More

    ವನ್ಯಜೀವಿ ರಕ್ಷಣೆಯಲ್ಲಿ ವನಿತೆಯರು: ಮಾತಿನ ಬದಲು ಕೆಲಸ ಮಾಡಿ ತೋರಿದ ತನುಜಾ

    ಇಂದು ವಿಶ್ವ ವನ್ಯಜೀವಿ ದಿನ

    ಕಿಡಿಗೇಡಿಗಳಿಂದಾಗಿ ಕಾಡುಗಳೆಲ್ಲ ಇಂದು ಬೆಂಕಿಗಾಹುತಿಯಾಗುತ್ತಿವೆ. ಇದರಿಂದಾಗಿ ಅಳಿದುಳಿದ ವನ್ಯಜೀವಿಗಳ ರಕ್ಷಣೆಗೂ ಹರಸಾಹಸ ಪಡುವಂಥ ಸ್ಥಿತಿ ಇದೆ. ಇದರ ನಡುವೆಯೂ, ಅವುಗಳ ಉಳಿವಿಗಾಗಿ ಹಲವರು ದುಡಿಯುತ್ತಿದ್ದಾರೆ.

    ಅರಣ್ಯದಂಚಿನ ಗ್ರಾಮಗಳಲ್ಲಿರುವ ರೈತರು ಬೆಳೆಗೆ ಕ್ರಿಮಿನಾಶಕ ಬಳಸಬೇಡಿರೆಂದು ಜಾಗೃತಿ ಮೂಡಿಸುತ್ತಿರುವ ಮೈಸೂರಿನ ಡಿ.ಎಚ್.ತನುಜಾ ದಶರಥ ಹಂಸಭಾವಿ ಅವರು ಪ್ರಾಣಿ, ಪಕ್ಷಿಗಳು ತಿನ್ನದಂತ ಬೆಳೆ ಬೆಳೆಯುವಂತೆ ಪ್ರೇರೇಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ಈ ಮೂಲಕ ರಾಸಾಯನಿಕ, ಕ್ರಿಮಿನಾಶಕದಿಂದ ಪ್ರಾಣಿ, ಪಕ್ಷಿಗಳು, ಸಸ್ಯ ಸಂಪತ್ತಿನ ಮೇಲಾಗುತ್ತಿರುವ ದುಷ್ಪರಿಣಾಮ ತಡೆಗಟ್ಟುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕಬ್ಬು, ಬಾಳೆ, ರಾಗಿ ಸೇರಿ ಇನ್ನಿತರ ಬೆಳೆ ಬೆಳೆದರೆ ಅದನ್ನು ಪ್ರಾಣಿ, ಪಕ್ಷಿಗಳು ತಿಂದು ಹಾಕುವುದರಿಂದ ರೈತರಿಗೆ ತೊಂದರೆ ಅಗುತ್ತದೆ. ಇದರಿಂದ ಪ್ರಾಣಿ ಹಾಗೂ ಮಾನವ ಸಂಘರ್ಷ ಕೂಡ ಏರ್ಪಟ್ಟು ಪ್ರಾಣ ಹಾನಿಯೂ ಅಗುತ್ತಿದೆ. ಅಲ್ಲದೇ ಬೆಳೆಗೆ ಕ್ರಿಮಿನಾಶಕ, ರಾಸಾಯನಿಕ ಬಳಸುವುದರಿಂದ ಪರಿಸರ, ಪ್ರಾಣಿ, ಪಕ್ಷಿಗಳಿಗೂ ತೊಂದರೆ. ಇದನ್ನು ಮನಗಂಡ ತನುಜಾ ಕಾಡಂಚಿನ ರೈತರು ಪರ್ಯಾಯ ಬೆಳೆ ರಾಜ್​ವುಚವಾಲ್ ಎಂಬ ಬೆಳೆಯನ್ನು ಬೆಳೆಯುವಂತೆ ಪ್ರೇರೇಪಣೆ ನೀಡುತ್ತಿದ್ದಾರೆ. ಈಗಾಗಲೇ ಬಂಡೀಪುರ ಅರಣ್ಯದಂಚಿನ ಕೆಲ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿರುವ ಅವರು, ಹದಿನೈದು ದಿನ ಇಲ್ಲವೇ ತಿಂಗಳಿಗೊಮ್ಮೆ ಹೋಗಿ ಪ್ರಾಣಿ, ಪಕ್ಷಿಗಳ ನಡವಳಿಕೆಯನ್ನು ರೈತರಿಗೆ ತಿಳಿಸಿ ಬರುತ್ತಾರೆ. ಕಾಡು ಪ್ರಾಣಿಗಳು ತಿನ್ನದೆ ಇರುವ ಈ ಬೆಳೆಗೆ ಯಾವುದೇ ರಾಸಾಯನಿಕ ಬಳಸಬೇಕಾಗಿಲ್ಲ. ಇದರಿಂದ ಜನರು, ಪ್ರಾಣಿ, ಪಕ್ಷಿಗಳಿಗೂ ಯಾವುದೇ ಅಪಾಯವಿಲ್ಲ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

    ‘ಮಹಾರಾಣಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಲು ಒಂದು ತಿಂಗಳ ಶಿಬಿರ ಇದೆ ಎಂದು ಸುತ್ತೋಲೆ ಬಂದಿತ್ತು. ಮೃಗಾಲಯಕ್ಕೆ ದಿನ ಉಚಿತವಾಗಿ ಹೋಗಿ ಬರಬಹುದು ಎನ್ನುವ ಉದ್ದೇಶದಿಂದ ಶಿಬಿರಕ್ಕೆ ಸೇರಿದೆ. ಅಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದ, ಗ್ರಂಥಾಲಯದಲ್ಲಿ ಓದಿದ ಪ್ರಾಣಿ, ಪಕ್ಷಿಗಳ ಮಾಹಿತಿ ಹೆಚ್ಚು ಆಕರ್ಷಿಸಿತು. ನಗರದಲ್ಲಿ ಕುಳಿತು ಪ್ರಾಣಿ, ಪಕ್ಷಿಗಳಿಗೆ ತೊಂದರೆ ಕೊಡಬೇಡಿ ಎಂದು ಹೇಳುವ ಬದಲು ಕಾಡಂಚಿಗೆ ತೆರಳಿ ಅಲ್ಲಿನ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗ 50-60 ಕೆ.ಜಿ.ಯಷ್ಟು ಚವಾಲ್ ಅನ್ನು ದುಡ್ಡು ಕೊಟ್ಟು ತಂದು ಕೆಲವರಿಗೆ ಮಾರಾಟ ಮಾಡುತ್ತಿದ್ದೇನೆ. ಇನ್ನೂ ಹೆಚ್ಚಿನ ಮಾರುಕಟ್ಟೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಇತರರು ಕೈ ಜೋಡಿಸಿದರೆ ಮಾನವ-ಪ್ರಾಣಿ ಸಂಘರ್ಷ ತಪ್ಪಿಸಬಹುದು’ ಎನ್ನುತ್ತಾರೆ ತನುಜಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts