More

    ವರ್ಷದೊಳಗೆ ಕಾಮಗಾರಿ ಮುಗಿಸಿ

    ಬೆಳಗಾವಿ: ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಲಾಮಂದಿರ ನಿರ್ಮಾಣ ಸೇರಿದಂತೆ ಪ್ರಗತಿ ಹಂತದಲ್ಲಿರುವ ಎಲ್ಲ ಕಾಮಗಾರಿಗಳನ್ನು ವರ್ಷದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸೂಚಿಸಿದರು.

    ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಪಾಲಿಕೆ ಅನುದಾನದಲ್ಲಿ ಕೈಗೊಂಡಿರುವ ಎಪಿಎಂಸಿ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡ, ನಗರ ಕೇಂದ್ರ ಬಸ್ ನಿಲ್ದಾಣ, ತ್ಯಾಜ್ಯ ನೀರು ಸಂಸ್ಕರಣ ಘಟಕ, ಬಹು ಉಪಯೋಗಿ ಕಟ್ಟಡ (ಕಲಾಮಂದಿರ), ಸರಾಫ್ ಕಾಲನಿ ಉದ್ಯಾನವನ ಹಾಗೂ ಅನೆಕ್ಸ್ ಕಟ್ಟಡ ಕಾಮಗಾರಿಗಳನ್ನು ಅವರು ಪರಿಶೀಲಿಸಿದರು.

    ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಮಹಾನಗರ ಪಾಲಿಕೆ ವಿವಿಧ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಅಲ್ಲದೆ, ಕೆಲ ಕಾಮಗಾರಿಗಳು ಇನ್ನೂ ಆರಂಭದ ಹಂತದಲ್ಲಿವೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದರೂ ಏಕೆ ವಿಳಂಬ ಮಾಡುತ್ತಿದ್ದೀರಿ? ಈ ವರ್ಷದ ಅಂತ್ಯದೊಳಗೆ ಎಲ್ಲ ಕಾಮಗಾರಿಗಳೂ ಪೂರ್ಣಗೊಳ್ಳಬೇಕು. ಜತೆಗೆ ಪ್ರತಿಯೊಂದು ಕಾಮಗಾರಿಯ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ಮಾತನಾಡಿ, ನಗರದ ಟಿಳಕವಾಡಿಯಲ್ಲಿ 2.62 ಎಕರೆ ಪ್ರದೇಶದಲ್ಲಿ 46 ಕೋಟಿ ರೂ. ವೆಚ್ಚದಲ್ಲಿ ಬಹು ಉಪಯೋಗಿ ಕಟ್ಟಡ (ಕಲಾಮಂದಿರ) ಕಾಮಗಾರಿಯನ್ನು 2019ರಲ್ಲಿಯೇ ಕೈಗೊಳ್ಳಲಾಗಿತ್ತು. ಆದರೆ, 2020ರಲ್ಲಿ ಕೋವಿಡ್-19ನಿಂದಾಗಿ ಕಾಮಗಾರಿ ಅರ್ಧದಲ್ಲಿ ಮೊಟಕುಗೊಂಡಿತ್ತು. ಇದೀಗ 6 ಕಾಮಗಾರಿ ಆರಂಭಿಸಲಾಗಿದ್ದು, 2022ರ ಜನವರಿ ಒಳಗಾಗಿ ಕಲಾಮಂದಿರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಈಗಾಗಲೇ ನಾಲ್ಕು ಮಹಡಿಯ ಕಲಾಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಶೇ. 20ರಷ್ಟು ಪೂರ್ಣಗೊಂಡಿದ್ದು, 14 ಕೋಟಿ ರೂ. ವೆಚ್ಚ ಮಾಡಲಾಗಿದೆ. 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ. ದಂಡು ಮಂಡಳಿಯ ತಕರಾರಿನಿಂದಾಗಿ ನಗರ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿದೆ. ಇದೀಗ ಸಮಸ್ಯೆ ಬಗೆಹರಿದಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕುರೇರ ಅವರು ತಿಳಿಸಿದರು.

    ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಪಾಲಿಕೆ ಆಯುಕ್ತ ಕೆೆ.ಎಚ್. ಜಗದೀಶ, ಬುಡಾ ಆಯುಕ್ತ ಪ್ರೀತಂ ನಸ್ಲಾಪುರ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

    ಶೀಘ್ರದಲ್ಲಿ 200 ಮಳಿಗೆಗಳ ಹರಾಜು: ಮಹಾನಗರ ಪಾಲಿಕೆ ಆದಾಯ ವೃದ್ಧಿಸುವ ಉದ್ದೇಶದಿಂದ ನಗರದ ಎಪಿಎಂಸಿ ರಸ್ತೆಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 200 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ 2 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಸಾರ್ವಜನಿಕವಾಗಿ ಹರಾಜು ಮೂಲಕ ಮಳಿಗೆ ಹಂಚಿಕೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ನಗರದ ತುಂಬೆಲ್ಲ ಪಾಲಿಕೆ ಒಡೆತನ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಸಚಿವ ಬೈರತಿ ಬಸವರಾಜು ತಿಳಿಸಿದರು.

    ಪೌರಕಾರ್ಮಿಕರಿಗೆ ಉಚಿತ ಮನೆ

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಿಗೆ ಶಾಶ್ವತ ಮನೆಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಲೇ ಮೊದಲನೇ ಹಂತದಲ್ಲಿ 48 ಮನೆ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ 150 ಮನೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪೌರಕಾರ್ಮಿಕರಿಗೆ ಉಚಿತವಾಗಿ ಈ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಚಿವ ಬೈರತಿ ಬಸವರಾಜು ತಿಳಿಸಿದರು.

    ಬೆಳಗಾವಿ ಮಹಾನಗರ ಪಾಲಿಕೆಗೆ ನರೇಗಾ ಯೋಜನೆಯಡಿ 125 ಕೋಟಿ ರೂ. ಕಾಮಗಾರಿಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಅಲ್ಲದೆ, ಬಜೆಟ್ ಒಳಗಾಗಿ ಮತ್ತೊಮ್ಮೆ ಬೆಳಗಾವಿ ನಗರಕ್ಕೆ ಭೇಟಿ ನೀಡಿ ಕಾಮಗಾರಿ
    ಪರಿಶೀಲನೆ ನಡೆಸುತ್ತೇನೆ.
    | ಬೈರತಿ ಬಸವರಾಜು ನಗರಾಭಿವೃದ್ಧಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts