More

    ಸೆಮಿಫೈನಲ್​ ಪಂದ್ಯಗಳಿಗೆ ಮಳೆ ಅಡ್ಡಿಯಾದ್ರೆ ಫಲಿತಾಂಶ ನಿರ್ಧರಿಸುವುದು ಹೇಗೆ? ICC ನಿಯಮಗಳು ಹೀಗಿವೆ…

    ನವದೆಹಲಿ: ಭಾರತ ಆಯೋಜಿಸಿರುವ ಏಕದಿನ ವಿಶ್ವಕಪ್​ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಲೀಗ್​ ಹಂತದ ಪಂದ್ಯಗಳು ಮುಗಿದು ಸೆಮಿಫೈನಲ್​ ಫೀವರ್​ ಎಲ್ಲೆಡೆ ಶುರುವಾಗಿದೆ. ನಾಳೆ ಮೊದಲ ಸೆಮಿಫೈನಲ್​ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಫೈನಲ್​ ಸುತ್ತಿಗೇರಲು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಕಾದಾಡಲಿವೆ.

    ಆದರೆ, ಭಾರತದಲ್ಲಿ ತೀರ ಪ್ರದೇಶಗಳಲ್ಲಿ ಮಾನ್ಸೂನ್​ ಕಾರಣದಿಂದಾಗಿ ನಿರ್ಣಾಯಕ ಹಂತದ ಪಂದ್ಯಗಳಿಗೆ ಮಳೆ ಭೀತಿಯು ಕಾಡತೊಡಗಿದೆ. ಐತಿಹಾಸಿಕ ಟೂರ್ನಿ ಮುಗಿಲು ಇನ್ನೂ ಎರಡೇ ಹೆಜ್ಜೆ ಬಾಕಿ ಇದೆ. ಈ ಸಂದರ್ಭದಲ್ಲಿ ಮಳೆ ಎದುರಾದರೆ ಕ್ರೀಡಾಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ನಿರಾಸೆ ಬೇರೊಂದಿಲ್ಲ. ಮಳೆ ಬರದಿರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆ ಬಂದರೆ ಪಂದ್ಯ ರದ್ದಾಗಲಿದೆಯಾ? ಫೈನಲ್​ ಪಂದ್ಯಕ್ಕೆ ತಂಡವನ್ನು ಹೇಗೆ ನಿರ್ಧರಿಸುತ್ತಾರೆ? ಮಳೆ ಬಂದರೂ ಮತ್ತೊಂದು ದಿನ ಪಂದ್ಯ ನಡೆಯಲಿದೆಯಾ? ಸಮಿಫೈನಲ್​ಗೆ ವರಣನ ಅಡ್ಡಿಯಾದರೆ ಫೈನಲ್​ ಆಯ್ಕೆಗೆ ಏನೆಲ್ಲ ದಾರಿಗಳಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಮೊದಲನೆಯದಾಗಿ ಸಮಿಫೈನಲ್​ ಪಂದ್ಯಗಳು ಅತ್ಯಂತ ನಿರ್ಣಾಯಕ ಘಟ್ಟವಾಗಿರುವುದರಿಂದ ಒಂದು ವೇಳೆ ಮಳೆ ಬಂದರೂ ಐಸಿಸಿ ನಿಯಮದಂತೆ ಪಂದ್ಯ ನಡೆಯುವುದು ಖಚಿತ. ಆದರೆ, ಮಳೆ ಆಡಲು ಅವಕಾಶವನ್ನೇ ಕೊಡದಿದ್ದಾಗ ಐಸಿಸಿ ಜಾರಿ ತಂದಿರು ಕೆಲವು ನಿಯಮಗಳ ಪ್ರಕಾರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಆ ನಿಯಮಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    * ನಿಗದಿಯಾದ ದಿನದಂದು ಮಳೆಯಿಂದ ಸಮಿಫೈನಲ್​ ರದ್ದಾದರೆ, ಮೀಸಲು ದಿನದಲ್ಲಿ ಪಂದ್ಯವನ್ನು ನಡೆಸಲಾಗುತ್ತದೆ. ಅಂದರೆ, ಭಾರತ ಮತ್ತು ನ್ಯೂಜಿಲೆಂಡ್​ ಬುಧವಾರ (ನ.15) ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಮಳೆ ಬಿಡುವು ಕೊಡದೆ ನಿರಂತರವಾಗಿ ಸುರಿದು ಪಂದ್ಯವೇ ರದ್ದಾದರೆ, ಮರುದಿನ ಅಂದರೆ ಗುರುವಾರ (ನ.16) ಮತ್ತೆ ಸಮಿಫೈನಲ್​ ಪಂದ್ಯ ನಡೆಯಲಿದೆ.

    * ಸೆಮಿಫೈನಲ್​ ಪಂದ್ಯಗಳಿಗೆ ಹೆಚ್ಚುವರಿಯಾಗಿ ಎರಡು ಗಂಟೆಯನ್ನು ನಿಗದಿ ಮಾಡಲಾಗಿದೆ. ಅಂದರೆ, ಪಂದ್ಯವು 2 ಗಂಟೆಗೆ ಆರಂಭವಾಗಿ 5 ಗಂಟೆ ಮಳೆಯಿಂದ ಸ್ಥಗಿತಗೊಂಡರೆ ಮತ್ತು ಮಳೆ ನಿಂತು ಮತ್ತೆ 7 ಗಂಟೆಗೆ ಆರಂಭವಾದರೆ, ಯಾವುದೇ ಓವರ್​ಗಳನ್ನು ಕಡಿತ ಮಾಡುವುದಿಲ್ಲ. ಒಂದು ವೇಳೆ 2 ಗಂಟೆಗೂ ಹೆಚ್ಚು ವಿಳಂಬವಾದಲ್ಲಿ, ಆ ನಂತರ ಪ್ರತಿ ಐದು ನಿಮಿಷಕ್ಕೆ ಒಂದು ಓವರ್​ ಅನ್ನು ಕಡಿತ ಮಾಡಲಾಗುತ್ತದೆ.

    * ಒಂದು ವೇಳೆ ಸಮಿಫೈನಲ್​ ಪಂದ್ಯ ಮಳೆಯಿಂದ ಅರ್ಧಕ್ಕೆ ಮೊಟಕುಗೊಂಡರೆ ಅದರ ನಾಳೆಗೆ ಹಿಂದಿನ ದಿನ ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಮತ್ತೆ ಆರಂಭ ಮಾಡಲಾಗುತ್ತದೆ. ಅಂದರೆ, ನಾಳೆ ಭಾರತ ಟಾಸ್​​ ಗೆದ್ದು ನ್ಯೂಜಿಲೆಂಡ್​ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುತ್ತದೆ ಅಂದುಕೊಳ್ಳಿ. ಭಾರತ ಬ್ಯಾಟಿಂಗ್​ ಆರಂಭಿಸಿದಾಗ 10ನೇ ಓವರ್​ ಮುಕ್ತಾಯಕ್ಕೆ ಮಳೆ ಬರುತ್ತದೆ ಅಂದುಕೊಳ್ಳಿ. ಒಂದು ವೇಳೆ ಮಳೆ ನಿಲ್ಲದೇ, ಇಡೀ ಕ್ರೀಡಾಂಗಣ ಆಡಲಾರದಷ್ಟು ಒದ್ದೆಯಾದರೆ, ಅದೇ ಪಂದ್ಯವನ್ನು ನಾಳೆಗೆ 11ನೇ ಓವರ್​ನಿಂದಲೇ ಆರಂಭಿಸಲಾಗುತ್ತದೆ.

    * ಸಮಿಫೈನಲ್​ನಲ್ಲಿ ಒಂದು ಇನಿಂಗ್ಸ್​ ಮುಕ್ತಾಯದ ಬಳಿಕ ದ್ವಿತೀಯ ಇನಿಂಗ್ಸ್​ ಆರಂಭಿಸುವಷ್ಟರಲ್ಲಿ ಮಳೆ ಬಂದು ಮತ್ತೆ ಪಂದ್ಯ ಆರಂಭವಾದರೆ, ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯದ ಫಲಿತಾಂಶವನ್ನು ನಿರ್ಣಯಿಸಲಾಗುತ್ತದೆ.

    * ಒಂದು ವೇಳೆ ಸೈಕ್ಲೋನ್​ ರೀತಿ ಮಳೆ ಹಿಡಿದುಕೊಂಡು ಸೆಮಿಫೈನಲ್​ ಮತ್ತು ಮೀಸಲು ದಿನವೂ ಪಂದ್ಯ ರದ್ದಾದರೆ, ಲೀಗ್​ ಹಂತದ ಅಂಕಗಳ ಆಧಾರದ ಮೇಲೆ ಫೈನಲ್​ ಪ್ರವೇಶಿಸುವ ತಂಡವನ್ನು ನಿರ್ಣಯಿಸಲಾಗುತ್ತದೆ. ಉದಾಹರಣೆಗೆ ನಾಳೆ ನಡೆಯುವ ಪಂದ್ಯ ಈ ರೀತಿಯ ಪರಿಸ್ಥಿತಿಗೆ ಸಿಲುಕಿದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಮ್​ ಇಂಡಿಯಾ ಫೈನಲ್​ ಪ್ರವೇಶ ಮಾಡಲಿದೆ.

    ಸೆಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಗಾಜಾ ಮೇಲಿನ ಹಿಡಿತ ಕಳೆದುಕೊಂಡ ಹಮಾಸ್​ ದಕ್ಷಿಣಕ್ಕೆ ಪರಾರಿ: ಇಸ್ರೇಲ್​ ರಕ್ಷಣಾ ಸಚಿವರ ಹೇಳಿಕೆ

    ಲಂಕಾ ಕ್ರಿಕೆಟ್‌ನಲ್ಲಿ ಜಯ್ ಷಾ ಹಸ್ತಕ್ಷೇಪ: ಬಿಸಿಸಿಐ ಕಾರ್ಯದರ್ಶಿ ವಿರುದ್ಧ ಮಾಜಿ ನಾಯಕ ಅರ್ಜುನ ರಣತುಂಗ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts