More

    ಸೂರ್ಯದೇವನ ಆರಾಧನೆಯಿಂದ ಲೌಕಿಕ, ಅಲೌಕಿಕ ಪ್ರಯೋಜನ

    ಶೃಂಗೇರಿ: ಅನಾದಿ ಕಾಲದಿಂದ ಸೂರ್ಯದೇವನನ್ನು ನಾವು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿದ್ದೇವೆ. ಶ್ರೀ ಸೂರ್ಯನಾರಾಯಣ ದೇವರಿಂದ ನಮಗೆ ಲೌಕಿಕ ಹಾಗೂ ಅಲೌಕಿಕವಾಗಿ ಸಾಕಷ್ಟು ಪ್ರಯೋಜನಗಳು ಇವೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

    ಮಕರ ಸಂಕ್ರಾತಿ ಅಂಗವಾಗಿ ಗುರುನಿವಾಸದಲ್ಲಿ ಸೋಮವಾರ ಸಾಮಾಜಿಕ ಜಾಲತಾಣದ ಮೂಲಕ ಅನುಗ್ರಹ ಸಂದೇಶ ನೀಡಿದ ಅವರು, ಜೀವಿಗಳ, ಪ್ರಾಣಿಗಳ ಪ್ರತಿದಿನದ ಜೀವನ ಸೂರ್ಯನ ಸಮಯಗತಿಯಿಂದ ಮುಂದೆ ಸಾಗುತ್ತಿದೆ. ಸೂರ್ಯ ಇಲ್ಲದಿದ್ದರೆ ನಾವೆಲ್ಲರೂ ನಿರ್ಜೀವ ವಸ್ತುಗಳಾಗುತ್ತೇವೆ. ಅಲೌಕಿಕವಾಗಿ ಸೂರ್ಯದೇವನ ಉಪಾಸನೆಯಿಂದ ಲೋಕ ಹಾಗೂ ಪರಲೋಕದಲ್ಲಿ ವಿಶಿಷ್ಟ ಸ್ಥಾನ ಪ್ರಾಪ್ತವಾಗುತ್ತದೆ ಎಂದರು.
    ಸೂರ್ಯಮಂಡಲದಲ್ಲಿ ಅಂತರ್ಗತವಾದ ಚೈತನ್ಯ ಹಾಗೂ ಜೀವಿಗಳಲ್ಲಿ ಇರುವ ಚೇತನ ಒಂದೇ ಎಂದು ಸನಾತನ ಧರ್ಮದ ಮೂಲ ಸಿದ್ಧಾಂತವಾದ ಅದ್ವೈತ ತತ್ವದಲ್ಲಿ ತಿಳಿಸಲಾಗಿದೆ. ಭಗವಾನ್ ಸೂರ್ಯದೇವನನ್ನು ಮಕರ ಸಂಕ್ರಾತಿಯಂದು ಪೂಜಿಸಿದಾಗ ಉತ್ಕೃಷ್ಟ ಕರ್ಮಲ ಲಭಿಸುತ್ತದೆ ಎಂದು ಶಾಸದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
    ಮಕರ ಸಂಕ್ರಾತಿಯಂದು ಭಗವಾನ್ ಸೂರ್ಯನಾರಾಯಣ ತನ್ನ ಪಥವನ್ನು ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಬದಲಾಯಿಸುತ್ತಾನೆ. ಇದು ಸಹಜ ಪ್ರಕ್ರಿಯೆ. ಆದರೆ ಈ ಬಾರಿ ಜ.22ರಂದು ಉತ್ತರ ದಿಕ್ಕಿನಲ್ಲಿರುವ ಅಯೋಧ್ಯೆ ಕ್ಷೇತ್ರದಲ್ಲಿ ಭವ್ಯವಾದ ಶ್ರೀರಾಮನ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಗಳು ನೆರವೇರುತ್ತಿವೆ. ಅದನ್ನು ಕಣ್ತುಂಬಿಗೊಳಿಸಲು ಆಸ್ತಿಕರು ಈಗಾಗಲೇ ಪ್ರಯಾಣಿಸುತ್ತಿದ್ದಾರೆ. ಕೋಟ್ಯಂತರ ಜನರ ಮನಸ್ಸಿನಲ್ಲಿ ಶ್ರೀರಾಮನ ಪ್ರತಿಷ್ಠಾಪನಾ ನಡೆಯುತ್ತದೆ ಎಂಬ ಕಾರಣಕ್ಕೆ ಅಂತರ್ಗತವಾಗಿ ಸಂತುಷ್ಟರಾಗಿದ್ದಾರೆ. ಸುದೀರ್ಘ ಅವಧಿಯ ಬಳಿಕ ರಾಮ ಜನ್ಮಭೂಮಿಯಲ್ಲಿ ನಡೆಯುವ ಪ್ರತಿಷ್ಠಾಪನಾ ದಿನದಂದು ರಾಮನಾಮವನ್ನು ಭಕ್ತಿಯಿಂದ ಜಪಿಸಬೇಕು ಎಂದರು.
    ಸೂರ್ಯವಂಶದಲ್ಲಿ ಶ್ರೀರಾಮನ ಅವತಾರವಾಯಿತು. ಹಾಗಾಗಿ ಸೂರ್ಯದೇವ ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತಿದ್ದಾನೆ ಎಂದು ನಮಗೆ ಭಾಸವಾಗುತ್ತಿದೆ. ಸನಾತನ ಧರ್ಮದ ಏಳಿಗೆಗಾಗಿ ಶ್ರಮಿಸಿದ ಶಿವನ ಅವತಾರವಾದ ಶ್ರೀ ಶಂಕರ ಭಗವತ್ಪಾದರು ‘ಶ್ರೀರಾಮ ಭುಜಂಗ ಸ್ತೋತ್ರ’ ರಚಿಸಿದ್ದಾರೆ. ಅದನ್ನು ಪಾರಾಯಣ ಮಾಡಿದರೆ ಶ್ರೇಯಸ್ಸು ಲಭಿಸುತ್ತದೆ ಎಂದು ಹೇಳಿದರು.
    ಅಯೋಧ್ಯೆಯಲ್ಲಿ ನಡೆಯಲಿರುವ ಮಹೋತ್ಸವವನ್ನು ಗಮನದಲ್ಲಿಟ್ಟು ಶ್ರೀರಾಮನ ಜಪ ಮಾಡಬೇಕು ಎಂದು ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಅವರ ಅನುಜ್ಞೆಯಂತೆ ನಾವು ಕರೆ ನೀಡಿದ್ದೇವೆ. ಸನಾತನ ಧರ್ಮದ ಅನುಯಾಯಿಗಳು ಈಗಲೂ ದೇವಾಲಯ, ಮನೆಗಳಲ್ಲಿ ಶ್ರೀರಾಮ ನಾಮ ಜಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.
    ಕೆಲವರ ಮಾತುಗಳಿಗೆ ಕಿವಿಗೊಡಬೇಡಿ:
    ಶೃಂಗೇರಿಯನ್ನು ಈ ಹಿಂದೆ ಋಷ್ಯಶೃಂಗ ಗಿರಿ, ಶೃಂಗ ಗಿರಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಕಿಗ್ಗಾದ ಶ್ರೀ ಋಷ್ಯಶೃಂಗಸ್ವಾಮಿ ಆಯೋಧ್ಯೆಗೆ ತೆರಳಿ ಪುತ್ರಕಾಮೇಷ್ಟಿ ಯಾಗ ಮಾಡಿದ ಬಳಿಕ ಶ್ರೀರಾಮನ ಅವತಾರವಾಯಿತು. ಹಾಗಾಗಿ ಶೃಂಗೇರಿಗೂ ಆಯೋಧ್ಯೆಗೂ ಶತಶತಮಾನಗಳ ವಿಶಿಷ್ಟ ಸಂಬಂಧವಿದೆ. ಹಲವರು ಹೇಳುವ ಮಾತುಗಳಿಗೆ ನಾವು ಎಂದಿಗೂ ಕಿವಿಗೊಡಬಾರದು ಎಂದು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಶ್ರೀ ಶಂಕರ ಭಗವತ್ಪಾದರು ಸನಾತನ ಧರ್ಮದ ಉನ್ನತಿಗೆ ನಾಲ್ಕು ಅಮ್ನಾಯಾ ಪೀಠವನ್ನು ಸ್ಥಾಪಿಸಿದ್ದರು. ಅವರು ದಕ್ಷಿಣದಲ್ಲಿ ಸ್ಥಾಪಿಸಿದ ಪ್ರಥಮ ಪೀಠ ಶೃಂಗೇರಿಯ ಗುರುಪರಂಪರೆ ಶ್ರೀ ಶಂಕರರ ಅನುಜ್ಞೆಯನ್ನು ಶ್ರದ್ಧಾಭಕ್ತಿಯಿಂದ ಪಾಲಿಸಿಕೊಂಡು ಬಂದಿದೆ. ಇಲ್ಲಿನ ಅವಿಚ್ಛಿನ್ನ ಗುರುಪರಂಪರೆ ಪ್ರತಿನಿತ್ಯ ಭಗವತ್ ಆರಾಧನೆಯನ್ನು ಲೋಕಕಲ್ಯಾಣಕ್ಕಾಗಿ ಮಾಡುತ್ತ ಬಂದಿದೆ. ಎಲ್ಲರೂ ಶ್ರೀರಾಮನ ಮಂತ್ರ ಜಪಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts