More

    ಶ್ರೀಲಕ್ಷ್ಮೀಯಾದ ಅವಳು ಮನೆಯ ಗೃಹಲಕ್ಷ್ಮೀ: ಡಾ.ಮೈತ್ರೇಯಿ ಆದಿತ್ಯ

    ಬಾಲ್ಯದಲ್ಲಿ ನನಗಂತೂ ಗೆಜ್ಜೆ ಹಾಕಬೇಕೆಂಬಾಸೆ. ಕಾಲಿಗೆ ಸುಟ್ಟಗಾಯವಾದುದರಿಂದ ಗೆಜ್ಜೆ ಹಾಕಲಾಗುತ್ತಿರಲಿಲ್ಲವೆಂದು ಅಮ್ಮನೂ ಕೊಡುತ್ತಿರಲಿಲ್ಲ. ಅಂತೂ ಕಾಡಿ-ಬೇಡಿ ಅಮ್ಮನ ಬಳಿಯಿಂದ ಒಂದಿನ ಗೆಜ್ಜೆಯನ್ನು ಹಾಕಿಸಿಕೊಂಡೆ. ಅವತ್ತು ಸಂಭ್ರಮವೋ ಸಂಭ್ರಮ. ನಮ್ಮ ಮನೆಯ ಹಿಂದೆ ಪುಟ್ಟ ಗುಡ್ಡವೊಂದಿತ್ತು. ಗೆಳೆಯರೆಲ್ಲಾ ಆಡಲು ಹೋಗುವ ತಾಣವದು. ಅಲ್ಲೇ ಸಂಪಿಗೆ, ನೇರಳೆ, ಸಕ್ಕರೆ ಮೊದಲಾದ ಮಲೆನಾಡಿನ ಹಣ್ಣುಗಳೂ ದೊರೆಯುತ್ತಿದ್ದವು. ಅದನ್ನೆಲ್ಲಾ ತಿಂದು, ಆಟವಾಡಿ ಮನೆಗೆ ಮರಳಿದಾಗ ಸಂಜೆಯಾಗಿತ್ತು. ಮನೆಗೆ ಬಂದವಳಿಗೆ ಅಮ್ಮನ ಕಣ್ಣಿಗೆ ಕಂಡದ್ದು ನನ್ನ ಕಾಲು. ಕರೆದು ಗೆಜ್ಜೆ ಎಲ್ಲಿ ಹೋಯಿತೆಂದು ಕೇಳಿದಳು. ಆಟದ ಮೈಮರೆವಿನಲ್ಲಿ ಗೆಜ್ಜೆ ಕಳೆದ ಅರಿವಿರಲಿಲ್ಲ. ಅಮ್ಮ ಸಮಾಧಾನವಾಗಿ ಕೇಳಿದಾಗ ಸುಮ್ಮನಿದ್ದೆ, ಗದರಿ ಕೇಳಿದಳು ನನ್ನ ಬಳಿ ಉತ್ತರವಿಲ್ಲ. ಅದಕ್ಕಾಗಿ ಆಡಿದ ಜಾಗದಲ್ಲಿ ಹುಡುಕಿ ತಾ ಎಂದಳು. ಆಯಿತೆಂದು ಹೊರಟೆ.

    ಮತ್ತೆ ಗುಡ್ಡ ಹತ್ತಿ ಗೆಜ್ಜೆ ಹುಡುಕಲೆಂದು ಹೊರಟವಳಿಗೆ ಕಂಡದ್ದು ಸುಂದರವಾದ ನೇರಳೇ ಹಣ್ಣುಗಳು. ಹುಡುಕುವುದನ್ನು ಅಲ್ಲಿಗೇ ಬಿಟ್ಟು ಒಂದಷ್ಟು ಹಣ್ಣು ತಿಂದು ಮನೆಗೆ ಬಂದೆ. ಅಮ್ಮ ಗೆಜ್ಜೆ ಎಲ್ಲೆಡೆ ಹುಡುಕಿದೆ ಎಲ್ಲೂ ಸಿಗಲಿಲ್ಲ!!! ಎಂದೆ. ತಕ್ಷಣಕ್ಕೆ ಬಾಯಿ ಮೇಲೆ ಬಾರಿಸಿದಳು. ತುಟಿಯಂಚಿನಲ್ಲಿ ರಕ್ತ ಬಂದಿತ್ತು. ಏತಕ್ಕಾಗಿ ಹೊಡೆದದ್ದು ಎಂದರೆ ನಾನು ಸುಳ್ಳು ಹೇಳಿದೆನೆಂದು. ನನ್ನ ತುಂಟಾಟದ ಅರಿವಿದ್ದ ಅವಳು ಹಿಂದೆಯೇ ಬಂದಿದ್ದಳು. ನಾನು ಹುಡುಕದ ಗೆಜ್ಜೆ ಅವಳಿಗೆ ದೊರಕಿತ್ತು. ಅಸಲಿಗೆ ನಾನು ಜವಾಬ್ದಾರಿಯುತವಾಗಿ ಹುಡುಕಿಯೇ ಇರಲಿಲ್ಲ. ಹಾಗಾಗಿ ಅವಳು ಪೆಟ್ಟು ಕೊಟ್ಟಿದ್ದಳು. ನಂತರ ಮುದ್ದು ಮಾಡಿ ಸಮಾಧಾಸಿದ್ದು ಅವಳ ಮಾತೃವಾತ್ಸಲ್ಯ.

    ಅಲ್ಲಿಂದ ನಂತರದಲ್ಲಿ ಸುಳ್ಳಾಡಬಾರದು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಜೀವನದಲ್ಲಿ ಅಳವಡಿಸಿಕೊಂಡೆ. ನನ್ನ ಅನೇಕ ಕಷ್ಟದ ಸಮಯದಲ್ಲಿ ಜೊತೆ ನಿಂತ ನನ್ನಮ್ಮನ ಬದುಕು ನನಗೆ ಸ್ಪೂರ್ತಿ. ಅವಳಂತೆ ಪೂರ್ಣ ಅಲ್ಲದಿದ್ದರೂ ಒಂದಷ್ಟು ಗುಣಗಳನ್ನು ಬೆಳೆಸಿಕೊಂಡು ಬದುಕು ಕಟ್ಟಿಕೊಳ್ಳುವಲ್ಲಿ ಅವಳು ಮಾರ್ಗದರ್ಶಕಿಯಾಗಿದ್ದಾಳೆ. ಅವಳು ನಮಗೆ ಹೀಗಿರಬೇಕೆಂದು ಹೇಳಿಕೊಟ್ಟಿದ್ದಕ್ಕಿಂತಲೂ ತಾನು ಹಾಗೇ ನಡೆದುಕೊಂಡು ಇದು ಒಳ್ಳೆಯ ಬದುಕಿನ ದಾರಿ ಎಂದು ತೋರಿಸಿಕೊಟ್ಟಿದ್ದಾಳೆ. ಶ್ರೀಲಕ್ಷ್ಮೀಯಾದ ಅವಳು ಮನೆಯ ಗೃಹಲಕ್ಷ್ಮೀ ಅವಳನ್ನು ತಾಯಿಯಾಗಿ ಪಡೆದ ನಾನೇ ಧನ್ಯೇ. ನೂರ್ಕಾಲ ಬಾಳಮ್ಮ. ನಿನಗೆ ಅಮ್ಮಂದಿರ ದಿನದ ಶುಭಾಶಯಗಳು.

    | ಡಾ.ಮೈತ್ರೇಯಿ ಆದಿತ್ಯ ಶಿವಮೊಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts