More

    ಕೈ ಕೊಟ್ಟು, ಬಿಜೆಪಿಯನ್ನೂ ಸೇರದ ಸಚಿನ್​ ಪೈಲಟ್​ ಪ್ರಾದೇಶಿಕ ಪಕ್ಷ ರಚಿಸಿ ಗೆಲ್ಲುತ್ತಾರಾ?

    ಜೈಪುರ: ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸಚಿನ್​ ಪೈಲಟ್​ ಆ ಪಕ್ಷಕ್ಕೆ ಕೈ ಕೊಟ್ಟಿದ್ದಾರೆ. ಇತ್ತ ಬಿಜೆಪಿ ಹಿಡಿಯಲು ನಿರಾಕರಿಸುತ್ತಿದ್ದಾರೆ. ಅಂದರೆ ಕಾಂಗ್ರೆಸ್​ ಮತ್ತು ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ರಚಿಸಿ ರಾಜಸ್ಥಾನದಲ್ಲಿ ಅದನ್ನು ಯಶಸ್ವಿಯಾಗಿ ಸಂಘಟಿಸಿ, ಅಧಿಕಾರಕ್ಕೆ ಏರುತ್ತಾರಾ? ಸದಾ ರಾಜ್ಯದ ಮತದಾರರು ಪೈಲಟ್​ ಅವರ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರಾ ಎಂಬ ಪ್ರಶ್ನೆಗಳು ಈಗ ಎಲ್ಲರನ್ನೂ ಕಾಡುತ್ತಿದೆ.

    ಸ್ವಾತಂತ್ರ್ಯ ನಂತರದಲ್ಲಿ ರಾಜಸ್ಥಾನದ ರಾಜಕೀಯವನ್ನು ಅವಲೋಕಿಸಿದಾಗ ಅಲ್ಲಿನ ಮತದಾರರು ರಾಷ್ಟ್ರೀಯ ಪಕ್ಷಗಳಲ್ಲೇ ಹೆಚ್ಚು ನಂಬಿಕೆ ಇರಿಸಿರುವುದು ಗೊತ್ತಾಗುತ್ತದೆ. ಒಮ್ಮೆ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದರೆ, ಮತ್ತೊಮ್ಮೆ ಕಾಂಗ್ರೆಸ್​, ಮಗದೊಮ್ಮೆ ಬಿಜೆಪಿ ಪಕ್ಷವನ್ನೇ ಬೆಂಬಲಿಸುತ್ತಾ ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

    ಕಾಂಗ್ರೆಸ್​ ಮತ್ತು ಬಿಜೆಪಿಗಳಲ್ಲಿ ಪ್ರಭಾವಿ ನಾಯಕರೆನಿಸಿದ್ದ ಘನಶ್ಯಾಮ್​ ತಿವಾರಿ, ಕಿರೋರಿಲಾಲ್​ ಮೀನಾ, ದೇವಿ ಸಿಂಗ್​ ಭಾಟಿ, ಲೋಕೇಂದ್ರ ಸಿಂಗ್​ ಕಲ್ವಿ ಮತ್ತು ಹನುಮಾನ್​ ಬೇನಿವಾಲ್​ ಕೂಡ ಕಾಂಗ್ರೆಸ್​ ಮತ್ತು ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳನ್ನು ರಚಿಸಿ ಹಿನ್ನಡೆ ಅನುಭವಿಸಿದವರೇ.

    2018ರ ವಿಧಾನಸಭೆ ಚುನಾವಣೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಬಿಜೆಪಿಯಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿದ್ದ ಘನಶ್ಯಾಮ್​ ತಿವಾರಿ ಅವರು ಅಂದಿನ ಸಿಎಂ ವಸುಂಧರರಾಜೇ ವಿರುದ್ಧ ಸಿಡಿದೆದ್ದು ಭಾರತ್​ ವಾಹಿನಿ ಪಾರ್ಟಿ ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಿದರು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನಪ್ರಿಯ ಮುಖಂಡ ಎನಿಸಿಕೊಂಡಿದ್ದರೂ ತಮ್ಮ ಪಕ್ಷಕ್ಕೆ ಒಂದೇ ಒಂದು ಸ್ಥಾನ ಗಳಿಸಿಕೊಳ್ಳಲು ಅವರು ವಿಫಲರಾದರು. ಜನರಿಂದ ತಿರಸ್ಕೃತಗೊಂಡ ಅವರು ಇದೀಗ ಕಾಂಗ್ರೆಸ್​ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಅರ್ಜುನ್​ -ಮಲೈಕಾ ಮದುವೆಗೆ ಸೋನಮ್​ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?

    ಇದಕ್ಕೂ ಮೊದಲು ಕಿರೋರಿ ಲಾಲ್​ ಮೀನಾ ಕೂಡ 2013ರಲ್ಲಿ ಬಿಜೆಪಿಯಿಂದ ಸಿಡಿದು ಹೊರಬಂದು ಮಾಜಿ ಲೋಕಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರ ನ್ಯಾಷನಲ್​ ಪೀಪಲ್ಸ್​ ಪಾರ್ಟಿಯನ್ನು ರಾಜಸ್ಥಾನದಲ್ಲಿ ಸಂಘಟಿಸಲು ಯತ್ನಿಸಿದ್ದರು. ಕಾಂಗ್ರೆಸ್​ ಮತ್ತು ಬಿಜೆಪಿಗೆ ಪರ್ಯಾಯವಾದ ಮೂರನೇ ರಾಜಕೀಯ ಪಕ್ಷ ಇದಾಗಲಿದೆ ಎಂದೇ ಬಿಂಬಿಸಿದ್ದರು. ಆದರೆ, ತಮ್ಮ ಪ್ರಯತ್ನ ವಿಫಲವಾದ ಬಳಿಕ 2018ರಲ್ಲಿ ಬಿಜೆಪಿಗೆ ಮರಳಿದ್ದರು. ಸದ್ಯ ಅವರು ಬಿಜೆಪಿಯ ಸಂಸತ್​ ಸದಸ್ಯರಾಗಿದ್ದಾರೆ.

    ಹೀಗೆ ಹಿರಿಯ ಮುಖಂಡರೆಲ್ಲರೂ ವಿಫಲರಾಗುತ್ತಿದ್ದರೂ ಪಾಠ ಕಲಿಯದ ಜಾಟ್​ ಸಮುದಾಯದ ಕಿರಿಯ ಮುಖಂಡ ಹನುಮಾನ್​ ಬೇನಿವಾಲ್​ 2018ರಲ್ಲಿ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ ಸ್ಥಾಪಿಸಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಮುದಾಯದ ಯುವಪೀಳಿಗೆಯವರಲ್ಲಿ ಅತ್ಯಂತ ಜನಪ್ರಿಯ ಮುಖಂಡ ಎನಿಸಿಕೊಂಡಿದ್ದರೂ ತಮ್ಮ ಪಕ್ಷಕ್ಕೆ ಮೂರು ಸ್ಥಾನ ಗಳಿಸಿಕೊಳ್ಳುವಷ್ಟರಲ್ಲಿ ಏದುಸಿರು ಬಿಟ್ಟಿದ್ದರು. ಕೊನೆಗೆ ಅವರು ಬಿಜೆಪಿಯೊಂದಿಗೆ ಕೈಜೋಡಿಸಿ 2019ರಲ್ಲಿ ತಮ್ಮ ಪಕ್ಷದಿಂದ ಒಬ್ಬ ಸಂಸತ್​ ಸದಸ್ಯ ಚುನಾಯಿತನಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

    ಪರಿಸ್ಥಿತಿ ಹೀಗಿರುವಾಗ ರಾಜಸ್ಥಾನದಲ್ಲಿ ಮೂರನೇ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಸಂಘಟಿಸಿ ಅದನ್ನು ಅಧಿಕಾರಕ್ಕೆ ತರುತ್ತೇನೆ ಎನ್ನುವುದು ಮೂರ್ಖತನವಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಪೈಲಟ್​ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿದೆ.

    ಕರೊನಾ ಸೋಂಕು ತಗುಲಿದ್ದ ಸುಮಲತಾ ಅಂಬರೀಶ್, ರಾಕ್​ಲೈನ್​ ವೆಂಕಟೇಶ್​ ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts