More

    ಮರದ ಸೇತುವೆ ನದಿಪಾಲು

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಬೈಂದೂರು ತಾಲೂಕಿನ ಎಳಜಿತ್ ಗ್ರಾಮದ ಸಾತೇರಿ ಹೊಳೆಯ ತಾತ್ಕಾಲಿಕ ಮರದ ಸೇತುವೆ ಕೊಚ್ಚಿ ಹೋಗಿ ನದಿ ಪಾಲಾಗಿದೆ. ಇದರಿಂದಾಗಿ ಈ ಭಾಗದ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಹತ್ತಾರು ಕಿ.ಮೀ. ಸುತ್ತುಬಳಸಿ ಪತ್ರಿನಿತ್ಯ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲಿನ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಎಳಜಿತ್ ಗ್ರಾಮದ ಸಾತೇರಿ-ಬಾಳೆಗದ್ದೆ ಮಧ್ಯ ಸಾತೇರಿ ಹೊಳೆಯಿದ್ದು, ಮಳೆಗಾಲದಲ್ಲಿ ಇದು ತುಂಬಿ ಹರಿಯುವುದಲ್ಲದೆ ಸೆಳೆತ ಅಧಿಕವಾಗಿರುವುದರಿಂದ ನದಿ ದಾಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿನ ಸಂಪರ್ಕಕ್ಕಾಗಿ ಈ ಭಾಗದ ನಿವಾಸಿಗಳು ತಾತ್ಕಾಲಿಕ ಮರದ ಸೇತುವೆ ನಿರ್ಮಾಣ ಮಾಡಿಕೊಂಡಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ಶಾಲಾ ಮಕ್ಕಳು, ವೃದ್ಧರು ಈ ಸೇತುವೆಯಲ್ಲಿ ಸರ್ಕಸ್ ಮಾಡುತ್ತಾ ಸಂಚರಿಸುತ್ತಿದ್ದರು.

    ಅಪಾಯಕಾರಿ ಸೇತುವೆ: ಈ ಸೇತುವೆ ಮೇಲೆ ಸಂಚರಿಸುವಾಗ ತುಸು ಆಯ ತಪ್ಪಿದರೂ ನದಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಭೀತಿಯಿದೆ. ಹೀಗಾಗಿ ಭಯದ ನೆರಳಿನಲ್ಲಿಯೇ ಪ್ರತಿ ವರ್ಷ ಮಳೆಗಾಲದಲ್ಲಿ ಈ ಭಾಗದ ನಿವಾಸಿಗಳು ಸಂಚರಿಸುತ್ತಿದ್ದಾರೆ. ಇದಲ್ಲದಿದ್ದರೆ ಶಾಲೆ ಸೇರಿದಂತೆ ಪ್ರತಿಯೊಂದು ದೈನಂದಿನ ವ್ಯವಹಾರಕ್ಕೂ ಹತ್ತಾರು ಕಿ.ಮೀ. ಸುತ್ತುಬಳಸಿ ಸಂಚರಿಸಬೇಕಾಗಿದೆ.
    ಕರಾವಳಿಯಲ್ಲಿ ಕಳೆದ ತಿಂಗಳು ಎಡಬಿಡದೆ ಸುರಿದ ಭಾರಿ ಮಳೆಯಿಂದಾಗಿ ಈ ತಾತ್ಕಾಲಿಕ ಮರದ ಸೇತುವೆ ಕೊಚ್ಚಿಕೊಂಡು ಹೋಗಿದೆ, ಇದರಿಂದಾಗಿ ಈ ಭಾಗದ ನಿವಾಸಿಗಳು ಅತಂತ್ರರಾಗಿದ್ದಾರೆ. ವಿದ್ಯಾರ್ಥಿಗಳು ಬೈಂದೂರು, ಎಳಜಿತ್ ಶಾಲೆ, ಕಾಲೇಜಿಗೆ ಹತ್ತಾರು ಕಿ.ಮೀ. ಸುತ್ತುಬಳಸಿ ಹೋಗುತ್ತಿದ್ದಾರೆ.ಹೀಗಾಗಿ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಮಳೆಗಾಲದಲ್ಲಿ ನದಿ ದಾಟಲು ಅನುಕೂಲವಾಗುವಂತೆ ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿಕೊಂಡಿದ್ದು, ಪ್ರತಿವರ್ಷ ಇದರಲ್ಲಿ ಶಾಲಾ ವಿದ್ಯಾರ್ಥಿಗಳು , ವೃದ್ಧರು ಸರ್ಕಸ್ ಮಾಡುತ್ತಾ ಭಯದ ನೆರಳಿನಲ್ಲಿಯೇ ಸಂಚರಿಸುತ್ತಿದ್ದೇವೆ. ಇದೀಗ ಆ ಮರದ ಸೇತುವೆ ಭಾರಿ ಮಳೆಗೆ ನದಿ ಪಾಲಾಗಿದ್ದು, ಪ್ರಸ್ತುತ ಕಾಲ್ತೋಡು ಗ್ರಾಮದ ಪೈನಾಡಿ ಮೂಲಕ ಕಾಡುದಾರಿ ಹಾಗೂ ದುರ್ಗಮ ರಸ್ತೆಯಲ್ಲಿ ಆಟೋಗೆ 300 ರೂ.ಬಾಡಿಗೆ ಕೊಟ್ಟು ಎಳಜಿತ್ ಶಾಲೆಗೆ ಬರುವ ಅನಿವಾರ್ಯತೆಯಿದೆ.
    -ಸಿದ್ದೇಶ್ ಶ್ಯಾನುಭಾಗ್, ಸ್ಥಳೀಯರು

    ಅತಿವೃಷ್ಟಿಯಿಂದ ಗ್ರಾಮೀಣ ಭಾಗದ ಕೆಲವು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಹಲವಾರು ಕಡೆಗಳಲ್ಲಿ ಸೇತುವೆಗಳು ಕೂಡ ಕುಸಿದಿರುವ ಬಗ್ಗೆ ಮಾಹಿತಿ ಬಂದಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪ್ರಕೃತಿ ವಿಕೋಪ ನಿಧಿಯ ಹೆಚ್ಚಿನ ಅನುದಾನದ ಮೂಲಕ ಆದ್ಯತೆ ಮೇರೆಗೆ ಸರಿಪಡಿಸಲಾಗುವುದು.
    -ಬಿ.ಎಂ.ಸುಕುಮಾರ ಶೆಟ್ಟಿ ಶಾಸಕರು ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts