More

    ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು

    ಬಳ್ಳಾರಿ: ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು. ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆ ವರೆಗೂ ಬಿಜೆಪಿಯನ್ನು ಗೆಲ್ಲಿಸಬೇಕಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

    ನಗರದ ಬಸವ ಭವನದಲ್ಲಿ ಗುರುವಾರ ಜರುಗಿದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

    ಒಂದು ಪಕ್ಷಕ್ಕೆ ಸಿದ್ಧಾಂತಗಳಿರಬೇಕಾಗುತ್ತದೆ. ಪಕ್ಷದ ನೀತಿ, ನಾಯಕತ್ವ, ನಿಯತ್ತು ಪ್ರಮುಖವಾಗಿರಬೇಕು. ಬಿಜೆಪಿಗೆ ಅದು ಇದೆ. ದೇಶ ಮೊದಲು ನಮ್ಮ ನೀತಿ. ನಮ್ಮ ನಾಯಕ ನರೇಂದ್ರ ಮೋದಿ. ಕೆಲಸದಲ್ಲಿರಬೇಕಾದ ನಿಯತ್ತು ನಮ್ಮಲ್ಲಿ ಇದೆ. ರಾಜೀವ್‌ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಕೇಂದ್ರದಿಂದ ಶೇ.100 ರಷ್ಟು ಅನುದಾನ ಬಿಡುಗಡೆ ಮಾಡಿದರೆ ಹಳ್ಳಿಗೆ ಹೋಗಿ ತಲುವುದು ಶೇ.15 ರಷ್ಟು ಮಾತ್ರ ಇನ್ನುಳಿದ ಶೇ.85 ರಷ್ಟು ಅನುದಾನ ತಲುಪುತ್ತಿರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದಿಂದ 11ಕೋಟಿ ರೈತರಿಗೆ ನೇರವಾಗಿ ಡಿಬಿಟಿ ಮೂಲಕ ಪಿಎಂ ಕಿಸಾನ್ ಹಣ ದೊರಕಿದೆ. 55 ಕೋಟಿ ಜನರಿಗೆ ಜನಧನ್ ಖಾತೆ ಮಾಡಿಸಲಾಗಿದೆ, ಜಲಜೀವನ ಮಿಷನ್ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು, ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಿದ್ದು ನಮ್ಮ ಸರ್ಕಾರದ ನಿಯತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    2014ರಲ್ಲಿ ಕೇಂದ್ರದ ಬಜೆಟ್ 15.40 ಲಕ್ಷ ಕೋಟಿ ರೂ. ಪ್ರಸಕ್ತ ಸಾಲಿನಲ್ಲಿ ಅದರ ಗಾತ್ರ 45.30 ಲಕ್ಷ ಕೋಟಿ ರೂ.ಗೆ ತಲುಪಿದೆ. 2014ರಲ್ಲಿ 10ನೇ ಆರ್ಥಿಕ ಶಕ್ತಿ ರಾಷ್ಟ್ರವಾಗಿತ್ತು. ಪ್ರಸ್ತುತ 5ನೇ ಆರ್ಥಿಕ ಶಕ್ತಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಇನ್ನು ಎರಡು ವರ್ಷದಲ್ಲಿ ಮೂರನೇ ಆರ್ಥಿಕ ಶಕ್ತಿಯಾಗಲಿದೆ. ಇನ್ನು 2047ರ ಹೊತ್ತಿಗೆ ವಿಶ್ವದ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲಿದೆ ಎಂದು ತಿಳಿಸಿದರು.

    ವಿಧಾನ ಪರಿಷತ್ ವಿರೋಧ ಪಕ್ಷದ ಸಚೇತಕ ಎನ್.ರವಿಕುಮಾರ್ ಮಾತನಾಡಿ, ‘ಒಂದು ಹಳ್ಳಿಯಲ್ಲಿ ಒಂದು ದಿನ’ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಆಗಬೇಕಿದೆ. ಹಳ್ಳಿ ವಾಸ್ತವ್ಯದಿಂದ ಆ ಗ್ರಾಮ ಪ್ರಧಾನಿ ನರೇಂದ್ರ ಮೋದಿಗಾಗಿ ಬದಲಾವಣೆ ಆಗಬೇಕಿದೆ ಎಂದರು.
    ಲೋಕಸಭೆ ಚುನಾವಣೆ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಹಲಗೇರಿ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನ ವೈಭವದ ಸ್ಥಾನ ಅಲ್ಲ. ಮುಳ್ಳಿನ ಹಾಸಿಗೆ ಇದ್ದಂತೆ. ಮುಂದೆ ಲೋಕಸಭೆ ಚುನಾವಣೆ ಇದೆ. ಸಂಘಟನಾತ್ಮಕವಾಗಿ ಬೂತ್‌ಮಟ್ಟದಲ್ಲಿ ಕೆಲಸ ಮಾಡಬೇಕಿದೆ ಎಂದರು.

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಜಿಲ್ಲಾಧ್ಯಕ್ಷರಿಗೆ ಇದೊಂದು ಟಾಸ್ಕ್ ಆಗಿದೆ. ಇದು ಸುಮ್ಮನೆ ಕುಳಿತುಕೊಳ್ಳುವ ಸಮಯವಲ್ಲ. ಲೋಕಸಭೆಯಲ್ಲಿ 400 ಕ್ಷೇತ್ರದಲ್ಲಿ ಬಿಜೆಪಿ ಬರಬೇಕಿದ್ದು, ಅದರಲ್ಲಿ ಬಳ್ಳಾರಿಯೂ ಒಂದಾಗಬೇಕಿದೆ ಎಂದು ತಿಳಿಸಿದರು.

    ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 26 ಗೆದ್ದಿದ್ದೇವು. ಈ ಬಾರಿ ಎಲ್ಲ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. 1999ರಲ್ಲಿ ಸುಷ್ಮಾ ಸ್ವರಾಜ್ ಅವರು ಬಳ್ಳಾರಿಗೆ ಕಾಲಿಟ್ಟ ನಂತರ ಬಳ್ಳಾರಿ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಸತತವಾಗಿ ನಾಲ್ಕು ಜನ ಸಂಸದರು ಬಿಜೆಪಿಯಿಂದ ಆಯ್ಕೆಗೊಂಡಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಗ್ಯಾರಂಟಿ ಸ್ಕೀಂನಿಂದ ಅಧಿಕಾರ ಪಡೆದ ಕಾಂಗ್ರೆಸ್ ಬಂಡವಾಳ ಬಯಲಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಆದರೂ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಕಿಡಿಕಾರಿದರು.

    ಮಾಜಿ ಸಚಿವ ಬಿ.ಶ್ರೀರಾಮುಲು, ಎಂಎಲ್ಸಿ ವೈ.ಎಂ.ಸತೀಶ್, ಮಾಜಿ ಶಾಸಕರಾದ ಸುರೇಶ್ ಬಾಬು, ಎಂ.ಎಸ್.ಸೋಮಲಿಂಗಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ನೂತನ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕ, ಮುಖಂಡರಾದ ಶಿಲ್ಪಾ ರಾಘವೇಂದ್ರ, ಬಂಗಾರು ಹನುಮಂತು, ಪಾರ್ವತಿ ಇಂದುಶೇಖರ್, ಡಾ.ಮಹಿಪಾಲ್, ಮಲ್ಲಿಕಾರ್ಜುನ ಗೌಡ, ರಾಮಲಿಂಗಪ್ಪ, ಅರುಣಾ ಕಾಮನೇನಿ ಮತ್ತಿತರರಿದ್ದರು. ಇದೇ ವೇಳೆ 1990-92ರಲ್ಲಿ ಅಯೋಧ್ಯೆಗೆ ತೆರಳಿದ್ದ ಕರಸೇವರಿಗೆ ಸನ್ಮಾನಿಸಲಾಯಿತು. ಕೆಆರ್ ಪಿಪಿ ನಗರ ಘಟಕದ ಅಧ್ಯಕ್ಷೆ ನಾಗವೇಣಿ ಸೇರಿದಂತೆ 25 ಮಹಿಳಾ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts