More

    ಕನ್ನಡಿಗರ ಅಭಿಮಾನದ ಅಲೆಗೆ ಗೆಲುವು; ಕ್ಷಮೆ ಯಾಚಿಸಿದ ಗೂಗಲ್​

    ಕನ್ನಡ ಭಾಷೆಯ ಕುರಿತು ಅವಹೇಳನಕಾರಿ ವಿಷಯ ಪ್ರಕಟಿಸಿದ ರಷ್ಯನ್ ವೆಬ್​ಸೈಟ್ ಮತ್ತು ಅದರ ಲಿಂಕ್ ಅನ್ನು ಪ್ರದರ್ಶಿಸಿದ ಗೂಗಲ್ ವಿರುದ್ಧ ಗುರುವಾರ ಕನ್ನಡಿಗರು ಒಟ್ಟಾಗಿ ತಿರುಗಿಬಿದ್ದರು. ಪರಿಣಾಮ, ಸಂಜೆ ಹೊತ್ತಿಗೆ ವಿವಾದಿತ ಪುಟವನ್ನು ಹಿಂಪಡೆಯಲಾಯಿತು. ಅಲ್ಲದೆ ‘ಕನ್ನಡ’ ಪದ ಟ್ವಿಟರ್​ನಲ್ಲೂ ಟ್ರೆಂಡ್ ಮಾಡಿತು. ಈ ಬೆಳವಣಿಗೆ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.

    ಏನಿದು ಘಟನೆ?

    ರಷ್ಯಾದ ಮಾಸ್ಕೋದಲ್ಲಿ ನೋಂದಣಿಯಾಗಿರುವ www.debtconsolidationsquad.com ಎಂಬ ವೆಬ್​ಸೈಟ್​ನಲ್ಲಿ Which Is The Ugliest Language In India? ಎಂಬ ಶೀರ್ಷಿಕೆಯಲ್ಲಿ ಕೆಲ ವರ್ಷಗಳ ಹಿಂದೆಯೇ ಲೇಖನ ಪ್ರಕಟವಾಗಿದೆ. ಇದರಲ್ಲಿ, ವಿಶ್ವದ ಅತಿ ಕಷ್ಟವಾದ ಭಾಷೆ ಯಾವುದು? ಎಂಬುದಕ್ಕೆ ಮ್ಯಾಂಡರಿನ್, ಅರೇಬಿಕ್, ಜಪಾನೀಸ್, ಹಂಗೇರಿಯನ್ ಮುಂತಾದ ಭಾಷೆಗಳನ್ನು ಹೆಸರಿಸಲಾಗಿದೆ. ಭಾರತದಲ್ಲಿ ಅತ್ಯಂತ ಸುಲಭದ ಭಾಷೆ ಹಿಂದಿ, ಸುಂದರವಾದ ಭಾಷೆ ಉರ್ದು, ಬೋರಿಂಗ್ ಭಾಷೆ ಸ್ಪಾನಿಷ್ ಎಂಬುದು ಸೇರಿ ಅನೇಕ ವಿಚಾರ ತಿಳಿಸಲಾಗಿದೆ. ಭಾರತದಲ್ಲಿ ಕುರೂಪಿಯಾದ ಭಾಷೆ ಯಾವುದು ಎಂಬ ಪ್ರಶ್ನೆಗೆ, ‘ಇದಕ್ಕೆ ಉತ್ತರವು ಕನ್ನಡ. ದಕ್ಷಿಣ ಭಾರತದಲ್ಲಿ ಸುಮಾರು 4 ಕೋಟಿ ಜನರು ಇದನ್ನು ಮಾತನಾಡುತ್ತಾರೆ. ನೀವು ತಪು್ಪ ಊಹೆ ಮಾಡಿದ್ದರೆ ಅದು ನಿಮ್ಮ ತಪು್ಪ ಮಾತ್ರವಲ್ಲ, ಒಂದು ಅಧ್ಯಯನದ ಪ್ರಕಾರ ಅತ್ಯಂತ ಕಡಿಮೆ ಗುರುತಿಸಲ್ಪಡುವ, ಬೇರೆ ಭಾಷೆಗಳೊಂದಿಗೆ ಗೊಂದಲಕ್ಕೊಳ ಗಾಗುವ ಭಾಷೆ ಕನ್ನಡ’ ಎಂದು ತಿಳಿಸಲಾಗಿದೆ. ಆದರೆ ಯಾವ ಅಧ್ಯ ಯನ, ಎಲ್ಲಿ ನಡೆದಿತ್ತು ಎಂಬುದು ಸೇರಿ ಲೇಖನದಲ್ಲಿ ಯಾವುದೇ ಆಧಾರ ನೀಡಿಲ್ಲ.

    ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ: ಕನ್ನಡಕ್ಕೆ ಅವಮಾನ ಎಂದು ತಿಳಿಯುತ್ತಿದ್ದಂತೆಯೇ ಒಮ್ಮೆಲೇ ಲಕ್ಷಾಂತರ ಜನರು ಭೇಟಿ ನೀಡಿದ ಹಿನ್ನೆಲೆಯಲ್ಲಿ ‘429 Too Many Requests’ ಎಂಬ ಸಂದೇಶ ಮಾತ್ರ ಬರತೊಡಗಿತು. ಅಷ್ಟೇ ಸಂಖ್ಯೆಯಲ್ಲಿ ಗೂಗಲ್ ಉತ್ತರದ ಕುರಿತು ‘ಫೀಡ್​ಬ್ಯಾಕ್’ ನೀಡಲಾರಂಭಿಸಲಾಯಿತು. ಅನೇಕರು ವೆಬ್​ಸೈಟ್ ಕುರಿತು ಕಾನೂನಾತ್ಮಕ ವಿರೋಧವನ್ನೂ ದಾಖಲಿಸಿದರು. ಇದೆಲ್ಲದರ ನಂತರ ಸಂಜೆ ವೇಳೆಗೆ ಲೇಖನವನ್ನು ತೆಗೆದುಹಾಕಲಾಗಿದೆ ಎಂಬ ಸಂದೇಶ ಬರತೊಡಗಿದೆ.

    ಕ್ಷಮೆಯಾಚಿಸಿದ ಗೂಗಲ್: ಕನ್ನಡದ ಕುರಿತು ಅಪಾರ್ಥದ ಉತ್ತರ ಲಭಿಸಿದ್ದಕ್ಕೆ ಗೂಗಲ್ ಕ್ಷಮೆಯಾಚಿಸಿದೆ. ಈ ಕುರಿತು ಗುರುವಾರ ರಾತ್ರಿ ತನ್ನ ಟ್ವಿಟರ್ ಖಾತೆ ಮೂಲಕ ಪ್ರತಿಕ್ರಿಯಿಸಿರುವ ಗೂಗಲ್ ಇಂಡಿಯಾ, ‘ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ, ಇಂಟರ್ನೆಟ್​ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ಕ್ಷಿಪ್ರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಅಲ್ಗೋರಿದಂ ಅನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲವಾಗಿರುವುದನ್ನು ಮುಂದುವರಿಸಿದ್ದೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ’ ಎಂದು ಕನ್ನಡ ಹಾಗೂ ಇಂಗ್ಲಿಷ್​ನಲ್ಲಿ ತಿಳಿಸಿದೆ.

    ಕ್ರೆಡಿಟ್ ಕಾರ್ಡ್ ಮಾಹಿತಿ: www.debtconsolidationsquad.com ಎಂಬುದು ವೆಬ್​ಸೈಟ್ ವಿಳಾಸವಾದರೂ, ಅದರ ಶೀರ್ಷಿಕೆಯಲ್ಲಿ ಡಿಸ್ಕವರ್ ಕಾರ್ಡ್- ಲೋನ್ಸ್ ಆಂಡ್ ಕ್ರೆಡಿಟ್ ಕಾರ್ಡ್ಸ್ ಎಂದು ಬರೆಯಲಾಗಿದೆ. ಆದರೆ ಅದರಲ್ಲಿ, ಅಮೆರಿಕದಲ್ಲಿ ರದ್ದಾಗಿರುವ ಹೆಸರುಗಳಾವುವು? ವೈರಸ್ ವಿರುದ್ಧ ಆಂಟಿಬಾಡಿಗಳನ್ನು ಬಳಸಬಹುದೇ?, ನನ್ನ ಕ್ರೆಡಿಟ್ ಕಾರ್ಡನ್ನು ಯಾವುದಕ್ಕೆ ಬಳಸಬಹುದು? ಉದ್ವೇಗಕ್ಕೆ ಮದ್ದು ನೀಡದಿದ್ದರೆ ಏನಾಗುತ್ತದೆ? ಎಂಬಂತಹ ಸಾವಿರಾರು ಸಾಮಾನ್ಯ ಪ್ರಶ್ನೆಗಳ ಲೇಖನವಿದೆ. ಅದರಲ್ಲಿ ಭಾಷೆಗಳ ಕುರಿತದ್ದೂ ಒಂದು ಲೇಖನ. ಇದರಲ್ಲಿರುವ ಬಹುತೇಕ ಲೇಖನಗಳಿಗೆ ಯಾವುದೇ ಆಧಾರವಿಲ್ಲ.

    ಗೂಗಲ್ ನಿಯಂತ್ರಣದಲ್ಲಿಲ್ಲ: ಕೇಂದ್ರ ಸರ್ಕಾರದ ಐಟಿ ಕಾಯ್ದೆಯ ಕುರಿತು ಗುರುವಾರ ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿರುವ ಗೂಗಲ್, ತಾನು ಸಾಮಾಜಿಕ ಜಾಲತಾಣವಲ್ಲ, ಕೇವಲ ಸರ್ಚ್ ಇಂಜಿನ್. ತನಗೆ ಐಟಿ ಕಾಯ್ದೆ ಅನ್ವಯ ಆಗುವುದಿಲ್ಲ ಎಂದು ತಿಳಿಸಿದೆ. ಗೂಗಲ್ ತಾನೇ ಉತ್ತರವನ್ನು ಸೃಷ್ಟಿಸುವುದಿಲ್ಲ. ಬಳಕೆದಾರರು ಕೇಳಿದ ಪ್ರಶ್ನೆಗೆ ಅನುಗುಣವಾಗಿ ಪ್ರಪಂಚದ ಯಾವುದೇ ವೆಬ್​ಸೈಟ್​ನಲ್ಲಿ ಉತ್ತರ ಲಭ್ಯವಿದ್ದರೆ ಅದನ್ನು ಪ್ರಕಟಿಸಿ, ಉತ್ತರದ ಮೂಲವನ್ನೂ ತಿಳಿಸುತ್ತದೆ. ಅಲ್ಲಿಗೆ ಸಂಪೂರ್ಣ ತಪು್ಪ ಮೂಲ ಲೇಖಕನದ್ದಾಗುತ್ತದೆ. ಆದರೆ ಈ ಕುರಿತು ಗೂಗಲ್​ಗೂ ದೂರು ನೀಡಿದರೆ ಉತ್ತರ ಪ್ರಕಟವಾಗದಂತೆ ತಡೆಯುತ್ತದೆ.

    ಈ ವಿಚಾರ ಅಖಂಡ ಕನ್ನಡ ಮನಸ್ಸುಗಳಿಗೆ ನೋವನ್ನುಂಟು ಮಾಡಿದೆ. ಗೂಗಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

    | ಟಿ. ಎಸ್. ನಾಗಾಭರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

    ತಾಯಿಗೆ ಸಮಾನವಾದ ಭಾಷೆಯನ್ನು ಗೂಗಲ್​ನವರು ಅವಮಾನಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಸಂಸ್ಥೆಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು.

    | ಡಾ. ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

    ವಿಶ್ವದಾದ್ಯಂತ ವೀಕ್ಷಿಸುವ ಗೂಗಲ್​ನಲ್ಲಿ ಕನ್ನಡ ಭಾಷೆಯನ್ನು ‘ಕೊಳಕು ಭಾಷೆ’ ಎಂದು ಹೇಳಿರುವುದು ವಿಷಾದನೀಯ. ಇಂಥ ತಪು್ಪ ಪುನರಾವರ್ತನೆ ಆಗಬಾರದು.

    | ಡಾ. ಸಿ. ಸೋಮಶೇಖರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

    ಇದು ಖಂಡನೀಯ ಸಂಗತಿ. ಗೂಗಲ್ ಆಗಲಿ, ಬೇರೆ ಯಾರೇ ಆಗಲಿ ಕನ್ನಡ ಭಾಷೆ ಬಗ್ಗೆ ಗೌರವವಿಲ್ಲದೆ ವರ್ತಿಸಿದರೆ ಅಥವಾ ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

    | ಅರವಿಂದ ಲಿಂಬಾವಳಿ ಕನ್ನಡ ಮತ್ತು ಸಂಸ್ಕೃತಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts