More

    ನೈಸರ್ಗಿಕ ಸಂಪನ್ಮೂಲ ರಕ್ಷಿಸದಿದ್ದರೆ ಜೀವಸಂಕುಲಕ್ಕೆ ಆಪತ್ತು

    ಚನ್ನರಾಯಪಟ್ಟಣ: ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯಾಗದಿದ್ದರೆ ಜೀವಸಂಕುಲಕ್ಕೆ ಆಪತ್ತು ಎದುರಾಗಲಿದೆ ಇಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವಾನಂದ್ ಕಳವಳ ವ್ಯಕ್ತಪಡಿಸಿದರು.

    ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಾನೂನು ಸೇವೆಗಳ ಸಮಿತಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಭೂಮಿ ಉಳಿಸಿ ಆಂದೋಲನ ಸಮಿತಿ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಸಸಿಗಳಿಗೆ ನೀರುಣಿಸಿ ಮಾತನಾಡಿದರು.

    ಮನುಷ್ಯ ತನ್ನ ಸುಖದ ಜೀವನಕ್ಕಾಗಿ ಭೂಮಿಯ ಒಡಲನ್ನು ಬಗೆದು ತಾನು ಶ್ರೀಮಂತಿಕೆಯನ್ನು ಕಾಣುತ್ತಿದ್ದಾನೆ. ಇದರಿಂದ ಸಂತುಲಿತ ಪರಿಸರವೂ ಕೂಡ ಹಾಳಾಗುತ್ತಿದೆ. ನೀರು, ವಾಯು ಮಾಲಿನ್ಯವಾಗುತ್ತಿವೆ. ಪ್ರಾಣಿಗಳು ಅಳಿವಿನಂಚಿಗೆ ತಲುಪಿವೆ. ಭೂಮಿಯ ದುರ್ಬಳಕೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಯುವ ಪೀಳಿಗೆ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

    . ಭೂಮಿ ತಾಯಿಯನ್ನು ರಕ್ಷಿಸಿದರೆ ನಿಮ್ಮನ್ನು ನೀವು ರಕ್ಷಿಸಿಕೊಂಡಂತೆ. ಗಿಡಮರಗಳ ನಾಶದಿಂದಾಗಿ ಮರಳುಗಾಡಾಗುವ ಭೀತಿ ಒಂದೆಡೆಯಾದರೆ ನಿಗದಿತ ಪ್ರಮಾಣದಲ್ಲಿ ಮಳೆಯಾಗದೇ ಅಂತರ್ಜಲ ಬತ್ತಿ ಹೋಗಿ ಕುಡಿಯಲು ನೀರು ಸಿಗದಂತಹ ದುಸ್ಥಿತಿ ನಮ್ಮ ಕಣ್ಣೆದುರಿಗೆ ಕಾಣುತ್ತಿದೆ. ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿ ಗಿಡನೆಟ್ಟು ಪರಿಸರ ರಕ್ಷಣೆ ಮಾಡಬೇಕು ಎಂದರು.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಚ.ನಾ. ಅಶೋಕ್ ಮಾತನಾಡಿ, ನಗರೀಕರಣದಿಂದಾಗಿ ನಮ್ಮ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆಯ ಜನರ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ ಪ್ರತಿಯೊಬ್ಬರು ಗಿಡಮರ ಬೆಳೆಸಲು ಕಾಳಜಿ ವಹಿಸಬೇಕು. ಮುಂದಿನ ಪೀಳಿಗೆ ಆರೋಗ್ಯವಂತರಾಗಿ ಬಾಳಬೇಕಾದರೆ ಪರಿಸರ ಸಂರಕ್ಷಣೆ ಅಗತ್ಯ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಿಸೋಣ ಎಂದು ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ. ಮಹೇಶ್ ಮಾತನಾಡಿ, ಪ್ಲಾಸ್ಟಿಕ್ ವಿಪರೀತ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಇದರಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಹೊಸ ಹೊಸ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇವುಗಳಿಂದ ಮುಂದಿನ ಪೀಳಿಗೆಯನ್ನು ರಕ್ಷಿಸುವ ದೃಷ್ಟಿಯಿಂದ ನಾವೆಲ್ಲರೂ ಪರಿಸರ ಕಾಪಾಡಬೇಕು ಎಂದರು.
    ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಎ.ಎಲ್. ನಾಗೇಶ್, ಪದಾಧಿಕಾರಿಗಳಾದ ಮಹದೇವ್, ಲಕ್ಷ್ಮೀನಾರಾಯಣ್ ಗುಪ್ತ, ಎ.ಎಂ ಜಯರಾಮ್, ಮನೋಹರ್, ಲಯನ್ಸ್ ನಾಗರಾಜು, ವಕೀಲ ಗಿರೀಶ್ ಮಂಜುನಾಥ್ ಇತರರಿದ್ದರು.

    ಫೋಟೋ ಶೀರ್ಷಿಕೆ 22 ಸಿಆರ್‌ಪಿ-1ಎ.: ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ದೇವಾನಂದ್ ಗಿಡ ನೆಟ್ಟು ನೀರುಣಿಸಿದರು. ಚ.ನಾ. ಅಶೋಕ್, ಎ.ಎಲ್.ನಾಗೇಶ್, ಎ.ಎಂ. ಜಯರಾಂ, ಮನೋಹರ್, ಲಯನ್ಸ್ ನಾಗರಾಜು, ಮಂಜುನಾಥ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts