More

    ತಲೆನೋವೆಂದು ಆಸ್ಪತ್ರೆಗೆ ಹೋದ ಉಡುಪಿ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯ ವಿರುದ್ಧ ತೀವ್ರ ಆಕ್ರೋಶ

    ಉಡುಪಿ: ತಲೆ ನೋವು ಎಂದು ನಗರದ ಖಾಸಗಿ ಆಸ್ಪತ್ರೆಗೆ ಹೋದ ಮಹಿಳೆ ಔಷಧ ಪಡೆದು ಒಂದು ಗಂಟೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

    ಮೃತಪಟ್ಟ ವಿವಾಹಿತ ಮಹಿಳೆ, ಇಂದಿರನಗರ, ಕುಕ್ಕಿಕಟ್ಟೆ ನಿವಾಸಿ ರಕ್ಷಾ (26). ಇವರು ಬಿಜೆಪಿ ನಗರ ಯುವ ಮೋರ್ಚ ಉಪಾಧ್ಯಕ್ಷ ಶಿವ ಪ್ರಸಾದ್ ಅವರ ಪತ್ನಿ. ಕಳೆದ ಎರಡು ದಿನಗಳ ಹಿಂದೆ ಮೈಗ್ರೈ ನ್ ತಲೆನೋವಿನಿಂದ ಬಳಲುತಿದ್ದರು. ಈ ಹಿಂದೆ ಕ್ಲೀನಿಕ್ ಒಂದರಲ್ಲಿ ಪರೀಕ್ಷೆ ಮಾಡಿಸಿದ್ದರು. ಅದಾದ ಬಳಿಕ ತಲೆನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಇಂಜೆಕ್ಷನ್ ಮತ್ತು ಇನ್ನಿತರೆ ಮಾತ್ರೆ ನೀಡಿ ಚೇತರಿಸಿಕೊಂಡ ಬಳಿಕ ಮನೆಗೆ ಕಳಿಸಿದ್ದರು.

    ಮನೆಗೆ ಆಗಮಿಸಿ ಮಲಗಿದ್ದ ಮಹಿಳೆ ಬೆಳಗ್ಗೆ 8:45 ಸಮಯದಲ್ಲಿ ಯಾವ ಸ್ಪಂದನೆಯೂ ಇಲ್ಲದೆ ಬಾಯಲ್ಲಿ ನೊರೆ ಬರುವ ಸ್ಥಿತಿಯಲ್ಲಿ ಮಲಗಿದ್ದರು. ಕೂಡಲೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಇನ್ನೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಇನ್ನೊಂದು ಖಾಸಗಿ ಆಸ್ಪತ್ರೆಗೆ ಮಹಿಳೆಯನ್ನು ಕರೆ ತಂದಾಗ ವೈದ್ಯರು ಪರೀಕ್ಷಿಸಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲಿಂದ ಮೃತದೇಹವನ್ನು ಅಜ್ಜರಕಾಡು ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದೆ.

    ಪತಿ ಶಿವಪ್ರಸಾದ್ ಮತ್ತು ಊರಿನ ಸಾರ್ವಜನಿಕರು, ನಗರದ ಮಿಶನ್ ಆಸ್ಪತ್ರೆ ನಿರ್ಲ್ಯಕ್ಷದಿಂದಾಗಿ ರಕ್ಷಾ ಸಾವನ್ನಪ್ಪಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೀಗ ನಿರ್ಲ್ಯಕ್ಷ ಮುಚ್ಚಿ ಹಾಕಲು ಆಸ್ಪತ್ರೆಗಳೆಲ್ಲ ಸೇರಿಕೊಂಡು ಲಾಬಿ ಮಾಡಿ ಕೋವಿಡ್ ಪಾಸಿಟಿವ್ ವರದಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶವಗಾರದ ಮುಂದೆ ಪ್ರತಿಭಟನೆ
    ವೈದ್ಯರ ನಿರ್ಲಕ್ಷದಿಂದ ಮಹಿಳೆ ಮೃತಪಟ್ಟಿರುವುದಾಗಿ ಜಿಲ್ಲಾಸ್ಪತ್ರೆಯ ಶವಗಾರದ ಮುಂದೆ ಶನಿವಾರ ಕುಟುಂಬಸ್ಥರು, ಸ್ಥಳೀಯರು ಪ್ರತಿಭಟನೆ ನಡೆಸಿದರು‌. ಕರೊನಾ ಪಾಸಿಟಿವ್ ವರದಿ ಬಂದಿದ್ದರೂ ಮೃತ ದೇಹವನ್ನು ಒಪ್ಪಿಸುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

    ಮೃತರು ಪತಿ ಹಾಗೂ ಗಂಡು ಮಕ್ಕಳಾದ ಲಿಹಾನ್(3) ಹಾಗೂ ಲಿಶಾನ್ (2) ಅಗಲಿದ್ದಾರೆ. ‘ಖಾಸಗಿ ಆಸ್ಪತ್ರೆಯ ವೈದ್ಯರು ನನ್ನ ಪತ್ನಿಗೆ ನೀಡಿದ ಇಂಜೆಕ್ಷನ್‌ನಿಂದ ಮೃತ ಪಟ್ಟಿದ್ದಾಳೆ. ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ. ಮೃತಪಟ್ಟ ಬಳಿಕ ನಡೆಸಿದ ರ್ಯಾಪಿಡ್ ಟೆಸ್ಟ್‌ನಲ್ಲಿ ಕರೊನಾ ನೆಗೆಟಿವ್ ವರದಿ ಬಂದಿತ್ತು. ನಂತರ ಪ್ರಯೋಗಾಲಯದಲ್ಲಿ ನಡೆಸಿದ ವರದಿಯಲ್ಲಿ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಸ್ಪತ್ರೆ ವೈದ್ಯರು ಹೇಳಿದ್ದಾರೆ. ಇದರಲ್ಲಿ ವೈದ್ಯರ ಷಡ್ಯಂತರ ಅಡಗಿದೆ. ಝೆರಾಕ್ಸ್ ಪ್ರತಿಯನ್ನು ವರದಿ ಎಂದು ಹೇಳಿ ನೀಡಿದ್ದಾರೆ. ಪ್ರತಿಯಲ್ಲಿ ಯಾವುದೇ ವೈದ್ಯರ ಸಹಿ ಇಲ್ಲ’ ಎಂದು ಶಿವಪ್ರಸಾದ್ ದೂರಿದ್ದಾರೆ.

    ಮೃತದೇಹ ನೀಡಲು ಆಗ್ರಹ
    ಶನಿವಾರ ಬೆಳಗ್ಗೆ ಶವಗಾರದ ಮುಂದೆ ಜಮಾಯಿಸಿದ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕರೊನಾ ವರದಿ ನೀಡಿರುವ ಜಿಲ್ಲಾ ಸರ್ಜನ್ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡು ವಂತೆ ಆಗ್ರಹಿಸಿದರು. ‘ಈ ವರದಿಯನ್ನು ನಾವು ಒಪ್ಪುದಿಲ್ಲ. ಇದರಲ್ಲಿ ವೈದ್ಯರ ಲಾಬಿ ಅಡಗಿದೆ. ನಮಗೆ ಮೃತದೇಹವನ್ನು ಬಿಟ್ಟುಕೊಡಬೇಕು’ ಎಂದು ಪ್ರತಿ ಭಟನಾನಿರತರು ಒತ್ತಾಯಿಸಿದರು. ‘ಈ ರೀತಿ ವರದಿ ನೀಡುವುದರ ಹಿಂದೆ ದೊಡ್ಡ ಆಸ್ಪತ್ರೆಗಳ ಲಾಬಿ ಇರ ಬಹುದು. ಝೆರಾಕ್ಸ್ ಪ್ರತಿಯಲ್ಲಿ ವರದಿ ನೀಡಿರುವುದು ಸರಿಯಲ್ಲ. ಇದು ಜನರ ಬಾಯಿ ಮುಚ್ಚಿಸುವ ಷಡ್ಯಂತ್ರ ಆಗಿದೆ ಎಂದು ನಗರಸಭಾ ಸದಸ್ಯ ರಮೇಶ್ ಕಾಂಚನ್ ಆರೋಪಿಸಿದ್ದಾರೆ.

    ಪ್ರತಿಭಟನೆ ಮಧ್ಯೆ ಜಿಲ್ಲಾಸ್ಪತ್ರೆಯವರು ವೈದ್ಯರ ಸಹಿ ಇರುವ ವರದಿಯನ್ನು ಮನೆಯವರಿಗೆ ಒಪ್ಪಿಸಿದರು. ಇದರಿಂದ ಸಂಶಯ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲಾಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಉಡುಪಿ ನಗರ ಠಾಣಾಧಿಕಾರಿ ಸಕ್ತಿವೇಲು ಆಗಮಿಸಿ ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದರು. ಪ್ರತಿಭಟನಕಾರರು ತಮ್ಮ ಪಟ್ಟು ಮುಂದುವರೆಸಿದರು. ಪೊಲೀಸರು ಹಾಗೂ ಪ್ರತಿಭಟಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಕೆಎಸ್‌ಆರ್‌ಪಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ.

    ಯಾರನ್ನು ನಂಬಬೇಕು ?
    ‘ಯಾರ ಕೊಟ್ಟ ವರದಿಯನ್ನು ನಾವು ನಂಬಬೇಕು. ಮೊದಲು ಬಂದ ವರದಿಯೇ ಅಥವಾ ಈಗ ನೀಡಿದ ವರದಿಯೇ. ಕರೊನಾ ಇರುವುದು ಸತ್ಯವೇ. ನಮಗೆ ಕರೊನಾ ಬಂದರೂ ಪರವಾಗಿಲ್ಲ, ನಾನು ಮೃತದೇಹವನ್ನು ತೆಗೆದುಕೊಂಡು ಹೋಗುತ್ತೇವೆ. 12ವರ್ಷ ಪ್ರೀತಿಸಿ ಮದುವೆಯಾದ ಪತ್ನಿಯೇ ಮೃತಪಟ್ಟಿದ್ದಾಳೆ. ಇನ್ನು ನಾನು ಸಾಯುವುದಕ್ಕೆ ಯಾವುದೇ ಹೆದರಿಕೆ ಇಲ್ಲ. ಇವರು ಕರೊನಾ ದಂಧೆ ಮಾಡುತ್ತಿದ್ದಾರೆ ಎಂದು ಪತಿ ಶಿವಪ್ರಸಾದ್ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts