More

    ರಸ್ತೆಬದಿ ಟೆಂಟ್‌ನಲ್ಲಿ ಕಾರ್ಮಿಕರ ವಾಸ

    ಚಿಕ್ಕಮಗಳೂರು: ಕೆಲಸ ಅರಸಿಕೊಂಡು ಕಾಫಿ ನಾಡಿಗೆ ಉತ್ತರ ಕರ್ನಾಟಕ ಹಾಗೂ ದೇಶದ ವಿವಿಧ ರಾಜ್ಯಗಳಿಂದ ನೂರಾರು ಕಾರ್ಮಿಕರು ಆಗಮಿಸುತ್ತಾರೆ. ಹೀಗೆ ಬರುವ ಕಾರ್ಮಿಕರು ಕಾಫಿ ತೋಟಗಳ ಮಾಲೀಕರು ನೀಡುವ ಕೂಲಿಲೈನ್ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಆದರೆ ಈ ಬಾರಿ ಕೆಲಸಕ್ಕಾಗಿ ಬಂದ 300ಕ್ಕೂ ಹೆಚ್ಚು ಕಾರ್ಮಿಕರು ರಸ್ತೆ ಬದಿಯೇ ಟೆಂಟ್‌ಗಳನ್ನು ಹಾಕಿಕೊಂಡು ವಾಸ್ತವ್ಯ ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ.

    ಕೆಲಸಕ್ಕೆ ಬರುವ ಕಾರ್ಮಿಕರು ಒಂದು ತೋಟದಲ್ಲಿ ವಾಸ್ತವ್ಯ ಹೂಡಿದರೆ ಅದೇ ತೋಟದಲ್ಲೇ ಕೆಲಸ ಮಾಡುತ್ತಾರೆ. ಆದರೆ ಚಿಕ್ಕಮಗಳೂರು ಸಮೀಪವೇ ಡೇರೆಗಳಲ್ಲಿ ವಾಸ ಆರಂಭಿಸಿರುವ ಕಾರ್ಮಿಕರು ಪ್ರತಿದಿನ ಒಂದೊಂದು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಇದಕ್ಕೆ ಮಧ್ಯವರ್ತಿಗಳ ದುರಾಸೆಯೇ ಕಾರಣ ಎನ್ನಲಾಗಿದೆ. ತಾವು ಹಣ ಮಾಡಲು ಅಮಾಯಕ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
    ಪ್ರತಿದಿನ ಒಂದೊಂದು ಕಾಫಿ ತೋಟಕ್ಕೆ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸುತ್ತಿರುವ ಮಧ್ಯವರ್ತಿಗಳು ಕಾಫಿ ತೋಟದ ಮಾಲೀಕರಿಂದ ಹೆಚ್ಚಿನ ಹಣ ಪಡೆದು ಕಾರ್ಮಿಕರಿಗೆ ಕಡಿಮೆ ಹಣ ನೀಡುತ್ತಿರುವ ದೂರುಗಳು ಬಂದಿವೆ. ಹೀಗೆ ಮಧ್ಯವರ್ತಿಗಳ ದುರಾಸೆಗೆ ಮಲೆನಾಡಿನ ಜನ ಬೇರೊಂದು ರೀತಿಯ ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
    ಕಾಫಿ ಹಣ್ಣುಗಳ ಖರೀದಿ: ಪ್ರತಿದಿನ ಒಂದೊಂದು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರು ಆ ತೋಟದ ಮಾಲೀಕರು ಕಾಫಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಂಡು ಮಧ್ಯವರ್ತಿಗಳಿಗೆ ವಿಷಯ ತಿಳಿಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬರುವ ಮಧ್ಯವರ್ತಿಗಳು ಕಾಫಿ ಹಣ್ಣನ್ನು ಖರೀದಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಮಧ್ಯವರ್ತಿಗಳು ವ್ಯಾಪಾರಿ ದೃಷ್ಟಿಕೋನದಲ್ಲೂ ಲಾಭ ಮಾಡಿಕೊಳ್ಳುತ್ತಿದ್ದಾರೆ.
    ಕಳ್ಳತನ, ದರೋಡೆ ಆತಂಕ: ಅಸ್ಸಾಂ ಸೇರಿ ಬೇರೆ ರಾಜ್ಯಗಳಿಂದ ಕಾಫಿ ನಾಡಿಗೆ ಬಂದ ಕಾರ್ಮಿಕರು ಈ ಹಿಂದೆ ಕಳ್ಳತನ, ದರೋಡೆ ನಡೆಸಿರುವ ಹಲವು ಉದಾಹರಣೆಗಳಿವೆ. ಕಾಫಿ ತೋಟದ ಮಾಲೀಕರು ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿಯೇ ಕೂಲಿಲೈನ್ ಮನೆಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಿರುತ್ತಾರೆ. ಆದರೆ ಹೀಗೆ ಎಲ್ಲೆಂದರಲ್ಲಿ, ಟೆಂಟ್‌ಗಳಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕರ ದಾಖಲೆಯನ್ನು ಯಾರೂ ಪರಿಶೀಲಿಸುವುದೇ ಇಲ್ಲ. ಒಂದು ವೇಳೆ ಈ ಕಾರ್ಮಿಕರು ಮುಂದಿನ ದಿನಗಳಲ್ಲಿ ಕಳ್ಳತನ, ದರೋಡೆಗಳಲ್ಲಿ ಭಾಗಿಯಾದರೆ ಅವರನ್ನು ಪತ್ತೆಹಚ್ಚುವುದು ಹೇಗೆ?, ಕಳ್ಳತನಗಳು ಆರಂಭಗೊಂಡರೆ ಮಲೆನಾಡಿನಲ್ಲಿ ಬದುಕುವುದಾದರೂ ಹೇಗೆ ಎಂಬ ಆತಂಕ ಜನರಲ್ಲಿ ಮೂಡಿದೆ.
    ತೋಟಗಳಲ್ಲಿ ಕಳವು ಸಾಧ್ಯತೆ: ಪ್ರತಿ ದಿನ ಒಂದೊಂದು ಕಾಫಿ ತೋಟಗಳಿಗೆ ಹೋಗುವ ಡೇರೆಗಳಲ್ಲಿ ವಾಸಿಸುವ ಕಾರ್ಮಿಕರು ತಾವು ಕೆಲಸಕ್ಕೆ ಹೋಗುವ ತೋಟಗಳಲ್ಲಿ ಏನೇನಿದೆ ಎಂಬುದನ್ನು ತಿಳಿದುಕೊಂಡು ಹಾಗೂ ತೋಟದೊಳಗೆ ಹೋಗಿ ಬರಲು ಪರ್ಯಾಯ ದಾರಿ ಯಾವುದಿದೆ? ಬೆಳೆಗಳು ಏನೇನಿವೆ ಎಂಬುದನ್ನು ತಿಳಿದುಕೊಂಡು ರಾತ್ರಿ ವೇಳೆ ಬಂದು ಕಳ್ಳತನ ಮಾಡಿದರೆ ಏನು ಮಾಡುವುದು ಎಂಬ ಆತಂಕ ಬೆಳೆಗಾರರನ್ನು ಕಾಡಲಾರಂಭಿಸಿದೆ. ಇನ್ನು ತೋಟಗಳ ಮಧ್ಯೆ ಇರುವ ಒಂಟಿ ಮನೆಗಳಿಗೆ ನುಗ್ಗಿ ದರೋಡೆಯನ್ನೂ ಮಾಡಬಹುದು ಎಂಬ ಭಯವೂ ಕಾಡಲಾರಂಭಿಸಿದೆ.
    ಹಾಳಾಗುತ್ತಿದೆ ನೈರ್ಮಲ್ಯ: ಕಾರ್ಮಿಕರು ರಸ್ತೆ ಬದಿಗಳಲ್ಲೇ ಟೆಂಟ್‌ಗಳನ್ನು ಹಾಕಿಕೊಂಡಿದ್ದು ವಾಸಿಸುತ್ತಿದ್ದಾರೆ. ಅಲ್ಲಿಯೇ ಮಲ, ಮೂತ್ರ ವಿಜರ್ಸನೆ, ಸ್ನಾನ ಇತ್ಯಾದಿ ಮಾಡುತ್ತಿರುವುದರಿಂದ ಡೇರೆ ಹಾಕಿರುವ ಪ್ರದೇಶದಲ್ಲಿ ನೈರ್ಮಲ್ಯ ಹದಗೆಟ್ಟು ಹೋಗಿದೆ. ಡೇರೆಗಳಿರುವ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿದ್ದರೂ ಕಾರ್ಮಿಕರು ಅಲ್ಲಿಯೇ ವಾಸ್ತವ್ಯ ಹೂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ನಾಲ್ಕಾರು ಕಿಲೋಮೀಟರ್‌ಗಳಿಂದ ನೀರು ತರುತ್ತಿರುವ ಕಾರ್ಮಿಕರು ಬೇರೆಡೆ ಹೋಗಲು ಮಾತ್ರ ಆಸಕ್ತಿ ತೋರುತ್ತಿಲ್ಲ.
    ಆಲದಗುಡ್ಡೆಯಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರು: ಚಿಕ್ಕಮಗಳೂರು ತಾಲೂಕಿನ ಆಲದಗುಡ್ಡೆ ಗ್ರಾಮದ ರಸ್ತೆ ಪಕ್ಕದಲ್ಲೇ ಸುಮಾರು 60ಕ್ಕೂ ಹೆಚ್ಚು ಟೆಂಟ್‌ಗಳನ್ನು ಹಾಕಿಕೊಂಡು 300ಕ್ಕೂ ಹೆಚ್ಚು ಕಾರ್ಮಿಕರು ವಾಸಿಸುತ್ತಿದ್ದಾರೆ. ಪ್ರತಿ ಟೆಂಟ್‌ನಲ್ಲಿ ಐದರಿಂದ ಎಂಟು ಜನ ವಾಸ್ತವ್ಯ ಹೂಡಿದ್ದಾರೆ. ದಾವಣಗೆರೆ ಮೂಲದ ಕೆಲ ಕಾರ್ಮಿಕರು ಹಾಗೂ ಅಸ್ಸಾಂ ಮೂಲದ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಇಲ್ಲಿ ತಂಗಿದ್ದಾರೆ. ಯಾರೊಂದಿಗೂ ಬೆರೆಯದ ಕಾರ್ಮಿಕರು ಮಧ್ಯವರ್ತಿಗಳು ಹೇಳಿದ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ. ಇನ್ನು ಡೇರೆಗಳಲ್ಲಿ ವಾಸಿಸುತ್ತಿರುವ ಜನರ ಬಳಿ ವಾಹನಗಳು ಇದ್ದು, ಯಾವುದೇ ಕ್ಷಣದಲ್ಲಿ ಇವರು ಸ್ಥಳದಿಂದ ಕಾಲ್ಕೀಳುವ ಸಾಧ್ಯತೆಯಿದೆ. ಏನಾದರೂ ಅನಾಹುತ ಮಾಡಿ ಕಾರ್ಮಿಕರು ಪಲಾಯನ ಮಾಡಿದರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts