More

    37 ಸಾರಿಗೆ, 12 ಮಿನಿ ಬಸ್, ಜೀಪ್ ಬಳಕೆ


    ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆ ಶಾಂತಿಯುತವಾಗಿ ನೆರವೇರಬೇಕೆಂಬ ನಿಟ್ಟಿನಲ್ಲಿ ತಾಲೂಕಿನಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ಗುರುವಾರ ವಿದ್ಯುನ್ಮಾನ ಮತಯಂತ್ರಗಳನ್ನು ವಿತರಿಸಲಾಯಿತು.

    ಪಟ್ಟಣದ ನವೋದಯ ಶಾಲೆ ಆವರಣದಲ್ಲಿ ವಿದ್ಯುನ್ಮಾನ ಮತಯಂತ್ರ, ಮತದಾನಕ್ಕೆ ಅಗತ್ಯವಾಗಿರುವ ಸಾಮಗ್ರಿಗಳನ್ನು ಸಿಬ್ಬಂದಿಗೆ ವಿತರಿಸಲಾಯಿತು. ಆಯಾ ಮತಗಟ್ಟೆಗಳಿಗೆ ನಿಯೋಜಿತರಾಗಿರುವ ಚುನಾವಣೆ ಮತ್ತು ರಕ್ಷಣಾ ಸಿಬ್ಬಂದಿ ವಸ್ತುಗಳನ್ನು ಪಡೆದುಕೊಳ್ಳಲು ಬೆಳಗ್ಗೆಯಿಂದಲೇ ನವೋದಯ ಶಾಲೆಗೆ ಆಗಮಿಸಿದ್ದರು.

    ಚುನಾವಣಾ ಕಾರ್ಯಕ್ಕೆ 1578 ಸಿಬ್ಬಂದಿ ನಿಯೋಜಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ ಸೇರಿದಂತೆ 6 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇಲ್ಲಿ ಸೂಕ್ಷ್ಮ ಮತಗಟ್ಟೆ ಇಲ್ಲ. ಬದಲಾಗಿ 111 ಕ್ರಿಟಿಕಲ್ ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳಿಗೂ ಹೆಡ್‌ಕಾನ್‌ಸ್ಟೆಬಲ್ ಹಾಗೂ 16 ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ.

    ಪ್ರತಿ ಮತಗಟ್ಟೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿ ಪರವಾಗಿ ಒಬ್ಬ ಏಜೆಂಟ್ ಇರಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸಲು 37 ಸಾರಿಗೆ ಬಸ್, 12 ಜೀಪ್ ಹಾಗೂ 12 ಮಿನಿ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

    ಚುನಾವಣಾ ಪ್ರಕ್ರಿಯೆ ಕುರಿತು ಮಾತನಾಡಿದ ತಹಸೀಲ್ದಾರ್ ಬಿ.ಎಂ.ಗೋವಿಂದರಾಜು, ಶ್ರವಣಬೆಳಗೊಳ ಕ್ಷೇತ್ರದ 263 ಮತ ಕೇಂದ್ರಗಳಲ್ಲಿ 152 ಮತಕೇಂದ್ರಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಹೀಗಾಗಿ ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಒಟ್ಟು 20 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ 2 ಪಿಂಕ್, 1 ಅಂಗವಿಕಲರಿಗಾಗಿ, 1 ಹೆರಿಟೇಜ್, 1ಎಥಿನಿಕ್, 2 ಯೂತ್, 5 ಪ್ರಧಾನಿಶಿ, 8 ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಕಣದಲ್ಲಿ 15 ಅಭ್ಯರ್ಥಿಗಳಿದ್ದು, ಶಾಂತಿಯುತ ಮತದಾನಕ್ಕಾಗಿ ತಾಲೂಕು ಚುನಾವಣೆ ವಿಭಾಗ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

    ಗುಜರಾತ್‌ನಿಂದ ಬಂದಿರುವ 40 ಜನ ಪೊಲೀಸರು, 1 ಕೆಎಸ್‌ಆರ್ ಪಿ ತುಕಡಿ, ಹೋಂಗಾರ್ಡ್‌ಗಳು, ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. 152 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಕಲ್ಪಿಸಲಾಗಿದ್ದು, ಮತಗಟ್ಟೆಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts