More

    180 ಆಯ್ತು, ಈ ವರ್ಷ 200ರ ಕ್ಲಬ್​ ಸೇರುತ್ತದಾ ಕನ್ನಡ ಚಿತ್ರರಂಗ?

    ಬೆಂಗಳೂರು: ಈ ವರ್ಷ ಮುಗಿಯುವುದಕ್ಕೆ ಇನ್ನು 25 ದಿನಗಳು ಮಾತ್ರ ಬಾಕಿ ಇವೆ. ಉಳಿದಿರುವ ದಿನಗಳಲ್ಲಿ ಒಂದಷ್ಟು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈಗಿರುವ ಪ್ರಶ್ನೆಯೆಂದರೆ, ಕನ್ನಡ ಚಿತ್ರರಂಗ 2022ರಲ್ಲಿ 200ರ ಕ್ಲಬ್​ ಸೇರುತ್ತದಾ ಎಂದು?

    ಇದನ್ನೂ ಓದಿ: ‘ಬ್ಯಾಡ್​ ಮ್ಯಾನರ್ಸ್​’ ಮುಕ್ತಾಯ; 2023ರ ಫೆಬ್ರವರಿಯಲ್ಲಿ ಬಿಡುಗಡೆ

    ಕನ್ನಡ ಚಿತ್ರರಂಗದಲ್ಲಿ ವರ್ಷವೊಂದಕ್ಕೆ 200 ಪ್ಲಸ್​ ಚಿತ್ರಗಳು ಬಿಡುಗಡೆಯಾಗುವುದು ಹೊಸದೇನಲ್ಲ. ಆದರೆ, ಕಳೆದ ಎರಡು ವರ್ಷಗಳ ಕಾಲ ಕೋವಿಡ್​ನಿಂದ ಅದು ಸಾಧ್ಯವಾಗಿರಲಿಲ್ಲ. 2020ರಲ್ಲಿ ಮೊದಲ ಲಾಕ್​ಡೌನ್​ ಇದ್ದ ಕಾರಣ, ಆ ವರ್ಷ ಒಟ್ಟಾರೆ 100 ಚಿತ್ರಗಳು ಸಹ ಬಿಡುಗಡೆಯಾಗಿರಲಿಲ್ಲ. ಇನ್ನು, ಕಳೆದ ವರ್ಷ 100ರ ಗಡಿ ಕಷ್ಟಪಟ್ಟು ದಾಟಿತ್ತು. ಎರಡು ವರ್ಷಗಳಲ್ಲಿ ಮುಂದೂಡಲ್ಪಟ್ಟ ಚಿತ್ರಗಳಲ್ಲಿ ಬಹುತೇಕ ಚಿತ್ರಗಳು ಈ ವರ್ಷ ಬಿಡುಗಡೆಯಾದವು. ಹಾಗಾಗಿ, ಈ ವರ್ಷ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ 200 ಮೀರಬಹುದು ಎಂದು ಅಂದಾಜಿಸಲಾಗಿತ್ತು.

    ಅದಕ್ಕೆ ಸರಿಯಾಗಿ, ಡಿಸೆಂಬರ್​ ಮೊದಲ ವಾರದವರೆಗೂ ಕನ್ನಡ ಚಿತ್ರರಂಗದಲ್ಲಿ 180 ಚಿತ್ರಗಳು ಬಿಡುಗಡೆಯಾಗಿವೆ. ಇನ್ನು, ಉಳಿದಿರುವ ನಾಲ್ಕು ವಾರಗಳಲ್ಲಿ 20 ಚಿತ್ರಗಳು ಬಿಡುಗಡೆಯಾಗಬೇಕಿವೆ. ಈ ಶುಕ್ರವಾರ (ಡಿ.9) ‘ವಿಜಯಾನಂದ’ ಸೇರಿದಂತೆ 11 ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬ ಸುದ್ದಿ ಇದೆ. ಇದರಲ್ಲಿ ಒಂದೆರೆಡು ಚಿತ್ರಗಳು ಹಿಂದಕ್ಕೆ ಸರಿಯುವ ಸಾಧ್ಯತೆಯೂ ಇದೆ. ಡಿ. 16ರಂದು ‘ಶಂಭೋ ಶಿವ ಶಂಕರ’, ‘ಟೆಂಪರ್​’ ಮತ್ತು ‘ಮೊದಲ ಮಿಡಿತ’ ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬ ಸುದ್ದಿ ಇದೆ. ಡಿ. 23ಕ್ಕೆ ಶಿವರಾಜಕುಮಾರ್​ ಅಭಿನಯದ 125ನೇ ಚಿತ್ರ ‘ವೇದ’ ಬಿಡುಗಡೆಯಾದರೆ, ಡಿ. 30ಕ್ಕೆ ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಮತ್ತು ‘ಪದವಿಪೂರ್ವ’ ಚಿತ್ರಗಳು ಬಿಡುಗಡೆಯಾಗಲಿವೆ.

    ಇದನ್ನೂ ಓದಿ: ಕನ್ನಡದ ಹಿರಿಯ ನಟ ಮಂದೀಪ್ ರೈಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

    ಇವೆಲ್ಲವನ್ನೂ ಕೂಡಿಸಿದರೆ 195 ಪ್ಲಸ್​ ಚಿತ್ರಗಳಾಗುತ್ತವೆ. ಕೊನೆಯ ಕ್ಷಣದಲ್ಲಿ ಒಂದಷ್ಟು ಚಿತ್ರಗಳು ಹೊಸದಾಗಿ ಸೇರ್ಪಡೆಯಾದರೆ, ಆಗ ಮಾತ್ರ ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ದಾಟಿದಂತಾಗುತ್ತದೆ. ಇಲ್ಲವಾದರೆ, ಬಿಡುಗಡೆಯಾಗುವುದಕ್ಕೆ ನೂರಾರು ಚಿತ್ರಗಳಿದ್ದರೂ, ಈ ವರ್ಷವೂ 200ರ ಕ್ಲಬ್​ ಮಿಸ್​ ಆಗುತ್ತದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳ ಬಿಡುಗಡೆ ಘೋಷಣೆಯಾಗಿ, ಈ ವರ್ಷ ಕನ್ನಡ ಚಿತ್ರರಂಗ 200ರ ಕ್ಲಬ್​ ಸೇರುತ್ತದಾ ಎಂಬ ಕುತೂಹಲ ಕನ್ನಡ ಚಿತ್ರರಂಗದಲ್ಲಿದೆ.

    ‘ದಿ ಕಾಶ್ಮೀರ್​ ಫೈಲ್ಸ್​’ ಅಸಭ್ಯವಾಗಿತ್ತು ಎಂದ ಲ್ಯಾಪಿಡ್​ಗೆ ಜ್ಯೂರಿ ಸದಸ್ಯರ ಬೆಂಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts