More

    ಮನೆಗೆ ಬಂದವರನ್ನು ಕರೆದು ಕೂರಿಸಿ ಗೌರವಿಸಲು ಕಲಿಸಿದ್ದೇ ಅಮ್ಮ: ಅನ್ನಪೂರ್ಣ

    ನಾವಿದ್ದದ್ದು ಸಣ್ಣ ಹಳ್ಳಿ. ಅಪ್ಪ ಡಾಕ್ಟರ್. ಸುತ್ತಮುತ್ತ ಹತ್ತಾರು ಹಳ್ಳಿಗಳಿಂದ ರೋಗಿಗಳು ಎತ್ತಿನಗಾಡಿ ಕಟ್ಟಿಕೊಂಡು ಚಿಕಿತ್ಸೆಗೆಂದು ಬರ್ತಾ ಇದ್ರು. ಅಪ್ಪನ ಕೈಗುಣ ಅಂಥಾದ್ದು. ಅವೇಳೆಯಲ್ಲೇ ಬರಲಿ, ಬೇಸರವಿಲ್ಲದೆ ಎದ್ದು ನೋಡುತ್ತಿದ್ದರು. ಅಮ್ಮ ಕೂಡ ಅಪ್ಪನಿಗೆ ತಕ್ಕ ಹೆಂಡತಿ. ಬಂದ ರೋಗಿಗಳಿಗೆ ನೀರು, ಕಾಫಿ, ಗಂಜಿ, ಕೆಲವೊಮ್ಮೆ ಊಟದ ವ್ಯವಸ್ಥೆಯನ್ನೂ ಮಾಡುತ್ತಿದ್ದಳು. ಒಮ್ಮೆಯೂ ಬೇಸರ ಮಾಡಿಕೊಂಡಿದ್ದೇ ಇಲ್ಲ.
    ನಾವಿನ್ನೂ ಚಿಕ್ಕವರು. ಹುಡುಗಾಟದ ಬುದ್ಧಿ. ಯಾವುದನ್ನೂ ಗಂಭೀರವಾಗಿ ನೋಡುತ್ತಿರಲಿಲ್ಲ.

    ಒಂದು ದಿನ ಅಪ್ಪ ಹಳ್ಳಿ ಕಡೆ ಹೋಗಿ ಸುಸ್ತಾಗಿ ಬಂದಿದ್ದರು. ಊಟವೂ ಬೇಡ, ನಾನು ಸ್ವಲ್ಪ ಹೊತ್ತು ಮಲಗ್ತೀನಿ. ಯಾರಾದ್ರೂ ಬಂದ್ರೆ ಕೂಡ್ಸಿರು ಅಂತ ಹೇಳಿ ಮಲಗಲು ಹೋದ್ರು. ಅಮ್ಮ ಅಡಿಗೆ ಮನೆಗೆ ಹೋಗ್ತಾ, ‘ಗಲಾಟೆ ಮಾಡ್ಬೇಡ್ರಿ, ಅವರು ನಿದ್ದೆ ಮಾಡ್ಲಿ, ನಿದ್ದೆ ಬಂದಾಗ ಎಬ್ಬಿಸಿದ್ರೆ ಅವರ ಕೋಪ ಗೊತ್ತಲ್ಲ’ ಅಂತ ಹೇಳಿದ್ಲು. ನಾವು ಆಚೆ ಆಟ ಆಡ್ತಾ ಇದ್ವಿ.. ಯಾರೋ ಒಬ್ಬರು ಬಂದು ‘ಅಮ್ಮಯ್ಯ, ಡಾಕ್ಟ್ರು ಇದ್ದಾರಾ’ ಅಂದ್ರು. ನಾನು ‘ಇಲ್ಲ’ ಅಂದೆ. ‘ಈಗ ತಾನೆ ಗಾಡಿಲಿ ಬಂದ್ರು.. ನೋಡ್ದೆ. ಅದಕ್ಕೇ ಓಡಿಬಂದೆ. ಮಗುಗೆ ತುಂಬ ಜ್ವರ, ಮೈಯ್ಯಲ್ಲ ತಣ್ಣಗಾಗಿದೆ.. ಅದಕ್ಕೆ ಬಂದೆ ಕರಿರಮ್ಮಯ್ಯ’ ಅಂದ್ರು.
    ‘ಮಲಗಿದ್ದಾರೆ ಅಂದ್ರೆ ಎಬ್ಬಿಸಿ ಅಂತಾರೆ ಅಂತ ಗೊತ್ತು. ಎಬ್ಬಿಸಿದ್ರೆ ಅವರಿಗೆ ಕೋಪಬರುತ್ತೆ’ ಅಂತ ನನ್ನ ತಲೇಲಿ. ‘ಇಲ್ಲ ಅಂತ ಎಷ್ಟು ಸಾರಿ ಹೇಳ್ಬೇಕು? ಗೊತ್ತಾಗಲ್ವಾ ನಿಂಗೆ’ ಅಂದೆ.. ‘ದಮ್ಮಯ್ಯ ಹಂಗನ್ಬೇಡಿ ,ಚಿಕ್ಕಮಗ,ಇದ್ರೆ ಕರೀರಮ್ಮ..ನಿಮ್ಮ ಅಮ್ಮಾವ್ರನ್ನಾದ್ರೂ ಕರೀರಿ’ ಅಂದರು. ‘ಅಮ್ಮಾವ್ರ ಇಲ್ಲ. ಯಾರೂ ಇಲ್ಲ.. ನೀನು ಹೋಗು, ಏನ್ ಜನಾನೊ…’ ಅಂತ ಹೇಳ್ತಾ ಇದ್ದೆ.. ಅಷ್ಟರಲ್ಲಿ ಅಮ್ಮ, ‘ಯಾರೇ ಅದು’ ಅಂತ ಆಚೆ ಬಂದ್ಲು.

    ನಾನು ಅಂದದ್ದು ಅಮ್ಮನಿಗೆ ಕೇಳಿಸಿತ್ತು. ಬಾಯಿ ಮೇಲೆ ಒಂದೇಟು ಬಿಟ್ಟು ‘ಮನೆ ಬಾಗಿಲಿಗೆ ಬಂದೊರನ್ನ ಹೀಗಾ ಅನ್ನೋದು.. ಯಾರಾದ್ರೂ ಬಂದ್ರೆ ಕೂಡ್ಸಿರು ಅಂತ ಅಪ್ಪ ಹೇಳಿದ್ರು ತಾನೆ…!!’ ಅಂದ್ಲು.. ‘ಹೋಗ್ಲಿ ಬಿಡಿ ಅಮ್ಮಯ್ಯ. ಏನೋ ಮಗಿಗಿ ಗೊತ್ತಾಗಿಲ್ಲ. ಹೊಡಿಬ್ಯಾಡಿ.. ಹುಡುಗುಬುದ್ಧಿ..’ ಅಂತ ಬಂದವರು ಹೇಳಿದರು. ‘ಹಾಗಲ್ಲ ಲಿಂಗಪ್ಪ, ಇವತ್ತು ಕಲ್ತಿದ್ದೆ ನಾಳೇನು ಬರೋದು.. ತಪ್ಪಲ್ವ ಅವಳು ಅಂದಿದ್ದು’ ಅಂದರು ಅಮ್ಮ.

    ಏಟು ತಿಂದು ನಾನು ಒಳಗೆ ಬಂದೆ. ಅವರನ್ನು ಕೂಡಿಸಿ ಅಮ್ಮ ಒಳಗೆ ಬಂದು, ನನ್ನನ್ನ ಮುದ್ದುಮಾಡುತ್ತ, ‘ನೋಡು ಪುಟ್ಟ.. ಅಪ್ಪ ಡಾಕ್ಟ್ರು.. ಹುಷಾರಿಲ್ಲ ಅಂತ ಮನೆ ಬಾಗಿಲಿಗೆ ಅವ್ರ ಬಂದ್ರೆ ಬೈತಾರ..!! ಇಲ್ಲ ಹೋಗು ಅಂತಾರ..!! ಬಂದೋರನ್ನ ಒಳ್ಳೆ ಮಾತಾಡಿ ಕೂತ್ಕೊಳ್ಳಿ ಬರ್ತಾರೆ ಅಂತ ಹೇಳಿದ್ರೆ ಅವರಿಗೆ ನಿನ್ನ ಬಗ್ಗೆ ಎಷ್ಟು ಪ್ರೀತಿ ಬರುತ್ತೆ. ಚಿಕ್ಕ ಹುಡುಗಿ ಆದ್ರು ಎಷ್ಟು ತಾಳ್ಮೆಯಿಂದ ಮಾತಾಡುತ್ತೆ ಅಂತ ಸಂತೋಷ ಪಡ್ತಾರಲ್ವಾ..! ಇನ್ನು ಮುಂದೆ ಯಾರೇ ಬಂದು ಕೇಳಿದರೂ ಸಮಾಧಾನವಾಗಿ ಮಾತಾಡು, ನಾಳೆ ಒಳ್ಳೆ ಹುಡುಗಿ ಅನ್ನುಸ್ಕೊತೀಯ ಗೊತ್ತಾಯ್ತಾ..?’ ಎಂದು ಹೇಳಿದಳು. ಅವತ್ತೇ ನನಗೆ ಬುದ್ಧಿ ಬಂತು..ಅಮ್ಮನ ಮಾತು ತಲೆಗೆ ಹೊಕ್ಕಿತ್ತು. ಅಂದಿನಿಂದ ಇಂದಿನವರೆಗೂ ಯಾರಲ್ಲೂ ಆ ರೀತಿ ಮಾತಾಡಿಲ್ಲ. ಆಡುವವರನ್ನು ನೋಡಿದ್ರೆ ನಾನೂ ಬೈತೀನಿ.

    | ಅನ್ನಪೂರ್ಣ ಸುಬ್ಬರಾವ್ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts