More

    ಮೇ 5ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ; ಹೋಟೆಲ್, ಲಾಡ್ಜ್ ತಪಾಸಣೆ ಮಾಡಿ; ನೀತಿಸಂಹಿತೆ ಪರಿಣಾಮಕಾರಿ ಅನುಷ್ಠಾನಗೊಳಿಸುವಂತೆ ಡಿಸಿ ಆದೇಶ

    ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಮತದಾನ ಮೇ 7ರಂದು ನಡೆಲಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಮುಕ್ತಾಯದ ಹಿಂದಿನ 48 ಗಂಟೆಗಳ ಅವಧಿ- ನಿಶ್ಯಬ್ಧ ಅವಧಿ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಮೇ 5ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಅವಧಿಯಲ್ಲಿ ಅಗತ್ಯ ನಿಗಾ ವಹಿಸಬೇಕು ಎಂದು ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಆದೇಶಿಸಿದರು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಲೋಕಸಭಾ ಚುನಾವಣೆಗೆ ಮೇ 7ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳ ಕುರಿತಾಗಿ ವಿಧಾನಸಭಾ ಕ್ಷೇತ್ರವಾರು ನೇಮಕಗೊಂಡ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಚುನಾವಣೆಯ ಬಹಿರಂಗ ಪ್ರಚಾರ ಮೇ 5ರಂದು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಈ ಅವಧಿಯಲ್ಲಿ ಸಾರ್ವಜನಿಕ ರ‌್ಯಾಲಿಗಳು, ಸಾರ್ವಜನಿಕ ಸಭೆಗಳು, ಗಲ್ಲಿ ಸಭೆಗಳನ್ನು, ಧ್ವನಿವರ್ದಕ ಬಳಕೆ, ಬೈಕ್ ರ‌್ಯಾಲಿಗಳನ್ನು, ಅಥವಾ ಪ್ರಚಾರಕ್ಕಾಗಿ ಗುಂಪು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ಮತದಾರರಲ್ಲವದರು ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ. ಈ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನ, ಅತಿಥಿಗೃಹಗಳು, ಹೋಟೆಲ್, ಲಾಡ್ಜ್‌ಗಳ ನಿರಂತರ ತಪಾಸಣೆ ನಡೆಸಬೇಕು. ಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
    ಮತದಾನ ಮುಕ್ತಾಯದ 48 ಗಂಟೆ ಪೂರ್ವದ ಅವಧಿಯಲ್ಲಿ ಮತದಾನ ಕುರಿತು ಹಾಗೂ ಒಪಿನಿಯನ್ ಪೋಲ್ ಮತ್ತು ಎಕ್ಸಿಟ್ ಪೋಲ್‌ಅನ್ನು ನಿರ್ಬಂಧಿಸಲಾಗಿದೆ. ಮತದಾನ ಸಮೀಕ್ಷೆಯನ್ನು ಪ್ರಚುರಪಡಿಸುವಂತಿಲ್ಲ. ಅಭಿಪ್ರಾಯ ಸಮೀಕ್ಷೆಯನ್ನು ನಿರ್ಬಂಧಿಸಲಾಗಿದೆ. ಮತದಾನ ದಿನ ಮತ ಕೋರಿ ಯಾರೇ ಆಗಲಿ ಸಗಟು ಸಂದೇಶಗಳನ್ನು ಕಳುಹಿಸುವಂತಿಲ್ಲ. ಈ ಬಗ್ಗೆ ನಿಗಾವಹಿಸಬೇಕು ಎಂದು ತಿಳಿಸಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಣಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿಲ್ಲೆಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
    ಅಭ್ಯರ್ಥಿ, ಮುಖಂಡರ ಮೇಲೆ ನಿಗಾ
    48 ಗಂಟೆಗಳ ಅವಧಿಯಲ್ಲಿ ಅಭ್ಯರ್ಥಿ/ರಾಜಕೀಯ ಪಕ್ಷಗಳ ಚಲನವಲನದ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಹೋಬಳಿಗಳಲ್ಲಿ 3 ಪಾಳಿಯಲ್ಲಿ ಫ್ಲಾಯಿಂಗ್ ಸ್ಕ್ವಾಡ್ ತಂಡಗಳು, ವಿಡಿಯೋ ವಿಕ್ಷಣಾ ತಂಡಗಳು, ಚೆಕ್ ಪೋಸ್ಟ್‌ಗಳಲ್ಲಿ (ಎಸ್.ಎಸ್.ಟಿ. ಸಿಬ್ಬಂದಿ) ಸೆಕ್ಟರ್ ಅಧಿಕಾರಿಗಳು ಮತ್ತು ಪೋಲೀಸ್ ಸೆಕ್ಟರ್ ಅಧಿಕಾರಿಗಳ ತಂಡಗಳು ಸೇರಿ ನಿರಂತರ ಕಣ್ಗಾವಲಿನ ವೀಕ್ಷಣೆ ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ಸೂಚನೆ ನೀಡಿದರು.
    ಮತದಾನ ಬಹಿಷ್ಕಾರ
    ಮತದಾನ ಬಹಿಷ್ಕಾರ ಘಟನೆಗಳನ್ನು ಮುಂಜಾಗ್ರತೆಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಅಂತಹ ಸನ್ನಿವೇಶದಲ್ಲಿ ಖುದ್ದಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಯಾವುದೇ ಅಹಿತಕರ ಸನ್ನಿವೇಶಗಳು ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ, ಸುರಕ್ಷತೆ ಹಾಗೂ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೊಲೀಸ್, ಸೆಕ್ಟರ್ ಮೊಬೈಲ್ ತಂಡ ಸತತ ನಿಗಾವಹಿಸಿ ಪದೇ ಪದೇ ಭೇಟಿ ಮಾಡಬೇಕು ಎಂದು ಡಿಸಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts