More

    ಹೈನುಗಾರಿಕೆಯಲ್ಲಿ ಗೃಹಿಣಿಯ ‘ಸಾಧನೆ’

    ಸಿದ್ದಾಪುರ: ಕೃಷಿಗೆ ಪೂರಕವಾದ ಹಾಗೂ ಸಾಂಪ್ರದಾಯಿಕವಾದ ಹೈನುಗಾರಿಕೆ ಇಂದು ದೂರವಾಗುತ್ತಿದ್ದರೂ ಹೈನುಗಾರಿಕೆಯಲ್ಲಿಯೇ ಸಾಧನೆ ಮಾಡಬೇಕು ಎನ್ನುವ ಶುದ್ಧ ಮನಸಿನಿಂದ ಸಾಧನೆ ಮೇಟ್ಟಿಲೇರುತ್ತಿದ್ದಾರೆ ತಾಲೂಕಿನ ಕಲಕೈ ಗ್ರಾಮದ ಸಾಧನಾ ಆರ್. ಭಟ್ಟ. ಕಳೆದ ಆರೇಳು ವರ್ಷದಿಂದ ಮನೆಯ ಕೆಲಸದೊಂದಿಗೆ ಹೈನುಗಾರಿಕೆಯನ್ನು ಮಾಡುತ್ತ ಇಂದು ಐದು ಆಕಳು ಕಟ್ಟಿ ಸ್ವತಃ ಅವರೇ ನಿತ್ಯ ಅವುಗಳ ಕೆಲಸವನ್ನು ಮಾಡುತ್ತ ಹಾಲು ಹಿಂಡುತ್ತ ಹೈನುಗಾರಿಕೆ ಮಾಡುವುದರಿಂದ ಹಾನಿ ಇಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ.

    ನಿತ್ಯ ಸುಮಾರು ಮೂವತ್ತು ಲೀಟರ್ ಹಾಲನ್ನು ಸಂಘಗಳಿಗೆ ನೀಡುತ್ತಿದ್ದಾರೆ. ದನದ ಕೊಟ್ಟಿಗೆಯನ್ನು ಸ್ವತಃ ಅವರೇ ಸ್ವಚ್ಛಮಾಡುವುಲ್ಲದೆ ಅವುಗಳ ಆರೋಗ್ಯ ಹಾಗೂ ಚಲನವಲನದ ಕುರಿತು ಹೆಚ್ಚು ಗಮನ ನೀಡುತ್ತ ಅವುಗಳ ಆರೈಕೆ ಮಾಡುತ್ತಿರುವುದರಿಂದ ಸಾಧನಾ ಭಟ್ಟ ಅವರೂ ಯಾವಾಗಲೂ ಲವಲವಿಕೆಯಿಂದಿರುತ್ತಾರೆ.

    ಹೈನುಗಾರಿಕೆ ಮಾಡುವುದಕ್ಕೆ ಅವರ ಪತಿ, ವಕೀಲ ರಾಜೇಶ ಭಟ್ಟ ಅವರ ಸಂಪೂರ್ಣ ಪ್ರೋತ್ಸಾಹ ಹಾಗೂ ಸಹಕಾರ ಇದೆ. ಮತ್ತಷ್ಟು ಆಕಳುಗಳನ್ನು ಸಾಕಿ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ನಡೆಸುವ ಉದ್ದೇಶ ಸಾಧನಾ ಭಟ್ಟ ಅವರದ್ದು. ಹೈನುಗಾರಿಕೆ ಮಾಡುವುದರಿಂದ ನಷ್ಟ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ನನಗೆ ನಷ್ಟ ಆಗಿಲ್ಲ. ಹೈನುಗಾರಿಕೆ ಎಂದರೆ ಎಲ್ಲರೂ ಹಾಲನ್ನು ಮಾತ್ರ ಲೆಕ್ಕ ಹಾಕುತ್ತಾರೆ. ಇನ್ನುಳಿದ ಉತ್ಪನ್ನವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದು ಅವರ ಆಶಯವಾಗಿದೆ.

    ವಿಶೇಷ ಎಂದರೆ ಯಾವುದಾದರೂ ಮನೆಯಲ್ಲಿ ಆಕಳು ಕರು ಹಾಕಲಾಗದೆ ತೊಂದರೆಗೊಳಗಾಗಿದ್ದರೆ ಅಂಥವರ ಮನೆಗೆ ಹೋಗಿ ಕರುವನ್ನು ಹೊರತೆಗೆದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆಕಳ ಹಾಗೂ ಕರುವಿನ ಜೀವ ಉಳಿಸುತ್ತಾರೆ. ಇಲ್ಲಿಯವರೆಗೆ ಸುಮಾರು 20ಕ್ಕೂ ಹೆಚ್ಚು ಕರುಗಳನ್ನು ಹೊರತೆಗೆದು ಗೋಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಸುಮಾರು ಒಂದೂವರೆ ಏಕರೆಯಲ್ಲಿ ಜಾನುವಾರುಗಳಿಗೆ ಬೇಕಾಗುವಷ್ಟು (ವಿವಿಧ ತಳಿಯ) ಹಸಿಮೇವನ್ನು ಬೆಳೆದಿದ್ದು ಇದರೊಂದಿಗೆ ಪಶುಆಹಾರ ಹಾಗೂ ರಸಮೇವನ್ನು ಆಕಳುಗಳಿಗೆ ಆಹಾರವಾಗಿ ನೀಡುತ್ತಿದ್ದು ಇದರಿಂದ ಹಾಲಿನ ಗುಣಮಟ್ಟ ಹಾಗೂ ಹಾಲಿನ ಉತ್ಪಾದನೆಯೂ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಸಾಧನಾ ಭಟ್ಟ ಹೇಳುತ್ತಾರೆ.

    ಸಿದ್ದಾಪುರ ತಾಲೂಕಿನ ಬೀರಲಮಕ್ಕಿಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಪ್ರಾರಂಭಿಸುವಲ್ಲಿ ಸಾಧನಾ ಅವರ ಪಾತ್ರ ಪ್ರಮುಖ. ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತ ಸಂಘದ ಅಭಿವೃದ್ಧಿಗೆ ಮುಂದಾಗುತ್ತ ಮಹಿಳೆಯರಿಗೆ ಸ್ವ ಉದ್ಯೋಗದ ಕುರಿತು ಮಾಹಿತಿ ನೀಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts