More

    ಜಾಗತಿಕ ಮಟ್ಟದಲ್ಲಿ ಮಹಿಳೆ ಸಾಧನೆ ಸ್ತ್ರೀಶಕ್ತಿಗೆ ಸಾಕ್ಷಿ

    ಚನ್ನರಾಯಪಟ್ಟಣ: ಮಹಿಳೆಯರು ಇಂದು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದಿದ್ದು, ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವುದು ಸ್ತ್ರೀಶಕ್ತಿಗೆ ಸಾಕ್ಷಿಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.

    ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ಪುರಸಭೆಯ ಡೇ ನಲ್ಮ್ ಯೋಜನೆಯಡಿ ರಚನೆಯಾದ ಕಾವೇರಿ, ಹೇಮಾವತಿ, ಒಳಗೇರಮ್ಮ ಹಾಗೂ ಜೇನುಗೂಡು ಪ್ರದೇಶ ಮಟ್ಟದ ಒಕ್ಕೂಟಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ನಾಲ್ಕು ಗೋಡೆಗಳಿಂದ ಹೊರಬಂದು ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಇಂದು ಪುರುಷ ಪ್ರಧಾನ ಸಮಾಜದಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ರಾಜಕೀಯ, ಕ್ರೀಡೆ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಮಹಿಳೆಯರು ಪುರುಷರಿಗೆ ಸವಾಲೊಡ್ಡಿ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ ಎಂದರು.

    ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು, ಕೌಟುಂಬಿಕವಾಗಿ ಪುರುಷ ಸದೃಢನಾಗಿದ್ದಾರೆ. ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸ್ತ್ರೀಯರಿಂದ ಪುರುಷನ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಾಮಾಜಿಕವಾಗಿ ಶಕ್ತಿ ತುಂಬಿಸುವ ಕೆಲಸವನ್ನು ಮಹಿಳೆ ಮಾಡುತ್ತಿದ್ದಾಳೆ. ಪ್ರಸ್ತುತ ಅಧುನಿಕತೆಯ ನಡುವೆ ಕೆಲಸ ಮಾಡಿ ಮನೆಯಲ್ಲಿ ದುಡಿಯುತ್ತ ಸಂಸಾರದ ಕಣ್ಣಾಗಿದ್ದಾಳೆ. ಆದರೆ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಸ್ತ್ರೀಶಕ್ತಿಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಬೇಸರಿಸಿದರು.

    ಪುರಸಭಾ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್‌ಕುಮಾರ್, ಸದಸ್ಯರಾದ ಬನಶಂಕರಿ ರಘು, ರಾಧಾ, ಮಂಜುನಾಥ್, ಲಕ್ಷ್ಮಮ್ಮ, ಸುಜಾತಾ, ಪರ್ಹನರಿಜ್, ಪರಿಸರ ಇಂಜಿನಿಯರ್ ಕಾವ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಡಾ.ರಾಜಶೇಖರ್, ಕೋಮಲಾ, ನ್ಯಾಯಾಂಗ ಇಲಾಖೆಯ ಸತೀಶ್, ಸಮುದಾಯ ಸಂಘಟನಾ ಅಧಿಕಾರಿ ಶಾರದಮ್ಮ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts