More

    ಸೂರ್ಯ ಗ್ರಹಣಕ್ಕೆ ಹೆದರಿ ಪತಿ, ಮಕ್ಕಳನ್ನು ಕೊಂದು ತಾನೂ ದುರಂತ ಸಾವಿಗೀಡಾದ ಅಮೆರಿಕದ ಖ್ಯಾತ ಜ್ಯೋತಿಷಿ!

    ವಾಷಿಂಗ್ಟನ್:​ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಪವಾಡಗಳನ್ನು ಸೃಷ್ಟಿಸುತ್ತಿದ್ದಾನೆ. ಸಂವಹನ, ವೈದ್ಯಕೀಯ ಕ್ಷೇತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾನೆ. ಆದರೆ, ತಂತ್ರಜ್ಞಾನದಲ್ಲಿ ಎಷ್ಟೇ ಯಶಸ್ಸನ್ನು ಸಾಧಿಸಿದರೂ ಮೂಢನಂಬಿಕೆಗಳು ಹಾಗೂ ವಿಚಿತ್ರ ಆಚರಣೆಗಳು ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಮಂತ್ರಗಳು, ತಂತ್ರಗಳು, ನಿಗೂಢ ಪೂಜೆ ಮತ್ತು ಮಾಟಮಂತ್ರದಂತಹ ಮೂಢನಂಬಿಕೆಗಳೊಂದಿಗೆ ಬದುಕುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮಾಂತ್ರಿಕರು, ಬಾಬಾಗಳು ಮಂತ್ರ, ಪೂಜೆ ಅಂತಾ ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಂತೂ ನಿಗೂಢ ಪೂಜೆಗಾಗಿ ನರಬಲಿ ಕೂಡ ಕೊಡಲಾಗುತ್ತಿದೆ. ಅಮೆರಿಕದಲ್ಲಿ ಖ್ಯಾತ ಜ್ಯೋತಿಷಿ ಒಬ್ಬರು ಸೂರ್ಯ ಗ್ರಹಣಕ್ಕೆ ಹೆದರಿ ತನ್ನ ಪತಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ದುರಂತ ಸಾವಿಗೀಡಾಗಿರುವ ಸುದ್ದಿ ಜಗತ್ತನ್ನೇ ತಲ್ಲಣಗೊಳಿಸಿದೆ.

    ಲಾಸ್ ಏಂಜಲೀಸ್​ನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಆರಾ ಕ್ಲೆನ್ಸ್ ಮತ್ತು ರಾಶಿಚಕ್ರಗಳಂತಹ ಆಧ್ಯಾತ್ಮಿಕ ಸೇವೆಗಳನ್ನು ಒದಗಿಸುವ ಖ್ಯಾತ ಜ್ಯೋತಿಷಿ ಡೇನಿಯಲ್ ಜಾನ್ಸನ್, ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಬಳಿಕ 9 ವರ್ಷ ಮತ್ತು 8 ತಿಂಗಳ ಇಬ್ಬರು ಹೆಣ್ಣು ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ಹೊರಟು, ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಕಾರಿನ ಬಾಗಿಲು ತೆರೆದು ಮಕ್ಕಳಿಬ್ಬರನ್ನು ಹೊರಗೆ ತಳ್ಳಿದ್ದಾಳೆ. ಇದರಿಂದ 8 ತಿಂಗಳು ಮಗು ದುರಂತ ಸಾವಿಗೀಡಾಗಿದ್ದು, ಅದೃಷ್ಟವಶಾತ್​ 9 ವರ್ಷದ ಮಗಳು ಬದುಕುಳಿದಿದ್ದಾಳೆ.

    ಈ ಅಪರಾಧವನ್ನು ಎಸಗುವ ಮೊದಲು, ಉತ್ತರ ಅಮೆರಿಕದಲ್ಲಿ ಕಳೆದ ಸೋಮವಾರ ಸಂಭವಿಸಿದ ಸಂಪೂರ್ಣ ಸೂರ್ಯಗ್ರಹಣವು “ಆಧ್ಯಾತ್ಮಿಕ ಯುದ್ಧದ ಸಾರಾಂಶವಾಗಿದೆ” ಎಂದು ಜಾನ್ಸನ್ ತನ್​ ಫಾಲೋವರ್ಸ್​ಗೆ ಹೇಳಿದ್ದಾಳೆ. ಅಂದರೆ, ಆಕೆಗೆ ಸೂರ್ಯಗ್ರಹಣದ ಭಯವಿತ್ತು. ಈ ಗ್ರಹಣವು ಆಧ್ಯಾತ್ಮಿಕ ಯುದ್ಧದ ಸಾರಾಂಶವಾಗಿದ್ದು, ನಿಮ್ಮ ರಕ್ಷಣೆಯನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಹೃದಯವನ್ನು ಸರಿಯಾದ ಸ್ಥಳದಲ್ಲಿ ಇರಿಸಿ. ಪ್ರಪಂಚವು ಇದೀಗ ಸ್ಪಷ್ಟವಾಗಿ ಬದಲಾಗುತ್ತಿದೆ. ನೀವು ಎಂದಾದರೂ ಒಂದು ಬದಿಯನ್ನು ಆಯ್ಕೆ ಮಾಡುವುದಾದರೆ, ನಿಮ್ಮ ಜೀವನದಲ್ಲಿ ಸರಿ ಅನಿಸಿದ್ದನ್ನು ಮಾಡುವ ಸಮಯ ಇದೀಗ ಬಂದಿದೆ. ದೃಢವಾಗಿರಿ, ನೀವು ಇದನ್ನು ಪಡೆದುಕೊಳ್ಳುತ್ತೀರಿ ಎಂದು ಜಾನ್ಸನ್​ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಏಪ್ರಿಲ್​ 4ರಂದು ಜಾನ್ಸನ್​ ತಮ್ಮ ಆನ್‌ಲೈನ್ ಹೆಸರು ಡೇನಿಯಲ್ ಅಯೋಕಾ ಅಡಿಯಲ್ಲಿ ಈ ಪೋಸ್ಟ್​ ಮಾಡಿದ್ದಾರೆ.

    ಅಂದಹಾಗೆ ಜಾನ್ಸನ್ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಆಕೆಯ ಕಾರು ಗಂಟೆಗೆ 100 ಮೈಲುಗಳಷ್ಟು ಹೆಚ್ಚಿನ ವೇಗದಲ್ಲಿ ಚಲಿಸಿ ಮರಕ್ಕೆ ಡಿಕ್ಕಿ ಹೊಡೆದ ನಂತರ ಮೃತಪಟ್ಟಿದ್ದಾಳೆ. ಈ ಅಪಘಾತದಲ್ಲಿ ಜಾನ್ಸನ್ ಅವರ ದೇಹವು ತುಂಬಾ ವಿರೂಪಗೊಂಡಿದೆ ಮತ್ತು ಗುರುತಿಸುವುದು ಕಷ್ಟಕರವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯ ನಂತರ ಗಂಡನ ಕೊಲೆಯಾಗಿರುವುದು ಬೆಳಕಿಗೆ ಬಂದಿತು. ಕುಟುಂಬದ ಅಪಾರ್ಟ್‌ಮೆಂಟ್‌ನಲ್ಲಿ ರಕ್ತದ ಮಡುವಿನಲ್ಲಿ 29 ವರ್ಷದ ಜೇಲೆನ್ ಅಲೆನ್ ಚಾನೆ ಸತ್ತು ಬಿದ್ದಿದ್ದರು.

    ಗ್ರಹಣಗಳು ಐತಿಹಾಸಿಕವಾಗಿ ಕೆಲವು ಕಲ್ಪನೆಗಳೊಂದಿಗೆ ಸಂಬಂಧ ಹೊಂದಿದ್ದರೂ, ವಿಜ್ಞಾನಿಗಳು ಈ ಕಲ್ಪನೆಗಳನ್ನು ಆಧಾರರಹಿತವೆಂದು ತಳ್ಳಿಹಾಕುತ್ತಾರೆ. ಸೋಮವಾರದ ಸೂರ್ಯಗ್ರಹಣವು ಉತ್ತರ ಅಮೆರಿಕಾದಾದ್ಯಂತ ಲಕ್ಷಾಂತರ ಜನರಿಗೆ ಆಕರ್ಷಕವಾದ ಆಕಾಶ ಚಮತ್ಕಾರವನ್ನು ಒದಗಿಸಿತು. ಚಂದ್ರನು ಸೂರ್ಯನ ಮುಂದೆ ಹಾದುಹೋದಾಗ ಸೂರ್ಯನ ಕರೊನಾದ ಒಂದು ನೋಟ ಗೋಚರಿಸಿತು. ಲಾಸ್ ಏಂಜಲೀಸ್ ಕೇವಲ ಭಾಗಶಃ ಗ್ರಹಣವನ್ನು ಅನುಭವಿಸಿದರೂ, ಮೆಕ್ಸಿಕೋದಿಂದ ಪೂರ್ವ ಕೆನಡಾದವರೆಗಿನ ಅನೇಕ ಪ್ರದೇಶಗಳು ಈ ವಿದ್ಯಮಾನಕ್ಕೆ ಸಾಕ್ಷಿಯಾದವು. (ಏಜೆನ್ಸೀಸ್​)

    ಇದೆನಾ ನಿಮ್ಮ ಕೆಲ್ಸ? ಆರ್​ಸಿಬಿ-ಮುಂಬೈ ಪಂದ್ಯದ ಬೆನ್ನಲ್ಲೇ ಆಕ್ರೋಶದ ಕಿಡಿ ಹೊತ್ತಿಸಿದ ಯುವತಿಯ ಫೋಟೋ!

    ರಾಮೇಶ್ವರ ಕೆಫೆ ಸ್ಫೋಟ: ಬಾಂಬ್​ ಇಟ್ಟಿದ್ದ ಮುಸ್ಸಾವೀರ್, ಮಾಸ್ಟರ್​ ಮೈಂಡ್ ಮತೀನ್​ ತಹಾ ಅರೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts