

ಉಡುಪಿ: ದೇವರ ಹಾಗೂ ದೇವಸ್ಥಾನಗಳ ವಿಚಾರವಾಗಿ ಜನರು ನ್ಯಾಯಾಲಯದ ಮೆಟ್ಟಿಲೇರಿದ ಪ್ರಸಂಗಗಳೇನೂ ಹೊಸದಲ್ಲ. ಆದರೆ ಇಲ್ಲೊಬ್ಬರು ಮಹಿಳೆ ಹಬ್ಬವನ್ನು ಆಚರಿಸುವ ಸಲುವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾತ್ರವಲ್ಲ, ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದ ಎಸ್ತಲಾ ಲೂಯಿಸ್ ಹೀಗೆ ಕೋರ್ಟ್ ಮೆಟ್ಟಿಲೇರಿದ ಮಹಿಳೆ. ಇವರು ತಮ್ಮ ಮನೆಯಲ್ಲಿ ಕ್ರಿಸ್ಮಸ್ ಆಚರಿಸಲು ಅನುಮತಿ ಕೋರಿ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಏಕೆಂದರೆ, ಪ್ರಾರ್ಥನೆ ಹೆಸರಲ್ಲಿ ಮತಾಂತರ ನಡೆಯುವ ಸಾಧ್ಯತೆ ಇರುತ್ತದೆ ಎಂದು ಸರ್ಕಾರಿ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು.
ಮಹಿಳೆಯ ಕೋರಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಕ್ರಿಸ್ಮಸ್ ಆಚರಿಸಲು ಷರತ್ತುಬದ್ಧ ಅನುಮತಿ ನೀಡಿದೆ. ಅಲ್ಲದೆ ಶಬ್ದಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಬಾರದು, ಯಾವುದೇ ಅಕ್ರಮ ಚಟುವಟಿಕೆಗಳನ್ನು ನಡೆಸಬಾರದು ಎಂಬ ಷರತ್ತುಗಳೊಂದಿಗೆ ನ್ಯಾ. ಕೃಷ್ಣ ದೀಕ್ಷಿತ್ ಆದೇಶ ನೀಡಿದ್ದಾರೆ.