಸು ಕಂಡಿದ್ದೇನೆ.
    ಲಕ್ಷ್ಮಣ ನಾಯ್ಕ ಬಂಡೀಮಠ ಬಾರಕೂರು, ಕೃಷಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts