More

    ಯಲಬುರ್ಗಾ ತಾಲೂಕಿನಲ್ಲಿ ಸತತ ಮಳೆ, 127 ಮನೆಗಳ ಕುಸಿತ

    ಯಲಬುರ್ಗಾ: ತಾಲೂಕಿನಲ್ಲಿ ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಾನಾ ಕಡೆ ಮನೆಗಳ ಕುಸಿತ, ಬೆಳೆ ಹಾನಿಯಂತಹ ಅವಾಂತರಗಳು ನಡೆಯುತ್ತಿದ್ದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.

    ತಾಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ 127 ಮನೆಗಳು ಕುಸಿದಿವೆ. ಜೂನ್‌ನಲ್ಲಿ 11, ಜುಲೈನಲ್ಲಿ 28, ಆಗಸ್ಟ್‌ನಲ್ಲಿ 38, ಸೆಪ್ಟೆಂಬರ್ ತಿಂಗಳಲ್ಲಿ 50 ಒಟ್ಟು 127 ಮನೆಗಳು ಬಿದ್ದಿವೆ. ಇದರಲ್ಲಿ 91 ಮನೆಗಳಿಗೆ ಎಸ್‌ಡಿಆರ್‌ಎಫ್-ಎನ್‌ಡಿಆರ್‌ಎಫ್ ಮಾರ್ಗಸೂಚಿಯಡಿ ಸರ್ಕಾರದಿಂದ ಅಂದಾಜು 47.30 ಲಕ್ಷ ರೂ. ಪರಿಹಾರವನ್ನು ಆರ್‌ಟಿಜಿಎಸ್ ಮತ್ತು ಕೆ2 ಬಿಲ್ ಮೂಲಕ ಸಂತ್ರಸ್ತರ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ 36 ಮನೆಗಳ ಸಮೀಕ್ಷೆ ನಡೆದಿದೆ.

    ಎರಡು ದಿನದಲ್ಲಿ 36 ಮನೆ ಕುಸಿತ: ಸೆ.5 ಮತ್ತು 6 ರಂದು ಸುರಿದ ಧಾರಾಕಾರ ಮಳೆಗೆ ತಾಲೂಕಿನ ನಾನಾ ಹಳ್ಳಿಗಳಲ್ಲಿ ಎರಡೇ ದಿನದಲ್ಲಿ 36 ಮನೆಗಳು ಕುಸಿದಿರುವ ಬಗ್ಗೆ ವರದಿಯಾಗಿದೆ. ಬಿದ್ದ ಮನೆಗಳ ಸಮೀಕ್ಷೆ ನಡೆದಿದ್ದು, ಶೀಘ್ರವೇ ಸಂತ್ರಸ್ತರ ಬ್ಯಾಂಕ್ ಖಾತೆಗೆ ಪರಿಹಾರ ಒದಗಿಸಲಾಗುವುದು ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ್ ತಿಳಿಸಿದ್ದಾರೆ.

    ಗ್ರಾಪಂ, ಕಂದಾಯ ಹಾಗೂ ಪಿಆರ್‌ಇಡಿ ಇಲಾಖೆ ಅಧಿಕಾರಿಗಳಿಂದ ಬಿದ್ದ ಮನೆಗಳ ಸಮೀಕ್ಷೆ ನಡೆಯುತ್ತದೆ. ಇದರಲ್ಲಿ ಭಾಗಶಃ ಪ್ರಮಾಣದಲ್ಲಿ ಬಿದ್ದ ಮನೆಗೆ ಸಿ ವರ್ಗದಲ್ಲಿ 50 ಸಾವಿರ ರೂ., ಹೆಚ್ಚಿನ ಪ್ರಮಾಣದಲ್ಲಿ ಕುಸಿದರೆ ಬಿ1 ವರ್ಗದಲ್ಲಿ 95 ಸಾವಿರ ರೂ. ಪರಿಹಾರವನ್ನು ನೇರವಾಗಿ ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗುತ್ತದೆ. ಬಿ1 ವರ್ಗದಲ್ಲಿ 4, ಸಿ ವರ್ಗದಲ್ಲಿ 87 ಮನೆಗಳು ಬಿದ್ದಿವೆ.

    30 ಸಾವಿರ ರೂ. ಪರಿಹಾರ ವಿತರಣೆ: ತಾಲೂಕಿನ ವಣಗೇರಿ ಗ್ರಾಮದ ರೈತ ನಿಂಗಪ್ಪ ಬೆಲ್ಲದ ಅವರಿಗೆ ಸೇರಿದ ಆಕಳು ಸೆ.5 ರಂದು ಸಿಡಿಲಿಗೆ ಬಲಿಯಾದ ಹಿನ್ನೆಲೆಯಲ್ಲಿ ಎಸ್‌ಡಿಆರ್‌ಎಫ್-ಎನ್‌ಡಿಆರ್‌ಎಫ್ ಮಾರ್ಗಸೂಚಿಯಡಿ ತಾಲೂಕಾಡಳಿತದಿಂದ 30 ಸಾವಿರ ರೂ. ರೈತನ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸಾರ್ವಜನಿಕರು ಸಿಡಿಲು ಗುಡುಗು ಇದ್ದಾಗ ರಕ್ಷಣೆಗಾಗಿ ಗಿಡಗಳ ಕೆಳಗೆ ಹಾಗೂ ಅಪಾಯಕಾರಿ ಸ್ಥಳದಲ್ಲಿ ನಿಲ್ಲಬಾರದು. ಮಳೆಯಿಂದ ಕುಸಿಯುವ ಹಂತದಲ್ಲಿರುವ ಮನೆಗಳಲ್ಲಿ ವಾಸ ಬೇಡ.
    | ಶ್ರೀಶೈಲ ತಳವಾರ್, ತಹಸೀಲ್ದಾರ್, ಯಲಬುರ್ಗಾ

    ಯಲಬುರ್ಗಾ ಕ್ಷೇತ್ರದಲ್ಲಿ ಮಳೆಯಿಂದಾಗಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಕಲ್ಲೂರಿನಲ್ಲಿ 10 ಎಕರೆ ದಾಳಿಂಬೆ, ಹಗೇದಾಳದಲ್ಲ್ಲಿ 4 ಎಕರೆ ಬಾಳೆ ಬೆಳೆ ಹಾನಿಯಾಗಿದೆ. ಕುಕನೂರು ಭಾಗದಲ್ಲಿ ಈರಳ್ಳಿ ಬೆಳೆ ಹಾನಿಯಾಗಿದ್ದು, ಸರ್ವೇ ಕಾರ್ಯ ನಡೆದಿದ್ದು, ಹಾನಿಯಾದ ಬೆಳೆಗೆ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
    | ಮಂಜುನಾಥ ಲಿಂಗಣ್ಣವರ್, ತೋಟಗಾರಿಕೆ ಸಹಾಯಕ ನಿರ್ದೇಶಕ, ಯಲಬುರ್ಗಾ

    ಆಕಳಕುಂಪಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
    ಕನಕಗಿರಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ಆಕಳಕುಂಪಿಯಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ.

    ಪಟ್ಟಣ ಸೇರಿ ತಾಲೂಕಿನ ಹಲವು ಹಳೆಯ ಮನೆಗಳು ಸೋರಿವೆ. ಕೆಲ ಗ್ರಾಮಗಳ ಹಳ್ಳಗಳು ತುಂಬಿ ಹರಿದಿವೆ. ಪಟ್ಟಣದ ಶ್ರೀ ಕನಕಾಚಲ ದೇವಸ್ಥಾನ ಮುಂದಿನ ತ್ರಿವೇಣಿ ಸಂಗಮ ಆಣೆಕಟ್ಟು ತುಂಬಿಕೊಂಡಿದೆ.

    ಆಕಳಕುಂಪಿ ಗ್ರಾಮದ ಜನತಾ ಕಾಲನಿಯಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಧವಸ-ಧಾನ್ಯಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಮನೆಯವರು ಪರದಾಡಿದ್ದಾರೆ. ಮನೆಯಿಂದ ನೀರನ್ನು ಹೊರ ಹಾಕಲು ಹರಸಾಹಸಪಟ್ಟಿದ್ದಾರೆ. ಸ್ಥಳಕ್ಕೆ ಇಒ ಚಂದ್ರಶೇಖರ ಕಂದಕೂರು ಭೇಟಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವಂತೆ ಗ್ರಾಪಂ ಸಿಬ್ಬಂದಿಗೆ ಸೂಚಿಸಿದ್ದಾರೆ. ತಾಲೂಕಿನ ಹಲವೆಡೆ ಕುಸಿದು ಬಿದ್ದ ಮನೆಗಳ ಸರ್ವೇಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

    ಆಕಳಕುಂಪಿಯಲ್ಲಿನ ಮನೆಗಳಿಗೆ ನೀರು ನುಗ್ಗಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹಳ್ಳದಲ್ಲಿ ನೀರು ಹರಿಯಲು ಅವಕಾಶವಿಲ್ಲದಂತೆ ಬ್ಲಾಕ್ ಆಗಿದೆ. ಜೆಸಿಬಿ ಮೂಲಕ ತೆರವುಗೊಳಿಸಲು ಸೂಚಿಸಲಾಗಿದೆ.
    | ಚಂದ್ರಶೇಖರ ಕಂದಕೂರು, ತಾಪಂ ಇಒ ಕನಕಗಿರಿ

    ಜೋರಾಗಿ ಮಳೆ ಬಂತೆಂದರೆ ಆಕಳಕುಂಪಿ ಗ್ರಾಮದ ಜನತಾ ಕಾಲನಿಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ. ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಿವಾಸಿಗಳಿಗೆ ಪರಿಹಾರ ನೀಡಲು ಮುಂದಾಗಬೇಕು.
    | ಲಕ್ಷ್ಮೀಕಾಂತ ನಾಡಿಗೇರ, ಗ್ರಾಮಸ್ಥ

    ಕೆರೆ, ನಾಲೆಗಳಿಗೆ ಜೀವ ಕಳೆ
    ತಾವರಗೇರಾ: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ಬಿದ್ದ ಮಳೆಗೆ ರಾಯನಕೆರೆ, ಪುರ ಕೆರೆ, ಕಿಲಾರಹಟ್ಟಿ ಕೆರೆ, ನಾರಿನಾಳಕೆರೆ, ಚಟ್ನಿ ಕೆರೆ ಸೇರಿದಂತೆ ಸಣ್ಣ ಪುಟ್ಟ ಕೆರೆ, ನಾಲೆಗಳು ತುಂಬಿ ಹರಿಯುತ್ತಿವೆ. ಒಂದೇ ದಿನದಲ್ಲಿ 46.04 ಮಿ.ಮೀ. ಮಳೆಯಾಗಿದೆ. ಇದರಿಂದ ಎಲ್ಲ ಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts